ದಾವಣಗೆರೆ.ಮೇ.೨೦: ಹುಬ್ಬಳ್ಳಿ ನಗರದ ನೇಹಾ ಹಿರೇಮಠ್, ಅಂಜಲಿ ಅಂಬಿಗರ ಅವರನ್ನು ಹತ್ಯೆಗೈದ ಆರೋಪಿಗಳನ್ನು ಹಾಗೂ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹಣಮಂತನ ಮೇಲೆ ಹಲ್ಲೆ ಮಾಡಿರುವ ಹಲ್ಲೆಕೋರರನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಲು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಆಶ್ರಯದಲ್ಲಿ ಮಡಿವಾಳ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಿಂದ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಸಮಾಜದ ಕಾರ್ಯಾಧ್ಯಕ್ಷರಾದ ಹೆಚ್.ಜಿ ಉಮೇಶ್ ಮಾತನಾಡಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ, ಹತ್ಯೆ ಹೆಚ್ಚಾಗುತ್ತಿವೆ. ಪ್ರೀತಿಯ ಹೆಸರಿನಲ್ಲಿ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರನ್ನು ಕಾಲೇಜು ಆವರಣದಲ್ಲಿ ದುಷ್ಕರ್ಮಿ ಫಯಾಜ್ ಹಲವಾರು ಬಾರಿ ಚಾಕುವಿನಿಂದ ಇರಿದುಕೊಲೆ ಮಾಡಿದ್ದು, ಇಡೀ ರಾಜ್ಯವೇ ಭಯಪಡುವಂತಾಗಿದೆ ಎಂದರು.

ಇದಲ್ಲದೇ ಹುಬ್ಬಳ್ಳಿಯಲ್ಲೇ ವಿಶ್ವ ಎಂಬಾತ ಅಂಜಲಿ ಅಂಬಿಗರ ಎನ್ನುವ ಯುವತಿಯನ್ನು ಕೊಲೆ ಮಾಡಿ, ಪರಾರಿಯಾಗುವ ವೇಳೆ ದಾವಣಗೆರೆ ಸಮೀಪದ ಮಾಯಕೊಂಡ ರೈಲ್ವೆ ನಿಲ್ಧಾಣದಲ್ಲಿ ಮಹಿಳೆಯೊಬ್ಬಳ ಮೇಲೆ ಹತ್ಯೆಗೆ ಯತ್ನಿಸಿ, ಪ್ರಯಾಣಿಕರ ಸಹಕಾರದಿಂದ ರೈಲ್ವೆ ಪೊಲೀಸರಿಗೆ ಸಿಕ್ಕು ಬಿದ್ದಿದ್ದು, ಇದೀಗ ಪ್ರಕರಣ ತನಿಖೆ ನಡೆಯುತ್ತಿದೆ.

ಇದಲ್ಲದೇ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾ ಕೊಲೆ ನಡೆದಿತ್ತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಇದೇ ರೀತಿ ರಾಜ್ಯದಲ್ಲಿ ಹಲವಾರು ಹಲ್ಲೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಪದೇಪದೇ ನಡೆಯುತ್ತಿದ್ದರೂ ಸಹ ರಾಜ್ಯದ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
ಕಲಬುರುಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರು ಗ್ರಾಮದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಅರ್ಜುನ್ ಹಣುಮಂತಪ್ಪ, ಮಹಮ್ಮದ್ ಸಮೀರುದ್ದೀನ್, ಅಬ್ದುಲ್ ರೆಹಮಾನ್ ಎಂಬಾತರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಲ್ಲದೇ ಅವರನ್ನು ವಿವಸ್ತ್ರಗೊಳಿಸಿದ ಪ್ರಕರಣ ದಾಖಲಾಗಿದೆ. ಇದೇ ರೀತಿ ರಾಜ್ಯದಲ್ಲಿ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ನಡೆಯುತ್ತಿದ್ದು, ರಾಜ್ಯದ ಜನರನ್ನು ಭಯಬೀತರನ್ನಾಗಿ ಮಾಡಿದೆ. ಅದರಲ್ಲೂ, ಯುವತಿಯರು ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಹೆದರುವ ವಾತಾವರಣ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆ ಸೂಕ್ತ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಇದಲ್ಲದೇ ಈ ಎಲ್ಲಾ ಪ್ರಕರಣಗಳಲ್ಲಿ ಅಮಾನವೀಯ, ವಿಕೃತವಾಗಿ ವರ್ತನೆ ಮಾಡಿರುವ ಎಲ್ಲಾ ಆರೋಪಿಗಳನ್ನು ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಹುಲಿಕಟ್ಟೆ ರಾಮಚಂದ್ರಪ್ಪ, ಎಂ.ವೈ.ಸತೀಶ್,ಮಾರುತಿ ಆರ್.ಎನ್,ಅಂಜಿನಪ್ಪ ಪೂಜಾರ್,ಹನುಮಂತಪ್ಪ,ವಿಜಯಕುಮಾರ್, ಕಕ್ಕರಗೊಳ್ಳ ಮಂಜುನಾಥ್, ರಾಜು,ಬಸವರಾಜ್, ರವಿಚಿಕ್ಕಣ್ಣ,ಗೋಪಾಲ್,
ಮಧುರ,ನಾಗಮ್ಮ,ಕೃಷ್ಣಮೂರ್ತಿ,ಡೈಮಂಡ್ ಮಂಜುನಾಥ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು

Share.
Leave A Reply

Exit mobile version