ದಾವಣಗೆರೆ: ದೇಶದಲ್ಲಿ ಮೋದಿ ಇದ್ದಾರೆ. ಆದರೆ ಮೋದಿ ಅಲೆಮಾತ್ರ ಮಾಯವಾಗಿದೆ. ದೇಶದ ಜನ ಇವರ ಮೇಲೆ ನಿರೀಕ್ಷೆ ಇಟ್ಟುಕೊಂಡು ಹತ್ತು ವರ್ಷಗಳಕಾಲ ದೇಶದ ಆಡಳಿತ ನೀಡಿದರೂ ದೇಶ ಅಭಿವೃದ್ಧಿ ಆಗಿಲ್ಲ. ಹತ್ತು ವರ್ಷದಲ್ಲಿ ಸಾಧನೆ ಶೂನ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ದಿ ಬಿಟ್ಟು ಅಲ್ಪಸಂಖ್ಯಾತರನ್ನು ಟಾರ್ಗೇಟ್ ಮಾಡುವುದು. ಜನರನ್ನು ಭಾವನಾತ್ಮಕವಾಗಿ ತಪ್ಪು ದಾರಿಗೆ ಎಳೆಯುವುದನ್ನ ಬಿಜೆಪಿ ಬಿಟ್ಟಿಲ್ಲ. ಅಲ್ಪಸಂಖ್ಯಾತರನ್ನು ಟಾರ್ಗೇಟ್ ಮಾಡಿದರೆ ಮತಗಳು ಬರಬಹುದೆಂದು ಬಿಜೆಪಿ ತಿಳಿದುಕೊಂಡಿತ್ತು. ಆದರೆ ಪ್ರಜ್ಞಾವಂತ ಜನ ಬಿಜೆಪಿ ಎಂಬ ಕೋಮುವಾದಿ ಪಕ್ಷಕ್ಕೆ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ದಾವಣಗೆರೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಖಚಿತ ವರದಿಗಳ ಬಂದ ಬಳಿಕ ಜಿ.ಎಂ.ಸಿದ್ದೇಶ್ವರ ಕಾಡಿಬೇಡಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರನ್ನು ದಾವಣಗೆರೆಗೆ ಕರೆಯಿಸಲು ಮುಂದಾಗಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಧಾನಿನರೇಂದ್ರ ಮೋದಿ ಪ್ರಚಾರ ಮಾಡಿದ ಬಹುತೇಕ ಕಡೆ ಬಿಜೆಪಿ ಸೋತಿದೆ. ದಾವಣಗೆರೆಯಿಂದಲೇ ಪ್ರಚಾರ ಆರಂಭಿಸಿದರೂ ಜಿಲ್ಲೆಯ ಎಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರದಲ್ಲಿಕಾಂಗ್ರೆಸ್ ಗೆದ್ದಿದ್ದ ಇದಕ್ಕೆ ನಿದರ್ಶನ ಎಂದು ತಿಳಿಸಿದರು.
ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಇಲ್ಲ ಸಲ್ಲದ ಹೇಳಿಕೆ ನೀಡಿ ಕೋಮುಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ರಾಜಸ್ತಾನ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತು, ಮಾಂಗಲ್ಯ ಸರ ಸಹಿತ ಮುಸ್ಲಿಂ ಜನರಿಗೆ ಕೊಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ತಪ್ಪು ಮಾಹಿತಿ ಕಾಂಗ್ರೆಸ್ ಬಗ್ಗೆ ಪ್ರಧಾನಿ ಮಾಡುತ್ತಿರುವ ಸುಳ್ಳು ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ 28ರಂದು ದಾವಣಗೆರೆಗೆ ನರೇಂದ್ರ ಮೋದಿ ಬರಲಿದ್ದಾರೆ. ಅದಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಇದರಿಂದ ಕೋಮು ಭಾವನೆಗಳಿಗೆ ಧಕ್ಕೆ ಬರುತ್ತದೆ. ಪ್ರಧಾನಿ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಚಮನ್ ಸಾಬ್, ಗಡಿಗುಡಾಳು ಮಂಜುನಾಥ್, ಹುಲಿಕಟ್ಟೆ ಚಂದ್ರಪ್ಪ, ಕೆ.ಎಂ.ಮಂಜುನಾಥ್, ಮಹಮ್ಮದ್ ಸಮೀವುಲ್ಲಾ, ಬಿ.ವಿನಾಯಕ, ಡಿ.ಶಿವಕುಮಾರ್, ಬಿ.ಎಸ್.ಸುರೇಶ್, ಮುಬಾರಕ್ ಇತರರು ಇದ್ದರು.