ಕಲಬುರಗಿ: ಶಾಸಕ ಬಸವನಗೌಡ ಯತ್ನಾಳ್ ಶಾಸಕ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಪಂಚಮಸಾಲಿ ಮಹಾಸಭಾದ ಜಿಲ್ಲಾ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚಮಸಾಲಿ ದೀಕ್ಷ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಹಕ್ಕೋತ್ತಾಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಮೂವರ ಕುಟುಂಬಗಳು ನಾಟಕ ಕಂಪನಿಗಳಿದ್ದಂತೆ. ತಮ್ಮ ಮಕ್ಕಳಿಗಾಗಿ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ. ಅಲ್ಲದೆ ಲೂಟಿ ಮಾಡಲು ನಿರಂತರವಾಗಿ ಅಧಿಕಾರ ಅನುಭವಿಸಿದರೆ ಉಳಿದ ಲಿಂಗಾಯತರು ಗಂಟಿ ಹೊಡಿಬೇಕಾ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ಈ ಮೂರು ಕುಟುಂಬಗಳು ಇಷ್ಟು ದಿನ ವೀರಶೈವ ಲಿಂಗಾಯತರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡವೇ ಹೊರತು ಸಮಾಜಕ್ಕಾಗಿ ಏನು ಮಾಡಲಿಲ್ಲ.
ಮೂರ್ನಾಲ್ಕು ಸ್ವಾಮೀಜಿಗಳು ಹಣ, ಕಾರಿಗಾಗಿ ಈ ಮೂರು ಕುಟುಂಬದವರ ಬೆನ್ನು ಬಿದ್ದಿದ್ದಾರೆ. ನಿತ್ಯ ಬೆಳಿಗ್ಗೆ ಲಿಂಗ ಪೂಜೆ ಮಾಡುವುದು ಬಿಟ್ಟು, ಇವರ ಮಕ್ಕಳ ಪರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಅವರಿಗೆ ಫೋನ್ ಮಾಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳಿಂದ ಸಮಾಜಕ್ಕೆ ಶೂನ್ಯ ಕೊಡುಗೆ’ ಎಂದು ಹರಿಹಾಯ್ದರು.
ಬೇಡವಾದವರನ್ನು ಸೋಲಿಸುವ ದಂಧೆ
ಅಪ್ಪ–ಮಗ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರಗೆ ಪಕ್ಷದಲ್ಲಿ ತಮಗೆ ಬೇಡವಾದ ಅಭ್ಯರ್ಥಿಗಳನ್ನು ಸೋಲಿಸುವುದೇ ದಂಧೆಯಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಎಸ್‌ವೈ ಕುಟುಂಬದ ವಿರುದ್ಧ ಹರಿಹಾಯ್ದರು. ‘ನನ್ನನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ. ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬ ಮಗ ಕ್ಯಾಬಿನೆಟ್ ಮಂತ್ರಿಯಾಗ ಬೇಕು, ಇನ್ನೊಬ್ಬ ಮುಖ್ಯಮಂತ್ರಿಯಾಗಬೇಕು. ಇದು ಯಡಿಯೂರಪ್ಪ ಅವರ ಕೊನೆ ಕನಸು’ ಎಂದು ಹರಿಹಾಯ್ದರು.ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನೂ ಉದ್ಧಾರ ಮಾಡಿಲ್ಲ. ಅವರು ಲಿಂಗಾಯತರೇ ಅಲ್ಲ. ಅವರ ಹಿಂದೆ ಕೆಲವು ಸ್ವಾಮೀಜಿಗಳಿದ್ದಾರೆ. ಹಣ ನೀಡುತ್ತಾನೆ ಅಂತ ಸ್ವಾಮೀಜಿಗಳು ಆತನಿಗೆ ತಥಾಸ್ತು ಎನ್ನುತ್ತಾರೆ’ ಎಂದು ಏಕವಚನದಲ್ಲಿ ಟೀಕಿಸಿದ್ದಾರೆ.
ಒಬಿಸಿ ಘೋಷಿಸದೆ ಇದ್ದರೆ ಚುನಾವಣೆಯಲ್ಲಿ ತಕ್ಕ ಪಾಠ
ಲೋಕಸಭಾ ಚುನಾವಣಾ ನೀತಿ ಸಂಹಿತಿ ಜಾರಿಯಾಗುವ 24 ಗಂಟೆಗೂ ಮುನ್ನವೇ ಪಂಚಮಸಾಲಿ ದೀಕ್ಷ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಘೋಷಿಸದೆ ಇದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಉಪಸ್ಥಿತರಿದ್ದರು.