ಎಸ್.ಎಂ.ಸುನೀಲ್ಕುಮಾರ್ ಸಿರಿಗೆರೆ.
ಗಂಭೀರವಾಗಿ ಗಮನಿಸುವಂತೆ ಬೆಳೆಯುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಒಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ತರಳಬಾಳು ಗುರುಗಳು ತಮ್ಮ ಹೆಸರಿಗೆ ತಕ್ಕ ಹಾಗೆ ತರಳರ-ವಿಶಾಲಾರ್ಥದಲ್ಲಿ ಎಲ್ಲ ಜನರ -ಬಾಳು ಬೆಳಗಿಸಲು ಶಿಕ್ಷಣ, ಕಲೆ, ಸಾಹಿತ್ಯ, ಧರ್ಮಗಳನ್ನು ಬಳಸಿಕೊಳ್ಳುತ್ತಿರುವ ಪರಿ ಸೋಜಿಗವುಂಟುಮಾಡುತ್ತದೆ.
ಮಠದ ಈ ಜನಪರ ಮಣಿಹಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಈ ಶ್ರೀಮಠದ 20ನೆಯ ಗುರುಗಳಾಗಿದ್ದ ಲಿಂ|| ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ (1914-1992)ಸಲ್ಲಬೇಕು.
ತರಳಬಾಳು ಜಗದ್ಗುರು ಬೃಹನಠದ ಮೂಲ ಪುರುಷ 12ನೆಯ ಶತಮಾನದಲ್ಲಿದ್ದ ಮರುಳಸಿದ್ಧ ಅಸ್ಪ*ಶ್ಯ ಕುಲದವನು. ಬೃಹನ್ಮಠವು ಪ್ರಾರಂಭದಿಂದಲೇ ಅಸ್ಪಶ್ಯತೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಲು, ಪ್ರಾಯಶಃ ಇದು ಕಾರಣವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯಲ್ಲಿ ಪ್ರಾರಂಭಿಸಿದ ಶಾಲೆ ಮತ್ತು ಉಚಿತ ವಿದ್ಯಾರ್ಥಿನಿಲಯಗಳು ಸಹಪಂಕ್ತಿ ಭೋಜನವನ್ನು ರೂಢಿಗೊಳಿಸಿ ಜಾತ್ಯತೀತತೆಯ ಪಾಠ ಕಲಿಸಿದವು
ಶ್ರೀಮಠದ ಬಾಗಿಲು ಅಸ್ಪಶ್ಯರಿಗೂ ಮುಕ್ತವಾಯಿತು. ಶಿಷ್ಯರ ಬಹಿಷ್ಕಾರದ ಬೆದರಿಕೆಗೂ ಬಗ್ಗದೆ ಅವರು, ಖ್ಯಾತ ಅರ್ಥಶಾಸ್ತ್ರಜ್ಞ-ಶಿಕ್ಷಣಶಾಸ್ತ್ರಜ್ಞ ಡಿ.ಎಂ.ನಂಜುಂಡಪ್ಪ ಅವರ ಊರು, ಚಿತ್ರದುರ್ಗ ಜಿಲ್ಲೆಯ ದೊಗ್ಗನಾಳಿನಲ್ಲಿ ಹರಿಜನರ ಮದುವೆಯಲ್ಲಿ ಭಾಗವಹಿಸಿದ್ದರು.ಭರಮಸಾಗರದಲ್ಲಿ ಮಸೀದಿಯನ್ನು ಉದ್ಘಾಟಿಸಿದರು. ತಮ್ಮ ಮಠದಲ್ಲಿ ಬ್ರಾಹ್ಮಣ ವರ್ಗದ ಕೂಡಲಿ ಶೃಂಗೇರಿ ಸ್ವಾಮಿಗಳ ಉತ್ಸವ ಮಾಡಿಸಿದ್ದರು. ಅವರ ಮುಂದಾಳ್ತನದಲ್ಲಿ ನಡೆದ ಅಂತರಜಾತೀಯ, ಅಂತರಧರ್ಮೀಯ, ವಿಧವಾ ವಿವಾಹಗಳು ಅನೇಕ.
ಗ್ರಾಮೀಣ ಜನರ ಅಭ್ಯುದಯವು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಮನಗಂಡಿದ್ದ ಸ್ವಾಮೀಜಿಯವರು ಸ್ವಾತಂತ್ರ್ಯಪೂರ್ವದಲ್ಲೇ, 1946ರಲ್ಲಿ ಸಿರಿಗೆರೆಯಲ್ಲಿ ಮೊದಲ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದರಲ್ಲದೆ 1962 ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕಿದರು.
ಇಂದು ಈ ಸಂಸ್ಥೆಯು ಮಧ್ಯ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ, ಶಿಶುವಿಹಾರದಿಂದ ಮೊದಲ್ಗೊಂಡು ಇಂಜನಿಯರಿಂಗ್ ಕಾಲೇಜಿನವರಿಗೆ, ಒಟ್ಟು 232 ಶಾಲಾ-ಕಾಲೇಜು-ಹಾಸ್ಟೆಲ್ಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ದೃಷ್ಠಿಯಿಂದ, ಸಂಸ್ಥೆಯ ಈ ಶಾಲಾಕಾಲೇಜುಗಳಲ್ಲಿ ಶೇ.90ರಷ್ಟು ಹಳ್ಳಿಗಾಡಿನಲ್ಲಿ ಸ್ಥಾಪನೆಯಾಗಿವೆ.
ಪೇಟೆ ಪಟ್ಟಣಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲಾಗದ ಗ್ರಾಮೀಣ ಬಡಮಕ್ಕಳ ಆಶಾಕಿರಣವಾಗಿ ಹೊರಹೊಮ್ಮಿದ ಈ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಇಂದು ಸು.50 ಸಾವಿರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯವಹಾರಿಕ, ಆಧ್ಯಾತ್ಮಿಕ-ಈ ಮೂರು ಶಿಕ್ಷಣಗಳನ್ನು ಕೊಡಬೇಕು ಎಂಬುದು ಶಿಕ್ಷಣದ ಬಗ್ಗೆ ಸ್ವಾಮೀಜಿಯ ಅವರಿಗಿದ್ದ ದೃಢ ನಿಲುವು. ಹೊಟ್ಟೆ ಇದ್ದವನು ಉಣ್ಣಬೇಕು, ರಟ್ಟೆ ಇದ್ದವನು ದುಡಿಯಬೇಕು, ನೆತ್ತಿ ಇದ್ದವನು ಓದಬೇಕು -ಇದು ಅವರ ಘೋಷವಾಕ್ಯವಾಗಿತ್ತು.
ಶ್ರೀಗಳವರು ವಚನ ಸಾಹಿತ್ಯದ ಪ್ರಕಟಣೆ-ಪ್ರಸಾರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರವಚನ, ಸಂಗೀತ, ನಾಟಕ, ಸಾಹಿತ್ಯ ಪ್ರಕಟಣೆಗಳ ಮುಖಾಂತರ ಶರಣರ ಜೀವನಾದರ್ಶಗಳು ಜನಮನದಲ್ಲಿ ಮೂಡುವಂತೆ ಅವರು ಮಾಡಿದ ವೈಚಾರಿಕ ಕ್ರಾಂತಿ ಮಹತ್ತರವಾದುದು.
ಈ ಉದ್ದೇಶಕ್ಕಾಗಿ ಅವರು ಅಕ್ಕನ ಬಳಗ, ಅಣ್ಣನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ, ಶರಣ ಸಮ್ಮೇಳನಗಳನ್ನು ಹುಟ್ಟು ಹಾಕಿದರು. ಅವರ ಆಶಯದಂತೆ ಬೇರೆ ಬೇರೆ ಕಡೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆಚರಣೆಯು ಇಂದಿಗೂ ಶರಣತತ್ವ ಪ್ರಚಾರದ ಬಹುದೊಡ್ಡ ಪ್ರಭಾವೀ ಮಾಧ್ಯಮವಾಗಿದೆ. ಕಾಲ, ಕಾಯಕ ಹಾಗೂ ಕಾಸುಗಳ ಮಹತ್ವವನ್ನು ತಮ್ಮ ಜೀವನುದ್ದಕ್ಕೂ ಅರಿತು. ಆಚರಿಸಿದವರು ಅವರು.
ಶ್ರೀ ತರಳಬಾಳು ಜಗದ್ಗರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈ ದಿನಚರಿಗಳನ್ನು ಅತ್ಯಂತ ಕಷ್ಟಪಟ್ಟು, ಅಚ್ಚುಕಟ್ಟಾಗಿ ಸಂಪಾದಿಸಿ *ಆತ್ಮ ನಿವೇದನೆ* ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಲಿಂಗೈಕ್ಯ ಶ್ರೀಗಳ ಮುಖ್ಯ ಕೃತಿಗಳು -ಶತಮಾನೋತ್ಸವ ಸಂದೇಶ, ಅಣ್ಣ ಬಸವಣ್ಣ ಹಾಗೂ ಮರಣವೇ ಮಹಾನವಮಿ, ಶರಣಸತಿ-ಲಿಂಗಪತಿ ಮತ್ತು ವಿಶ್ವಬಂಧು ಮರುಳಸಿದ್ಧ(ನಾಟಕಗಳು). ಸಾಯುವವರೆಗೆ ಅಕಾರ ಅನುಭವಿಸಬೇಕೆನ್ನುವ ಲೋಕರೂಢಿಗೆ ಅಪವಾದವೆಂಬಂತೆ ಶ್ರೀ ಸ್ವಾಮೀಜಿಯವರು ಇನ್ನೂ ಸದೃಢರಾಗಿದ್ದಾಗಲೇ ಸ್ವಯಂ ನಿವೃತ್ತಿ ಘೋಷಿಸಿ ಘನ ವಿದ್ವಾಂಸರಾದ ವೈಜ್ಞಾನಿಕ ಮನೋಭಾವದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ದಿನಾಂಕ : 11-2-1979 ರಂದು ಅಕಾರವನ್ನು ವಹಿಸಿಕೊಟ್ಟರು.
ತಮ್ಮ ಜೀವಿತದ ಅಂತಿಮ ದಿನಗಳನ್ನು ಹಳ್ಳಿಗಾಡಿನ ಹಳ್ಳಿಯೊಂದರ ತಡಿಯ ಆಶ್ರಮದಲ್ಲಿ ಶಾಂತವಾಗಿ ಕಳೆದು ದಿನಾಂಕ : 24-9-1992 ರಂದು ಇಹಲೋಕ ತ್ಯಜಿಸಿದರು. ಅವರ ಜೀವನಾದರ್ಶ ಇಂದು ಎಲ್ಲರ ಜೀವನದ ಬೆಳಕಾಗಿದೆ.
…..