ಶಿವಮೊಗ್ಗ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಹೊಸ ದೀರ್ಘಾವಧಿ ಕೋರ್ಸ್ ಗಳನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗುವುದು ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ಕಿರಣ್ ಕುಮಾರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಚೇನಹಳ್ಳಿಯಲ್ಲಿರುವ ನಿದಿಗೆ ಕೈಗಾರಿಕಾ ಪ್ರದೇಶದಲ್ಲಿ ನಮ್ಮ ಜಿಟಿಟಿಸಿ ತರಬೇತಿ ಕೇಂದ್ರವಿದೆ. ಇಲ್ಲಿ ಕಳೆದ 10 ವರ್ಷಗಳಿಂದ ಐಟಿಐ, ಡಿಪ್ಲೊಮಾ ಸೇರಿದಂತೆ ಅನೇಕ ಕೋರ್ಸ್ ಗಳನ್ನು ಕಲಿಸಲಾಗುತ್ತದೆ. ಇದುವರೆಗೂ 13 ಬ್ಯಾಚ್ ಗಳು ತರಬೇತಿ ಪಡೆದಿದ್ದು ವಿವಿಧ ಕಡೆಗಳಲ್ಲಿ ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಿಂದ ಮೂರು ಹೊಸ ಕೋರ್ಸ್ ಗಳನ್ನು ತೆರೆಯಲಾಗಿದೆ ಎಂದರು.

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೊಮಾ ಇನ್ ಮೆಟ್ರಾನಿಕ್ಸ್ ಕೋರ್ಸ್ ಗಳನ್ನು ಆರಂಭಿಸಲಾಗುವುದು. ಇದು ಮೂರು ವರ್ಷದ ಕೋರ್ಸ್ ಆಗಿದ್ದು, ಒಂದು ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿಯನ್ನು ಹೊಂದಿರುತ್ತದೆ. ತರಬೇತಿಯಲ್ಲಿ ಸ್ಟೈಫಂಡ್ ಸಹ ಸಿಗುತ್ತದೆ. ಈ ಮೂರೂ ಕೋರ್ಸ್ ಗಳಿಗೂ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಮೆರಿಟ್ ಹಾಗೂ ರೋಸ್ಟರ್ ಪದ್ದತಿ ಮೂಲಕ ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ವಿದ್ಯಾರ್ಥಿನಿಯರಿಗೆ ಶೇ. 30ರಷ್ಟು ಸೀಟು ಕಾಯ್ದಿರಿಸಲಾಗಿದೆ ಎಂದರು.

ಎಸ್ಎಸ್ಎಲ್ಸಿ ಪಾಸಾದವರು ಅರ್ಜಿ ಹಾಕಲು ಅರ್ಹರಾಗಿರುತ್ತಾರೆ. ಅರ್ಜಿ ಹಾಕಲು ಮೇ 27 ಕೊನೆ ದಿನವಾಗಿದೆ. ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕಿದೆ. KEA ವೆಬ್ ಸೈಟ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ ಎಂದರು.

ಇದರ ಜೊತೆಗೆ ಉಚಿತ ವೃತ್ತಿಪರ ತರಬೇತಿಗಳನ್ನು ಕೂಡ ನೀಡಲಾಗುವುದು. ಶೇ. 100 ರಷ್ಟು ಉದ್ಯೋಗಾವಕಾಶಗಳು ಗ್ಯಾರಂಟಿಯಾಗಿದೆ. ಐಟಿಐ ಅಥವಾ ಪಿಯುಸಿ(ವಿಜ್ಞಾನ) ಪೂರ್ಣಗೊಳಿಸಿದವರಿಗೆ ಮೂರನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ ಗಳಿಗೆ ನೇರ ಪ್ರವೇಶಾವಕಾಶವಿದೆ ಎಂದರು.ಹೆಚ್ಚಿನ ವಿವರಗಳಿಗೆ ಉಚಿತ ಸಹಾಯವಾಣಿ 155267 ಹಾಗೂ ದೂರವಾಣಿ ಸಂಖ್ಯೆ: 08182-246054, ಮೊ. 94483 07027 ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ಲೇಸ್ ಮೆಂಟ್ ಅಧಿಕಾರಿ ದೀಪಕ್ ಕುಮಾರ್ ಇದ್ದರು.

Share.
Leave A Reply

Exit mobile version