ದಾವಣಗೆರೆ : ಕಿರಾತಕ ಸೇರಿದಂತೆ ಉಪೇಂದ್ರ ಅಭಿನಯದ ಕಲ್ಪನ 2 ಚಿತ್ರದಲ್ಲಿ ನಟಿಸಿದ್ದ ರಂಗಭೂಮಿ ಕಲಾವಿದ, ಚಿತ್ರ ನಟ , ಸಂಘಟಕ, ಸಾಮಾಜಿಕ ಹೋರಾಟಗಾರ ಏಸು ಪ್ರಕಾಶ್ ಕಲ್ಲುಕೊಪ್ಪ ( ಪ್ರಕಾಶ್ ಹೆಗ್ಗೋಡು) (58) ನಿಧನರಾಗಿದ್ದಾರೆ.
ಅಲ್ಪಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್ ಹೆಗ್ಗೋಡುರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇದರಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಪ್ರಕಾಶ್ ಹೆಗ್ಗೋಡು ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟನೆ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲಿ ತನ್ನ ವಿಶಿಷ್ಟ ನಟನೆಯ ಮೂಲಕ ಗುರ್ತಿಸಿಕೊಂಡಿದ್ದಂತ ಸ್ಯಾಂಡಲ್ ವುಡ್ ನಟ ಪ್ರಕಾಶ್ ಹೆಗ್ಗೋಡು ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.
ಈ ನಟ ಬಹುಮುಖ ಪ್ರತಿಭೆಯಾಗಿದ್ದು, ಸಂಘಟಕ, ಪರಿಸರ ಪ್ರೇಮಿ, ನೂರಾರು ಕೆರೆಗಳ ನಿರ್ಮಾಣ, ಪುನರ್ ನಿರ್ಮಾಣ ಕಾಮಗಾರಿ ನೇತೃತ್ವ ವಹಿಸಿದ್ದರು ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ ಸಮೀಪದ ‘ಸಾರಾ’ ಸಂಸ್ಥೆಯ ಸದಸ್ಯ, ಗ್ರಾಮೀಣ ಭಾಗದಲ್ಲಿ ‘ನಾಡಚಾವಡಿ’ ಸಂಸ್ಥೆ ಮೂಲಕ ಅನೇಕ ಸಾಮಾಜಿಕ ಕಾರ್ಯ ಮಾಡುತ್ತಿದ್ದರು.
ಮಾರ್ಚ್ 31ರ ನಾಳೆ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಅಂತ್ಯ ಸಂಸ್ಕಾರ ಇಲ್ಲೆ ನಡೆಯಲಿದೆ