
ದಾವಣಗೆರೆ : ಹಾಸ್ಯ ನಟ ಬ್ಯಾಂಕ್ ಜನಾರ್ಧನ (75) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.ಅವರ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬ್ಯಾಂಕ್ ಬಣ್ಣ ಹಚ್ಚಿದ್ದರು. ನಾಟಕಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು.
ಬ್ಯಾಂಕ್ ಜನಾರ್ಧನ ಚಿತ್ರದುರ್ಗದ ಹೊಳಲ್ಕೆರೆಯವರು
ಬ್ಯಾಂಕ್ ಜನಾರ್ಧನ ಹೊಳಲ್ಕೆರೆಯಲ್ಲಿ 1949ರಲ್ಲಿ ಜನಿಸಿದರು. ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್ ಆಪರೇಟರ್ ಆಗಿ ಕೆಲಸ ನಿರ್ವಹಿಸಿದರು. ಜೊತೆಗೆ ನಾಟಕಗಳಲ್ಲಿಯೂ ಬಣ್ಣ ಹಚ್ಚಿ ನಟಿಸುತ್ತಿದ್ದರು. ಒಮ್ಮೆ ಹೊಳಲ್ಕೆರೆಗೆ ಬಂದಿದ್ದ ಧೀರೇಂದ್ರ ಗೋಪಾಲ್ ಅವರು ಇವರ ನಾಟಕಗಳನ್ನು ನೋಡಿ ಬೆಂಗಳೂರಿಗೆ ಬರುವಂತೆ ಚಲನಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದರು. ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದು ಧೀರೇಂದ್ರ ಗೋಪಾಲ್ ಅವರನ್ನು ಭೇಟಿ ಮಾಡಿದರು. ನಂತರದ ದಿನಗಳಲ್ಲಿ ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಅವರಿಗೆ ಬಾಡಿಗಾರ್ಡ್ ಪಾತ್ರ ಮಾಡಿದರು
ಬ್ಯಾಂಕ್ ಬ್ಯಾಲೇನ್ಸ್ ಇರದ ಬ್ಯಾಂಕ್ ಜನಾರ್ಧನ
ಬ್ಯಾಂಕ್ ಜನಾರ್ಧನ ಆರ್ಥಿಕವಾಗಿ ಹೆಚ್ಚು ಗಳಿಸಲಿಲ್ಲ. ಇವತ್ತಿನ ಪೋಷಕ ಕಲಾವಿದರು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ. ನಮ್ಮ ಕಾಲದಲ್ಲಿ ಅಷ್ಟೆಲ್ಲಾ ಕೊಡುತ್ತಿರಲಿಲ್ಲ. ನನ್ನ ಹೆಸರಿನಲ್ಲಿ ಬ್ಯಾಂಕ್ ಇದೆ. ಆದರೆ ನನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಏನಿಲ್ಲ ಎಂದು ಸ್ವತ: ಜನಾರ್ಧನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕೋವಿಡ್ ಸಮಯದಲ್ಲಿ ಹಾಸ್ಯನಟ ಬ್ಯಾಂಕ್ ಜನಾರ್ಧನ್ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಪೋಷಕ ಕಲಾವಿದರಿಗೆ ಹೆಚ್ಚು ಸಂಭಾವನೆ ಕೊಡುತ್ತಾರೆ. ನಮ್ಮ ಕಾಲದಲ್ಲಿ ಇರಲಿಲ್ಲ, ಆಗ ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಬಜೆಟ್ ಇರುತ್ತಿರಲಿಲ್ಲ. ಈಗ ನಾವು ಹೆಸರು ಮಾಡಿದ್ದರೆ ಹೆಚ್ಚು ಹಣ ಸಂಪಾದನೆ ಮಾಡಬಹುದಿತ್ತು. ಆ ಸಮಯದಲ್ಲಿ ಹೀರೊ ಸಂಭಾವನೆ 1 ಲಕ್ಷ ರೂ. ಇರ್ತಿತ್ತು. ಇನ್ನು ನಮಗೆ ಎಷ್ಟು ಎಂದು ನೀವೆ ಯೋಚಿಸಿ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಬ್ಯಾಂಕ್ ಉದ್ಯೋಗದಲ್ಲಿದ್ದೇ ಇಟ್ಟುಕೊಂಡೇ ನಟನೆ
ಸಾಕಷ್ಟು ಬಾರಿ ಅವಕಾಶ ಕೊಟ್ಟರೆ ಸಾಕು ಎಂದು ನಟಿಸಿ ಬರುತ್ತಿದ್ದೆ. ನಿರ್ಮಾಪಕರು, ನಿರ್ದೇಶಕರ ಜೊತೆಗಿನ ಉತ್ತಮ ಒಡನಾಟದ ಕಾರಣಕ್ಕೆ ಹಣಕ್ಕೆ ಬೇಡಿಕೆ ಇಡದೇ ನಟಿಸಿ ಬರ್ತಿದ್ದೆ. ಆರಂಭದಲ್ಲಿ ಬ್ಯಾಂಕ್ ಕೆಲಸ ಮಾಡಿಕೊಂಡೇ ಜನಾರ್ಧನ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಅವಕಾಶಗಳು ಹೆಚ್ಚಾದಾಗ ಅನಿವಾರ್ಯವಾಗಿ ಬ್ಯಾಂಕ್ ಕೆಲಸ ಬಿಡಬೇಕಾಯಿತು. 90ರ ದಶಕದ ಆರಂಭದಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಜನಾರ್ಧನ್ 11 ವರ್ಷಗಳ ಬಳಿಕ ಕೆಲಸ ಬಿಟ್ಟು ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.
ಅವಕಾಶಗಳು ಕಮ್ಮಿ ಆಗಿ ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಕೆಲಸ ಬಿಡಬಾರದಿತ್ತು ಎಂದು ಭಾವಿಸಿದ್ದು ಇದೆ. ಹಿರಿಯ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ, ಅವಕಾಶ ಕೊಡುತ್ತಿಲ್ಲ. ಜಗ್ಗೇಶ್, ವಿಷ್ಣುವರ್ಧನ್, ಅಂಬರೀಶ್ ಅವರು ನಮ್ಮನ್ನು ಗಮನಿಸುತ್ತಿದ್ದರು. ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತಿದ್ದರು. ಇತ್ತೀಚೆಗೆ ಅದು ಇಲ್ಲ ಎಂದು ಬ್ಯಾಂಕ್ ಜನಾರ್ಧನ್ ಬೇಸರ ವ್ಯಕ್ತಪಡಿಸಿದ್ದರು.
ಅಣ್ಣಾವ್ರು ನನ್ನ ಅಭಿಮಾನಿ
‘ಶ್’ ಸಿನಿಮಾ ನೋಡಿ ಅಣ್ಣಾವ್ರು ಕೂಡ ಬ್ಯಾಂಕ್ ಜನಾರ್ಧನ್ ಅಭಿಮಾನಿ ಆಗಿಬಿಟ್ಟಿದ್ದರು. ‘ಓಂ’ ಚಿತ್ರವನ್ನು ನಿರ್ಮಾಣ ಮಾಡುವ ಮುನ್ನ ಉಪೇಂದ್ರ ನಿರ್ದೇಶನದ ಸಿನಿಮಾ ನೋಡಬೇಕು ಎಂದು ಅಣ್ಣಾವ್ರ ಹೇಳಿದಾಗ ‘ಶ್’ ಸಿನಿಮಾ ತೋರಿಸಲಾಗಿತ್ತು. ಮೂರು ಬಾರಿ ಸಿನಿಮಾ ನೋಡಿ ಅಣ್ಣಾವ್ರ ಮೆಚ್ಚಿಕೊಂಡಿದ್ದರು. ಅದರಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಬೈಯ್ಯುವ ಸನ್ನಿವೇಶವನ್ನು ಡಾ. ರಾಜ್ ಬಹಳ ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಬ್ಯಾಂಕ್ ಜನಾರ್ಧನ್ ಅವರಿಗೆ ಅಣ್ಣಾವ್ರು ಹೇಳಿದ್ದರು.
ಹೆಸರಿನ ಜೊತೆ ‘ಬ್ಯಾಂಕ್’
ಜನಾರ್ಧನ್ ಅವರು ಬ್ಯಾಂಕ್ ನೌಕರನಾಗಿದ್ದುಕೊಂಡೇ ಚಿತ್ರಗಳಲ್ಲಿ ನಟಿಸುತ್ತಿದ್ದರು. ಜನಾರ್ಧನ್ ಎಂಬ ಹೆಸರಿನ ಸಾಕಷ್ಟು ಜನ ಆಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ವಿಭಿನ್ನವಾಗಿರಲಿ, ಗುರ್ತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಪಿಆರ್‌ಓ ಆಗಿದ್ದ ನಾಗೇಂದ್ರ ಅವರು ಇನ್ನು ಮುಂದೆ ನಿಮ್ಮ ಹೆಸರನ್ನು ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಳ್ಳಿ ಎಂದಿದ್ದರು. ಅವರ ಸಲಹೆಯಂತೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಖಾಯಂ ಆಗಿತ್ತು.
‘ಅಜಗಜಾಂತರ’ದಿಂದ ತಿರುವು
ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡೇ ನಾಟಕಗಳಲ್ಲಿ ಜನಾರ್ಧನ್ ನಟಿಸುತ್ತಿದ್ದರು. ‘ಗೌಡ್ರ ಗದ್ದಲ’ ನಾಟಕದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. ಬಳಿಕ ನಾಟಕ ಕಂಪನಿಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದ್ದರು. ಖ್ಯಾತ ಹಾಸ್ಯನಟ ಧೀರೇಂದ್ರ ಗೋಪಾಲ್ ಸಹಾಯದಿಂದ ‘ಊರಿಗೆ ಉಪಕಾರಿ’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ‘ಅಜಗಜಾಂತರ’ ಚಿತ್ರದ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ಬೇಡಿಕೆ ಹೆಚ್ಚಾಗಿತ್ತು.
ಹೃದಯಾಘಾತವಾಗಿತ್ತು
2023ರ ಸೆಪ್ಟಂಬರ್ 26ರಂದು ಹೃದಯಘಾತವಾಗಿತ್ತು. ನಂತರ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬ್ಯಾಂಕ್ ಜನಾರ್ಧನ್ 1991ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತದನಂತರ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ಅಧಿಕ ಸಿನಿಮಾಗಳಲ್ಲಿ ಜನಾರ್ಧನ್ ನಟಿಸಿದ್ದಾರೆ. ಹಿರಿತೆರೆ ಜೊತೆ ಕಿರುತೆರೆಯಲ್ಲಿಯೂ ಬ್ಯಾಂಕ್ ಜನಾರ್ಧನ್ ಕೆಲಸ ಮಾಡಿದ್ದಾರೆ. ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಬ್ಯಾಂಕ್ ಜನಾರ್ಧನ್ ನಟಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಅವರ ಸಮಕಾಲೀನರು ಅವರೊಂದಿಗೆ ಮಾತ್ರವಲ್ಲದೆ, ತಮ್ಮ ನಂತರ ಬಂದ ಹಾಸ್ಯನಟರಾದ ಸಾಧುಕೋಕಿಲ, ಬುಲೆಟ್ ಪ್ರಕಾಶ್ ಸೇರಿದಂತೆ ಇನ್ನೂ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು. 2005ರ ನ್ಯೂಸ್, 1993ರ ಶ್ ಹಾಗೂ 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದಲ್ಲಿನ ಇವರ ಪಾತ್ರಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
1991ರಲ್ಲಿ ಕಾಶಿನಾಥ್ ಅವರ ಅಜಗಜಾಂತರ ಚಿತ್ರದ ಮೂಲಕ ಬ್ಯಾಂಕ್ ಜನಾರ್ಧನ್, ಕನ್ನಡ ಚಿತ್ರರಂಗಕ್ಕೆ ಪೋಷಕ ಕಲಾವಿದರಾಗಿ ಕಾಲಿಟ್ಟಿದ್ದರು