ಶಿವಮೊಗ್ಗ; ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ, ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಸಂದೀಪ್ (30), ರಾಜು (28) ಹಾಗೂ ಚೇತನ್ (28) ನಾಪತ್ತೆಯಾದವರು. ಮಳೆಯಿಂದ ಶರಾವತಿ ತುಂಬಿದ್ದು, ಹೂಳು ಕೂಡ ಹೆಚ್ಚಿದೆ, ಆದರೂ ತೆಪ್ಪದಲ್ಲಿ ಇವರು ಹೋಗಿದ್ದರು ಎಂಬ ಮಾಹಿತಿ ಇದೆ. ಒಟ್ಟು ಐದು ಜನ ಹೋಗಿದ್ದು, ತೆಪ್ಪದಲ್ಲಿದ್ದ ಇಬ್ಬರು ಯುವಕರು ಈಜಿಕೊಂಡು ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂಬ ಮಾಹಿತಿ ಇದೆ. ಕಣ್ಮರೆಯಾದ ಯುವಕರು ಸ್ಥಳೀಯ ಸಿಗಂದೂರು, ಹುಲಿದೇವರಬನ, ಗಿಣಿವಾರ ಮೂಲದವರಾಗಿದ್ದಾರೆ. ತೆಪ್ಪದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಆಗಮಿಸುವ ವೇಳೆ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.
ಹೊಳೆ ಊಟಕ್ಕೆ ಹೋಗಿದ್ದರು
ಒಟ್ಟು ಐದು ಜನ ಮಧ್ಯಾಹ್ನ ನಡುಗಡ್ಡೆಯಲ್ಲಿ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಆಚೆಯ ದಡದಿಂದ ಈಚೆಗೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ. ಈ ಐವರಲ್ಲಿ ಇಬ್ವರು ವಿನಯ ಮತ್ತು ಯಶವಂತ ಈಜಿ ದಡ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕಾರ್ಗಲ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ನಾಪತ್ತೆಯಾಗಿರುವ ಯುವಕರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.ಕತ್ತಲು ಆವರಿಸಿದ್ದರಿಂದ ಶೋಧಕಾರ್ಯ ಬೆಳಿಗ್ಗೆ ಮುಂದುವರೆಯುವ ನಿರೀಕ್ಷೆ ಇದೆ.