ಕೆಂಪೇಗೌಡ ವೃತ್ತದಲ್ಲಿ ಸಂಭವಿಸಿದ ಅಪಘಾತ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿ ಬಂಧನ.
ಬೆಂಗಳೂರು:
ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನಿಲುಗಡೆ ಮಾಡದೇ ಪರಾರಿಯಾಗಿದ್ದ ಚಾಲಕ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಿವಾಸಿ ಕಾಜಾ ಮೊಹಿದ್ದೀನ್ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನ.13ರಂದು ಮಧ್ಯರಾತ್ರಿ 2ರ ಸುಮಾರಿಗೆ ಕೆಂಪೇಗೌಡ ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಶಶಿಕುಮಾರ್(20) ಮೃತಪಟ್ಟಿದ್ದರು.
ಬಾಗೇಪಲ್ಲಿಯ ಶಶಿಕುಮಾರ್ ಪೀಣ್ಯದ ಕಾರ್ಖಾನೆಯೊಂದರಲ್ಲಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿ ದ್ದರು. ಅಂದು ರಾತ್ರಿ ಪಾಳಿ ಕೆಲಸ ಮುಗಿಸಿದ್ದ ಶಶಿಕುಮಾರ್ ಮಧ್ಯರಾತ್ರಿ ಸ್ಕೂಟರ್‌ನಲ್ಲಿ ವೇಗವಾಗಿ ಬರುವಾಗ ಎದುರಿನಿಂದ ಬಂದ ಕಾರು ನೋಡಿ ಗಾಬರಿಗೊಂಡು ಆಯತಪ್ಪಿ ಬಿದ್ದಿದ್ದರು. ಆಗ ಶಶಿಕುಮಾರ್ ಮೇಲೆ ಕಾರು ಹರಿಸಿದ್ದ ಚಾಲಕ ಮೊಹಿದ್ದೀನ್ ಸ್ಥಳದಿಂದ ಪರಾರಿ ಆಗಿದ್ದ. ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಚನ್ನರಾಯಪಟ್ಟಣದಲ್ಲಿ ವಶ:
ಅಪಘಾತದ ಬಳಿಕ ಕಾರು ಚಾಲಕ ಚನ್ನರಾಯಪಟ್ಟಣಕ್ಕೆ ತೆರಳಿದ್ದ. ಮಾಹಿತಿ ಕಲೆಹಾಕಿದ ಸಂಚಾರ ವಿಭಾಗದ ಪೊಲೀಸರು, ಚನ್ನರಾಯಪಟ್ಟಣಕ್ಕೆ ತೆರಳಿ ಅಲ್ಲಿ ವಶಕ್ಕೆ ಪಡೆದುಕೊಂಡು ಬಂಧಿಸಿದರು.
‘ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಕಾರಿನ ನೋಂದಣಿ ಸಂಖ್ಯೆ ಪತ್ತೆ ಆಗಿರಲಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯಲ್ಲೂ ಅದು ಸೆರೆ ಆಗಿರಲಿಲ್ಲ. ಕಾರಿನ ಹಿಂಬದಿಯಲ್ಲಿ ಸ್ಟಿಕರ್‌ವೊಂದನ್ನು ಅಂಟಿಸಲಾಗಿತ್ತು. ಕಾರಿನ ಒಂದು ಬಾಗಿಲಿಗೆ ಮಾತ್ರ ಸೇಫ್ಟಿ ಗಾರ್ಡ್ ಇರುವುದು ಪತ್ತೆಯಾಗಿತ್ತು. ನಂತರ, ಕಾರಿನ ಬಲಭಾಗದ ಮುಂದಿನ ಚಕ್ರಕ್ಕೆ ಮಾತ್ರ ವ್ಹೀಲ್ ಕ್ಯಾಪ್ ಇತ್ತು. ಹಿಂಬದಿ ಚಕ್ರಕ್ಕೆ ವ್ಹೀಲ್ ಕ್ಯಾಪ್ ಇರಲಿಲ್ಲ. ಕಾರಿನ ಗ್ಲಾಸಿನ ಮೇಲೆ ಸನ್‌ಗಾರ್ಡ್ ಇತ್ತು. ಇದು ಕೆಲವು ಸಿ.ಸಿ.ಟಿ.ವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು.
ಈ ಸುಳಿವುಗಳನ್ನು ಆಧರಿಸಿ ಕಾರನ್ನು ಪತ್ತೆ ಹಚ್ಚಲಾಯಿತು’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.
ಘಟನೆ ನಡೆದಿದ್ದ ಸ್ಥಳದಿಂದ ಪಾರ್ಲೆಜೀ ಟೋಲ್ವರೆಗೆ 200ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಯಿತು. ಮಂಜುನಾಥ್ ಅವರಿಗೆ ಸೇರಿದ ಕಾರನ್ನು ಮೊಹಿದ್ದೀನ್ ಓಡಿಸುತ್ತಿದ್ದ ಎಂದು ಪೊಲೀಸರು ಹೇಳಿದರು.