ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಘಟಕ ಕಾಲೇಜು, ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಅನಿಮೇಶನ್ ಮತ್ತು ಮಲ್ಟಿಮೀಡಿಯಾ ವಿಭಾಗದಿಂದ ಏಪ್ರಿಲ್ 15 ರಿಂದ 30 ರವರೆಗೆ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 7.30 ರವರೆಗೆ ‘ಪ್ರೆಗ್ಮೆಂಟ್ ಆಫ್ ಇಲ್ಯೂಷನ್’ ಶೀರ್ಷಿಕೆಯ ಪ್ರದರ್ಶನವನ್ನು ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.ಎಂದು ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕರುಗಳಾದ ರಂಗನಾಥ ಕುಲಕರ್ಣಿಯವರ ಪ್ರಮುಖ ಮಾರ್ಗದರ್ಶನ ಹಾಗೂ ಆರ್. ಅರುಣ್ ಸಹಕಾರದೊಂದಿಗೆ ಅನಿಮೇಷನ್ ಮತ್ತು ಮಲ್ಟಿಮೀಡಿಯಾ ವಿಭಾಗದ ವಿದ್ಯಾರ್ಥಿಗಳಾದ ಸುಷ್ಮಿತಾ, ಲೇಖಕ್, ಪವನ್ಲಾಲ್, ಅಬುಬಕರ್, ಮನೋಜ್, ಹರೀಶ್, ಕೃತಿಕಾ, ಕೀರ್ತಿ ಸಂಗೂರ್, ವೃಷಬ್ರಾಜ್, ದರ್ಶನ್, ಮೇಘಾ ಎಸ್ ರಾಯ್ಕರ್, ಫಿರ್ದೊಸ್ ನಲ್ಬಂದ್, ಆದಿತ್ಯ, ಮಹ್ಮದ್ ನಯಾಜ್, ಮೊನಿಕಾ ಮತ್ತು ರಚನಾ ಶೆಟ್ಟರ್ ಇವರುಗಳು ರಚಿಸಿದ ಅನಿಮೇಶನ್ ಪ್ರಸ್ತುತಿಗಳು ಪ್ರದರ್ಶನಗೊಳ್ಳಲಿವೆ ಎಂದರು.
ಈ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದ ಮೂಲಕ ರಚಿಸಿದ 3ಡಿ ಮಾಡೆಲಿಂಗ್, ಸ್ಟೋರಿಬೋರ್ಡ್, ಪೇಂಟಿಂಗ್, ಇಲ್ಸ್ಟೇಶನ್, ಮೋಶನ್ ಗ್ರಾಫಿಕ್, ಕಾನ್ಸೆಪ್ಟ್ ಆರ್ಟ್ ಮೊದಲಾದ ಪ್ರಕಾರದ ಅಭಿವ್ಯಕ್ತಿಗಳು ಇರಲಿವೆ ಅಲ್ಲದೆ ಕೆಲವು ವಿಡಿಯೋ ಪ್ರಸ್ತುತಿಗಳೂ ಸಹ ಇಲ್ಲಿರುವುದು ವಿಶೇಷ.ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಏ. 15 ರ ಬೆಳಿಗ್ಗೆ 11 ಗಂಟೆಗೆ ಜರುಗಲಿದ್ದು, ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಆಡಳಿತಾಂಗ ಕುಲಸಚಿವರಾದ ಡಾ. ಯು.ಎಸ್. ಮಹಾಬಲೇಶ್ವರ ಅವರು ನಿರ್ವಹಿಸಲಿದ್ದಾರೆ.
ಹಿರಿಯ ಪತ್ರಕರ್ತ ಮತ್ತು ರಂಗಕರ್ಮಿ ಬಾ.ಮ. ಬಸವರಾಜಯ್ಯ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ.ಎಂ.ಚಿಕ್ಕಪಾಟೀಲ ಆಶಯ ನುಡಿಗಳನ್ನಾಡಲಿದ್ದಾರೆ.
ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ ಹಾಗೂ ಅನಿಮೇಶನ್ ಮತ್ತು ಮಲ್ಟಿಮೀಡಿಯಾ ವಿಭಾಗದ ಬೋಧನಾ ಸಹಾಯಕ ರಂಗನಾಥ ಕುಲಕರ್ಣಿ ವೇದಿಕೆಯಲ್ಲಿರುವರು ಎಂದು ಮಾಹಿತಿ ನೀಡಿದರು.
ವಿಶ್ವ ದೃಶ್ಯ ಕಲಾ ದಿನಾಚರಣೆ ಪ್ರಯುಕ್ತ ಏಪ್ರಿಲ್ 16 ರಂದು ಬೆಳಿಗ್ಗೆ 11ಗಂಟೆಗೆ ಮತದಾನ ಜಾಗೃತಿ ದಿನಾಚರಣೆ ಹಮ್ಮಿಕೊಂಡಿದ್ದು, `ಸದೃಢ ಪ್ರಜಾಪ್ರಭುತ್ವಕ್ಕೆ ನಿರ್ಭಯ ಮತದಾನ’ ವಿಷಯ ಕುರಿತು ಸ್ಥಳದಲ್ಲೇ ಚಿತ್ರ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ, ಶಿವಶಂಕರ್ ಸುತಾರ್, ರಂಗನಾಥ್ ಕುಲಕರ್ಣಿ ಎಸ್.ಹೆಚ್. ಹರೀಶ್ ಉಪಸ್ಥಿತರಿದ್ದರು