![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ:
ನಗರದ ಗಾಡಿಕೊಪ್ಪ ಪುರದಾಳು ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಕಾಲುವೆ ಪಕ್ಕದಲ್ಲಿರುವ ರೋಟರಿ ಬಯೋಡೈವರ್ಸಿಟಿ ಎರಡನೇ ಹಂತದ ಪಾರ್ಕ್ ಅಭಿವೃದ್ಧಿ ಹಾಗೂ ಪಾರ್ಕ್ ಸಂರಕ್ಷಣೆಗೆ ಅಮೇರಿಕಾ ಕ್ಯಾಲಿಫೋರ್ನಿಯಾದ ಮೊಡೆಸ್ಟೋ ರೋಟರಿ ಸಂಸ್ಥೆಯು 62 ಸಾವಿರ ಡಾಲರ್‌ಅನ್ನು ಗ್ಲೋಬಲ್ ಗ್ರ್ಯಾಂಟ್ ಮುಖಾಂತರ ಸಹಾಯಹಸ್ತ ನೀಡಿದೆ.
ಅಮೇರಿಕಾದ ಮೊಡೆಸ್ಟೋ ರೋಟರಿ ಕ್ಲಬ್‌ನ ಅಂತರಾಷ್ಟ್ರೀಯ ಸ್ಪಾನ್ಸರ್ ಅನಿಲ್ ಹಾಲಪ್ಪ ಮಾತನಾಡಿ, ನಮ್ಮ ಕ್ಲಬ್‌ನಲ್ಲಿ 250 ಸದಸ್ಯರಿದ್ದು, ಹಿಂದೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆ, ಸ್ಮಾರ್ಟ್ ಕ್ಲಾಸ್, ಶೌಚಗೃಹ, ನ್ಯಾಪ್ಕಿನ್ ಪ್ಯಾಡ್ ಬರ್ನರ್ ಹಾಗೂ ಶಾಲಾ ಅಭಿವೃದ್ಧಿಗೆ 20 ಸಾವಿರ ಡಾಲರ್ ನೀಡಿದ್ದು, ಸಮಾಜಮುಖಿ ಕಾರ್ಯಗಳಿಗೆ ಬಳಕೆಯಾಗಿದೆ. ಇದರಿಂದ ಪ್ರೇರಿತಗೊಂಡು ಈಗ ಪರಿಸರ ಸಂರಕ್ಷಣೆಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಬಯೋಡೈವರ್ಸಿಟಿ ಪಾರ್ಕ್ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್ ಮಾತನಾಡಿ, ಮೊಡೆಸ್ಟೋ ರೋಟರಿ ಕ್ಲಬ್ ನೀಡಿರುವ ನೆರವು ಪರಿಸರ ಸಂರಕ್ಷಣೆಯ ಶ್ರೇಷ್ಠ ಕಾರ್ಯಕ್ಕೆ ಸದ್ವಿನಿಯೋಗವಾಗಲಿದೆ. ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯದರ್ಶಿ ಆನಂದಮೂರ್ತಿ ಮಾತನಾಡಿ, ಶಿವಮೊಗ್ಗದ 8 ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಎಲ್ಲರೂ ಹೆಚ್ಚಿನ ಸಹಕಾರ ಮಾಡುತ್ತಿದ್ದಾರೆ ಎಂದರು. ಉಮೇಶ್ ಅವರು ಬಯೋಡೈವರ್ಸಿಟಿ ನಡೆದು ಬಂದ ಹಾದಿ ಕುರಿತು ವಿವರಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ರವೀಂದ್ರನಾಥ ಐತಾಳ, ಸುಂದರ್, ಭಾರತಿ ಚಂದ್ರಶೇಖರ್, ಮಂಜುನಾಥ್, ಕೆ.ಪಿ.ಶೆಟ್ಟಿ, ಜಗದೀಶ್, ರೋಟರಿ ಉತ್ತರ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು