ಚಿತ್ರದುರ್ಗ,ಮೇ.08: ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಇಂತಹ ನೀಚ ಕೃತ್ಯಕ್ಕೆ ಮುಂದಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಜಾತ್ಯಾತೀತ ಜನತಾದಳದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ದಿನಗಳಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಹಗರಣವನ್ನು ಪೆನ್ ಡ್ರೈವ್ ಹಾಗೂ ಆಶ್ಲೀಲ ವಿಡಿಯೋ ಮೂಲಕ ರಾಜ್ಯದೆಲ್ಲೆಡೆ ಹಂಚುತ್ತಿರುವುದು ಸಂಚಲನವನ್ನು ಸೃಷ್ಟಿಸಿದೆ. ಈ ಲೈಂಗಿಕ ಹಗರಣವನ್ನು ಯಾರೂ ಕೂಡ ಸಮರ್ಥಿಸಿಕೊಳ್ಳಲಾರರು. ಇದು ಸಂಪೂರ್ಣ ವಿಚಾರಣೆಯ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ಎಲ್ಲರೂ ಬಯಸುತ್ತಿದ್ದಾರೆ. ಆದರೆ ಈ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣು ಮಕ್ಕಳನ್ನು ಪೆನ್‌ಡ್ರೈವ್ ಹಾಗೂ ಆಶ್ಲೀಲ ವಿಡಿಯೋ ಮೂಲಕ ಈಡೀ ರಾಜ್ಯಾದ್ಯಂತ ಹಂಚಿರುವುದು ಶಿಕ್ಷಾರ್ಹ ಅಪರಾಧ ಆಗಿರುತ್ತದೆ. ಅಲ್ಲದೆ ಇದರ ರೂವಾರಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದು ಜಗ್ಗಜನಿತವಾಗಿದೆ. ಆದೂ ಅಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡ ಅವರು ಎಲ್ಲಾ ವಿಷಯಗಳನ್ನು ಕೂಲಂಕುಷವಾಗಿ ವಿವರಿಸಿದ್ದಾರೆ. ಸರ್ಕಾರದ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿಗಳು ಇಂತಹ ನೀಚ ಕೆಲಸಕ್ಕೆ ಇಳಿದಿರುವುದು ಈಡೀ ರಾಜ್ಯದ ಜನತೆಯ ದುರ್ದೈವವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ತೀವ್ರ ಬರಗಲಾದಿಂದ ತತ್ತರಿಸುತ್ತಿರುವ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಯ ಬಗ್ಗೆ ಚಿಂತಿಸದೇ ಇಂತಹ ಸ್ವಾರ್ಥ ರಾಜಕೀಯಕ್ಕೆ ಇಳಿದಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ತರುವುದಿಲ್ಲ. ಈ ಚುನಾವಣಾ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳದ ನಾಯಕ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸನ್ನು ಕುಂದಿಸಿ, ಜಾತ್ಯಾತೀತ ಜನತಾದಳಕ್ಕೆ ಕಳಂಕ ತರುವುದು ಇದರ ಪ್ರಮುಖ ಉದ್ದೇಶವಾಗಿದೆ. ಅದೂ ಅಲ್ಲದೇ ಮೈತ್ರಿ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡಿ ಚುನಾವಣೆಯಲ್ಲಿ ಹಿನ್ನಡೆಯನ್ನುಂಟು ಮಾಡುವ ಕೆಟ್ಟ ಆಲೋಚನೆಯೂ ಸಹ ಇದರಲ್ಲಿ ಅಡಗಿದೆ. ಇಷ್ಟೇ ಅಲ್ಲದೆ ಈ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿರುವ ಮಹಿಳೆಯರ ಫೋಟೋಗಳನ್ನು ಯಥಾವತ್ತಾಗಿ ತೋರಿಸಿ ಮಹಿಳೆಯರ ಮಾನ ಮರ್ಯಾದೆಯನ್ನು ತೆಗೆದಿರುತ್ತಾರೆ. ಇದರಿಂದಾಗಿ ಆ ಕುಟುಂಬಗಳ ಪರಿಸ್ಥಿತಿ ಇದೀಗ ಬಹಳ ಶೋಚನೀಯವಾಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರ ಮಾನ ಮತ್ತು ರಕ್ಷಣೆಗೆ ಕಿಂಚಿತ್ತೂ ಗೌರವ ಕೊಡದೇ ಇಂತಹ ಹೀನ ಕೃತ್ಯವನ್ನು ಎಸಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಆದ್ದರಿಂದ ಈ ಪೆನ್‌ಡೈವ್ ಸೃಷ್ಟಿಕರ್ತರು ಹಾಗೂ ಅದರ ಹಂಚಿಕೆದಾರರ ವಿರುದ್ಧ ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಈ ನೆಲದ ಕಾನೂನಿನ ಅನುಸಾರವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ, ಬಿ.ಕಾಂತರಾಜ್, ಯಶೋಧರ್, ಪ್ರತಾಪ್ ಜೋಗಿ, ಹೆಚ್.ನಾಗರಾಜ್, ರಾಜಣ್ಣ, ಚಿದಾನಂದಪ್ಪ, ಮಹಾಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು