ದಾವಣಗೆರೆ : ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧಿಸಿದ್ದನ್ನು ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತ ಉಪಪಂಗಡಗಳಿಗೆ ಮೀಸಲಾತಿ ಕೊಡಬೇಕೆನ್ನುವ ಮನೋಭಾವ ಹೊಂದಿಲ್ಲ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ್ದರು. ಆದರೆ ಆಗಿನ ಸರಕಾರ ತಾಳ್ಮೆವಹಿಸಿ ಸಮಸ್ಯೆ ಬಗೆಹರಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಹಿಂದಿನ ನಮ್ಮ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾದ ಮೀಸಲಾತಿಯನ್ನು ಈ ಸರ್ಕಾರ ಅನುಷ್ಠಾನಗೊಳಿಸುತ್ತಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲೇಬಾರದು ಎನ್ನುವ ದುರುದ್ದೇಶ ಅವರದ್ದಾಗಿದೆ ಎಂದು ಟೀಕಿಸಿ ಸ್ವಾಮೀಜಿ ಅವರನ್ನು ಕೂಡಲೇ ಗೌರವಯುತವಾಗಿ ಬಿಡುಗಡೆಗೊಳಿಸಬೇಕು. ಬುಧವಾರದ ಅಧಿವೇಶನದಲ್ಲಿ ಸ್ವಾಮೀಜಿ ಅವರಿಗೆ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಲಾಠಿ ಚಾರ್ಜ್ ಪ್ರವೃತ್ತಿ ಕಾಂಗ್ರೆಸ್ಸಿನವರಿಗೆ ಮೊದಲಿನಿಂದಲೂ ಇದೆ. ಈ ಸರ್ಕಾರ ಬಂದ ಮೇಲೆ ಪಂಚಮಸಾಲಿ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ದೊಡ್ಡಮಟ್ಟದ ಹೋರಾಟ ಇದಾಗಿತ್ತು. ಮೊದಲ ಹೋರಾಟವನ್ನೇ ಹತ್ತಿಕ್ಕುವ ಪ್ರಯತ್ನವನ್ನು ಈ ಸರ್ಕಾರ ಮಾಡಿದೆ.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಇದೇ ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಬೃಹತ್ ಹೋರಾಟ ನಡೆಸಿದ್ದರು. ಆಗಲೂ ಲಾಠಿ ಚಾರ್ಜ್ ನಡೆಸಿದ್ದಾಗ ಒಬ್ಬ ರೈತ ಸತ್ತೇ ಹೋಗಿದ್ದ. ಆಗಲೂ ಸಿದ್ದರಾಮಯ್ಯ ಸರ್ಕಾರ ಮೊಂಡಾಟ ಮಾಡಿತ್ತು. ಈಗಲೂ ಅದೇ ಮಾದರಿ ಪಾಲಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸುವರ್ಣಸೌಧದಲ್ಲೇ ಇದ್ದ ಸಿಎಂ ತಾವೇ ಬಂದು ಮನವಿ ಸ್ವೀಕರಿಸಿ ದೊಡ್ಡ ಸಮುದಾಯದ ಹೋರಾಟಗಾರರಿಗೆ ಭರವಸೆ ನೀಡಬಹುದಾಗಿತ್ತು. ಅದಾಗದಿದ್ದರೆ ಸ್ವಾಮೀಜಿ, ಸಮುದಾಯದ ಮುಖಂಡರ ಮನವೊಲಿಸುವ ಸಾಮರ್ಥ್ಯ ಹೊಂದಿರುವ ಮಂತ್ರಿಗಳನ್ನಾದರೂ ಕಳಿಸಬಹುದಾಗಿತ್ತು. ಹೋರಾಟಗಾರರು ಚೆನ್ನಮ್ಮ ವೃತ್ತದಿಂದ ಹೈವೇವರೆಗೂ ಬರಲು ಅವಕಾಶ ಕೊಟ್ಟು ಯಾರೋ ಕಿಡಿಗೇಡಿಗಳು ಕಿತಾಪತಿ ಮಾಡಿದರೆಂದು ಏಕಾಏಕಿ ಲಾಠಿ ಚಾರ್ಜ್ ಮಾಡಿದ್ದು ಸರಿಯಾದ ಪದ್ಧತಿ ಅಲ್ಲ ಎಂದರು.

ಘಟನೆಯಲ್ಲಿ ವಯಸ್ಸಾದ ಹೋರಾಟಗಾರರು, ಪೊಲೀಸರೂ ಸೇರಿ ಅನೇಕರಿಗೆ ಪೆಟ್ಟು, ಗಾಯಗಳಾಗಿದ್ದಕ್ಕೆ ಸಾಂತ್ವನ ವ್ಯಕ್ತಪಡಿಸಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಎಂದೂ ಇಂಥ ಅಹಿತಕರ ಘಟನೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಆಗೆಲ್ಲ ಕಾಂಗ್ರೆಸ್‌ನವರು ಯಡಿಯೂರಪ್ಪ, ಬೊಮ್ಮಾಯಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರೂ ಶಾಂತಿ ಕಾಪಾಡಿ ನ್ಯಾಯಯುತ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮುಂದೆ ನಮ್ಮ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು ಬಿಜೆಪಿಯಿಂದ ಮಾತ್ರ ಪಂಚಮಸಾಲಿಗಳಿಗೆ ನ್ಯಾಯ ಸಿಗುತ್ತದೆಯೇ ಹೊರತು ಕಾಂಗ್ರೆಸ್‌ನಿಂದ ನ್ಯಾಯ ಸಿಗುವುದಿಲ್ಲ ಎಂದಿದ್ದಾರೆ.

Share.
Leave A Reply

Exit mobile version