ದಾವಣಗೆರೆ: ನಗರದ ಶ್ರೀ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ವರ್ತಕರ ಸಂಘದಿಂದ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸಂಕೀರ್ಣದಲ್ಲಿ ಇದೇ 10ರಂದು ಶುಕ್ರವಾರ ಬಸವ ಜಯಂತಿ ದಿನದಂದು ವಿಶೇಷ ಪೂಜೆ, ವಾಸ್ತು ಶಾಂತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಐರಣಿ ಬಕ್ಕೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1951ರಂದು ಆಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಕಟ್ಟಿದ್ದ ಕೆ.ಆರ್. ಮಾರುಕಟ್ಟೆ ಶಿಥಿಲವಾದ ಕಾರಣ ಅದನ್ನು 2015ರಲ್ಲಿ ಧ್ವಂಸ ಮಾಡಿದ ನಂತರ ಇದೀಗ ಮತ್ತೆ 9*9 ಅಳತೆಯ 254 ಮಳಿಗೆಗಳನ್ನು ನಿರ್ಮಿಸಲಾಗಿದೆ. ನೆಲಮಹಡಿ, ಮೊದಲ ಮಹಡಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಾರುಕಟ್ಟೆ ನಿರ್ಮಾಣ ಆಗಿದ್ದು, ವಾಣಿಜ್ಯ ಮಳಿಗೆಗಳನ್ನು ಮಾರ್ಚ್ ತಿಂಗಳಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ ಅವರು ಮೂಲ ವರ್ತಕರಿಗೆ ಹಂಚಿಕೆ ಮಾಡಿದ್ದರು. ಈ ನಿಟ್ಟಿನಲ್ಲಿ ಮಳಿಗೆಗಳಲ್ಲಿ ಮತ್ತೆ ವ್ಯಾಪಾರ ಆರಂಭಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯ ಗ್ರಾಹಕರು ಮೊದಲಿನಂತೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಟಿ.ಎಂ.ಚಂದ್ರಮೋಹನ ಬಾಬು, ಪಿ.ರುದ್ರೇಶ್, ಜಿ.ಎಸ್.ದಾನೇಶಪ್ಪ, ಎಂ.ಜಿ.ನಾಗರಾಜ್, ಎಲ್. ಮುರುಗೇಶ್ ಇತರರು ಇದ್ದರು.