ನಂದೀಶ್ ಭದ್ರಾವತಿ, ದಾವಣಗೆರೆ

ಜಿಎಂ ಸಿದ್ದೇಶ್ವರ್.. 2004ರಿಂದ ಸತತ 4 ಬಾರಿ ದಾವಣಗೆರೆ MPಯಾಗಿ ಗೆದ್ದಿರೋ ಇವರು ಈಗ 5ನೇ ಸಲ ಅಖಾಡಕ್ಕೆ ಧುಮುಕಿ ಗೆಲುವಿನ ನಗಾರಿ ಭಾರಿಸೋಕೆ ಭರ್ಜರಿ ಸಿದ್ಧತೆ ಮಾಡ್ಕೊಂಡಿದ್ದಾರೆ. ಆದ್ರೆ ದೀಪದ ಬುಡದಲ್ಲೇ ಕತ್ತಲು ಅನ್ನೋ ಹಾಗೆ ಇವರದೇ ಪಕ್ಷದ ಸ್ಥಳೀಯ ನಾಯಕರು ಇವರಿಗೆ ಈ ಸಲದ ಎಂಪಿ ಟಿಕೆಟ್ ಸಿಗ್ಲೇಬಾರ್ದು ಅಂತೇಳಿ ಇನ್ನಿಲ್ಲದ ಕಸರತ್ತನ್ನ ನಡೆಸುತ್ತಿದ್ದಾರೆ. ಹಾಗಾದರೆ ಏನದು ಕಸರತ್ತು.? ಜಿಎಂ ಸಿದ್ದೇಶ್ವರ್ v/s ಡೆಲ್ಲಿ ಬಾಯ್ಸ್​​ ನಡುವಿನ ಕೋಲ್ಡ್​ವಾರ್ ಹೇಗಿದೆ.? ಅಷ್ಟಕ್ಕೂ ಯಾರದು ಡೆಲ್ಲಿ ಬಾಯ್ಸ್ ಅಂದ್ರಾ..? ಮುಂದೆ ಓದಿ.

.ಬೆಣ್ಣೆನಗರಿ ದಾವಣಗೆರೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಈ ಬಾರಿ ಕಾಂಗ್ರೆಸ್‌ ಬಿಜೆಪಿ ಫೈಟ್‌ ಅನ್ನೋದಕ್ಕಿಂತ, ಬೀಗರ ನಡುವೆ ಕದನ ಶುರುವಾಗಿದೆ. ಅಂದ್ರೆ ಶಾಮನೂರು ಶಿವಶಂಕರಪ್ಪ V/S ಜಿಎಂ ಸಿದ್ದೇಶ್ವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ್ತೊಂದು ಕಡೆ ಡೆಲ್ಲಿ ಬಾಯ್ಸ್​ ನಿಗೂಢ ವ್ಯೂಹ ಕೂಡ ರೆಡಿಯಾಗಿದೆ. ಇದ್ರಿಂದ ಜಿಎಂ ಸಿದ್ದೇಶ್ವರ್ ಅವರು ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ರೀತಿ ಹೋರಾಟ ನಡೆಸುತ್ತಿದ್ದಾರೆ. ಹಾಗಾದರೆ ಜಿಎಂ ಸಿದ್ದೇಶ್ವರ್ ಅವರ ಶತ್ರುಕೂಟ ದಿನೇ ದಿನೇ ಬೆಳೆದಿದ್ದೇಕೆ.? ಇದು ಗೊತ್ತಾಗ್ಬೇಕು ಅಂದ್ರೆ 2 ದಶಕಗಳ ಹಿಂದಿನ ರಾಜಕೀಯ ಚರಿತ್ರೆಯನ್ನ ಕೆದಕಲೇಬೇಕು.

ಹೌದು ವೀಕ್ಷಕರೇ, 2004ರಲ್ಲಿ ರಾಜ್ಯದಲ್ಲಿ ಬಿಜೆಪಿ ಇನ್ನು ಅಂಬೆಗಾಲಿಡುತ್ತಿತ್ತು. ಆದರೆ ಅದಾಗ್ಲೇ ಜಿಎಂ ಸಿದ್ದೇಶ್ವರ್ ಅವರು ದಾವಣಗೆರೆ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ರು. ಅದಾದ ನಾಲ್ಕೇ ವರ್ಷಕ್ಕೆ ರಾಜ್ಯದಲ್ಲಿ ಮೊಟ್ಟ ಮೊದಲ ಸಲ ಬಿಜೆಪಿ ಗದ್ದುಗೆ ಹಿಡಿದಿತ್ತು. ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ರೆ, ಅವರ ಪಟಾಲಂನಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆ ಮೂಲದ ಸಾಕಷ್ಟು ನಾಯಕರು ಚಿಗುರಿಕೊಳ್ಳಲು ಆರಂಭಿಸಿದ್ರು. ಇದ್ರಿಂದ ಹಂತ ಹಂತವಾಗಿ ದಾವಣಗೆರೆಯಲ್ಲಿ ಬಿಜೆಪಿ ಬೇರುಗಳು ಸ್ಟ್ರಾಂಗ್ ಆಗ್ತಾ ಹೋದ್ವು.

ದಾವಣಗೆರೆ ಜಿಲ್ಲೆಯಲ್ಲಿ ಹರಪನಹಳ್ಳಿ ಸೇರಿದಂತೆ 7 ವಿಧಾನಸಭಾ  ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಿತ್ತು. ಅಷ್ಟೇ ಅಲ್ಲ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲೂ ಕಮಲಕ್ಕೆ ಗೆದ್ದು ಇಡೀ ದಾವಣಗೆರೆ ಜಿಲ್ಲೆಯನ್ನ ಕೇಸರಿಮಯವನ್ನಾಗಿಸಿತ್ತು. ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಬೆಲ್ಲ ಇರೋ ಕಡೆ ನೊಣಗಳು ಮುಸುರುತ್ತವೆ. ಅದೇ ರೀತಿ ಅಧಿಕಾರದಾಸೆಗೆ ದಾವಣಗೆರೆ ಬಿಜೆಪಿಯಲ್ಲೂ ಒಡಕು ಮೂಡ್ತು.

ಜಿಲ್ಲಾ ಬಿಜೆಪಿಗೆ ಭದ್ರಬುನಾದಿ ಹಾಕಿದ್ದ ಜಿಎಂ ಸಿದ್ದೇಶ್ವರ್ ಅವರ ಬುಡಕ್ಕೆ ಸ್ವಪಕ್ಷದ ನಾಯಕರು ಕೈ ಹಾಕಿದ್ರು. ಇದರಿಂದ ದಾವಣಗೆರೆ ಬಿಜೆಪಿ ಒಡೆದು ಚೂರು ಚೂರಾಯ್ತು. ಇದರ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲೂ ಹೀನಾಯ ಸೋಲಾಯ್ತು.

ಈ ಸೋಲಿಗೆ ಬರೀ ಬಿಜೆಪಿಯಲ್ಲಿನ ಒಡಕಷ್ಟೇ ಕಾರಣ ಅಲ್ಲ. ಕೆಲ ಸ್ಥಳೀಯ ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಅನ್ನೋ ಮಾತುಗಳೂ ಹರಿದಾಡ್ತಾಯಿವೆ. ಹಾಗೆ ಕೈ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡಿರೋದು ಬೇರ್ಯಾರೂ ಅಲ್ಲ. ಜಿಎಂ ಸಿದ್ದೇಶ್ವರ್ ಅವರ ವಿರೋಧಿ ಬಣವಾಗಿರೋ ಡೆಲ್ಲಿ ಬಾಯ್ಸ್ ಟೀಂ.

ಈ ಡೆಲ್ಲಿ ಬಾಯ್ಸ್ ರಣತಂತ್ರದ ಬಗ್ಗೆ ಮಾಜಿ ದೂಡಾ ಅಧ್ಯಕ್ಷ ಯಶವಂತರಾವ್ ಜಾಧವ್ OBC ಸಮಾವೇಶದಲ್ಲಿ ಹರಿಹಾಯ್ದಿದ್ರು. ಕಾಂಗ್ರೆಸ್ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡೋರಿಗೆ ಟಿಕೆಟ್ ಕೊಡಬೇಡಿ ಅಂತೇಳಿ ಬಹಿರಂಗವಾಗೇ ಆಕ್ರೋಶ ಹೊರಹಾಕಿದ್ದರು. ಇತ್ತ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಈ ಹಿಂದೆ ಜಿಎಂ ಸಿದ್ದೇಶ್ವರ್​ ಅವರ ಸೋಲನ್ನು ನೋಡಬೇಕು ಅಂತೇಳಿದ್ರು. ಈ ಎಲ್ಲ ಬೆಳವಣಿಗೆಗಳ ಹಿಂದೆ  ಡೆಲ್ಲಿ ಬಾಯ್ಸ್ ರಣತಂತ್ರ ಅಡಗಿದ್ಯಾ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ.

ಡೆಲ್ಲಿ ಬಾಯ್ಸ್​ ಟೀಂನಲ್ಲಿ ಯಾರ್ಯಾರಿದ್ದಾರೆ?

ಸದ್ಯ ಬಿಜೆಪಿಯಲ್ಲಿ ರೆಬಲ್ ಆಗಿರುವ ರೇಣುಕಾಚಾರ್ಯ ಈ ಡೆಲ್ಲಿ ಬಾಯ್ಸ್ ಟೀಂನ ನಾಯಕ. ಇವರ ಜತೆ ಉತ್ತರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ‌ ಲೋಕಿಕೆರೆ ನಾಗರಾಜ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿ.ಜೆ.ಅಜೇಯ್ ಕುಮಾರ್, ಸಿದ್ದೇಶ್ವರ ವಿರುದ್ಧ ಕೆಂಡಕಾರಿದ್ದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ್ ಕೂಡ ಇದ್ದಾರೆ. ಅಷ್ಟೇ ಅಲ್ಲ, ಜಗಳೂರಿನಲ್ಲಿ ಚೆಕ್ ಡ್ಯಾಂ ಪಿತಾಮಹಾ ಎಂದು ಖ್ಯಾತಿ  ಪಡೆದಿದ್ದ ಮಾಜಿ ಶಾಸಕ ಗುರು ಸಿದ್ದನಗೌಡ ಪುತ್ರ ರವಿಕುಮಾರ್ ಡೆಲ್ಲಿ ಬಾಯ್ಸ್​​ ಟೀಂನಲ್ಲಿರೋ ಸದಸ್ಯರು ಅಂತ ಹೇಳಲಾಗುತ್ತಿದೆ. ಹಾಗಾದ್ರೆ ಇವರಿಗೂ ಕಾಂಗ್ರೆಸ್ ನಾಯಕರಿಗೂ ಅದೇನ್ ಸಂಬಂಧ ಅಂದ್ರಾ? ಇಲ್ಲೇ ಇರೋದು ನೋಡಿ ಅಸಲಿ ಮ್ಯಾಟ್ರು. ಅದನ್ನ ಒಂದ್ ಸ್ವಲ್ಪ ಬಿಡಿಸಿ ಹೇಳ್ತೀವಿ ನೋಡಿ.

ಮಾಜಿ ಶಾಸಕ ರೇಣುಕಾಚಾರ್ಯ ನಿಗೂಢ ನಡೆ, ತಮ್ಮ ಏಳಿಗೆಗಾಗಿ ಪಕ್ಷಕ್ಕೆ ಕಂಟಕ ತಂದಿಟ್ರಾ?

ನಿಮಗೆ ಗೊತ್ತಿರ್ಲಿ, ದಾವಣೆಗೆರೆ ಬಿಜೆಪಿಯಲ್ಲಿ ರೇಣುಕಾಚಾರ್ಯ ಮೊದ್ಲಿಂದ್ಲೂ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಆದರೆ ಇವರು ಬಿ.ಎಸ್ ಯಡಿಯೂರಪ್ಪನವರಲ್ಲಿ ಅತಿಯಾದ ಸ್ವಾಮಿ ನಿಷ್ಠೆಯನ್ನ ಬೆಳೆಸಿಕೊಂಡಿದ್ದಾರೆ. ಅಂದ್ರೆ ಹೂವಿನ ಜೊತೆ ಸೇರಿದ್ರೆ ನಾರು ಕೂಡ ಸ್ವರ್ಗಕ್ಕೆ ಹೋಗುತ್ತೆ ಅನ್ನೋ ಗಾದೆ ಮಾತನ್ನ ಬಲವಾಗಿ ನಂಬಿದವರಲ್ಲಿ ರೇಣುಕಾಚಾರ್ಯ ಮೊದಲಿಗರು. 2008ರಲ್ಲಿ ಬಿಎಸ್​ವೈ ಮೊದಲ ಸಲ ಸಿಎಂ ಆಗಿದ್ದಾರ ಬಿಎಸ್​ವೈ ಜೊತೆ ಇದ್ದು ಪಕ್ಷದಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನ ಗಿಟ್ಟಿಸಿಕೊಂಡಿದ್ದರು.

ಆದ್ರೆ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ರೆಸಾರ್ಟ್ ರಾಜಕಾರಣ ಮಾಡಿದ್ದರು. ಆಗ ರೇಣುಕಾಚಾರ್ಯರಿಗೆ ಯಡಿಯೂರಪ್ಪ ಬೇಡವಾಗಿತ್ತು. ಇದಾದ ಬಳಿಕ 2019ರಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂತು. ಆಗ ಮತ್ತೆ ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾದ್ರು. ಆಗ ನೋಡಿ ಮತ್ತೆ ರೇಣುಕಾಚಾರ್ಯರ ಅಸಲಿ ಸ್ವಾಮಿನಿಷ್ಠೆ ಮುಂದುವರೆಯುತ್ತೆ. ಮಂತ್ರಿ ಹುದ್ದೆಗಾಗಿ ಬಿಎಸ್​ವೈ ಅವರ ಹಿಂದಿಂದೆ ಬಿದ್ದಿದ್ರು. ಮಂತ್ರಿ ಹುದ್ದೆ ಸಿಗಿದಿದ್ರೂ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯುತ್ತಾ,  ಯಡಿಯೂರಪ್ಪ ಕೈ ಕಾಲು ಹಿಡಿದುಕೊಂಡು ತಮ್ಮ ಕ್ಷೇತ್ರಕ್ಕೆ ಕೋಟಿಗಟ್ಟಲೇ ಅನುದಾನ ತಂದರು. ಇದೇ ವೇಳೆ ರಾಜ್ಯಾಧ್ಯಕ್ಷರಾಗಿದ್ದ ಕಟೀಲ್​​ಗೆ ರತ್ನಗಂಬಳಿ ಹಾಸಿದ್ದರು.

ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ್ಮೇಲೆ ಆ ಸೋಲಿಗೆ ನೇರ ಕಾರಣ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಅಂತೇಳಿ ಮಾಧ್ಯಮಗಳ ಮುಂದೆ ಸೀನ್ ಕ್ರಿಯೇಟ್ ಮಾಡಿದ್ರು. ಬಿಎಸ್​ವೈ ಅವರನ್ನ ಸೈಡ್​ಲೈನ್ ಮಾಡೋಕೆ ಬಿಎಲ್ ಸಂತೋಷ್ ಕಾರಣ ಅಂತಾನೂ ಆರೋಪಿಸಿದ್ರು. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಘಟಾನುಘಟಿಗಳ ನಾಯಕರನ್ನು ಭೇಟಿ ಮಾಡಿದರು.

ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯನ್ನ ಬಹಿರಂಗವಾಗೇ ಭೇಟಿಯಾಗಿ ಬಂದಿದ್ರು. ಆಗ ಒಂದು ಹಂತದಲ್ಲಿ ರೇಣುಕಾಚಾರ್ಯ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರೆ ಅನ್ನೋ ಗುಲ್ಲೆದ್ದಿತ್ತು. ಇದಕ್ಕೆ ಸ್ಪಷ್ಟನೆ ಕೇಳಿದಾಗ ಅಭಿವೃದ್ಧಿಗಾಗಿ ಅನುದಾನ ಕೇಳಲು ಹೋಗಿದ್ದೆ ಅಂತೇಳಿ ಸಬೂಬು ಹೇಳಿದ್ರು. ಅಲ್ಲದೇ ಬದ್ಧ ವೈರಿ ಡಿ.ಜಿ.ಶಾಂತನಗೌಡರ ಜತೆ ಸಭೆ, ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ಇಷ್ಟೆಲ್ಲ ಮಾಡಿದ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಎಷ್ಟು ಅನುದಾನ ತಂದ್ರು.? ಭೇಟಿ ಮಾಡಿದ ಉದ್ದೇಶವಾದರೂ ಏನು.? ಗೆದ್ದಾಗ ಎಲ್ಲ ನಾಯಕರು ಬೇಕಿತ್ತು, ಸೋತಾಗ ಬಿಜೆಪಿ ನಾಯಕರನ್ನು ಟೀಕೆ ಮಾಡುತ್ತಾರೆ ಅಂದರೆ ಇದರ ಹಿಂದೆ ಕಾಂಗ್ರೆಸ್ ನಾಯಕರ ಪಕ್ಕಾ ಕೈವಾಡವಿದೆ ಅನ್ನೋ ಮಾತುಗಳು ರಾಜ್ಯ ಬಿಜೆಪಿ ವಲಯದಲ್ಲೇ ಕೇಳಿಬರ್ತಾಯಿವೆ.ಮತ್ತೂ ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ರೇಣುಕಾಚಾರ್ಯ ದಾವಣಗೆರೆಯಲ್ಲಿ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೈ ತಪ್ಪಿಸಿ, ಆ ಟಿಕೆಟ್ ಅನ್ನ ತಾವು ಗಿಟ್ಟಿಸಿಕೊಳ್ಳಲು ತಮ್ಮ ಗುರು ಬಿಎಸ್​ವೈ ಮೂಲಕ ದಿಲ್ಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಅನ್ನೋದು ಮುಚ್ಚಿಟ್ಟ ಸತ್ಯವೇನೂ ಅಲ್ಲ. ಆದರೆ ರೇಣುಕಾಚಾರ್ಯ ಅವರಿಗೆ ಎಂಪಿ ಟಿಕೆಟ್ ಸಿಕ್ಕರೂ ಅವರ ನಾಮಪತ್ರ ಸಿಂಧುವಾಗುತ್ತಾ ಅನ್ನೋ ಅನುಮಾನ ಹುಟ್ಕೊಂಡಿದೆ. ಯಾಕಂದ್ರೆ ಈ ಹಿಂದೆ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಯತ್ನಿಸಿದ್ರು ಅನ್ನೋ ಆರೋಪವಿದೆ.

ಎಂ.ಪಿ.ರೇಣುಕಾಚಾರ್ಯ ಲಿಂಗಾಯಿತರು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ’ಲಿಂಗಾಯಿತ’ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ, ಅವರ ಪುತ್ರಿ ಎಂ.ಆರ್‌. ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರಲ್ಲಿ ಪಡೆದಿದ್ರು ಅನ್ನೋ ಆರೋಪ ಕೇಳಿಬಂದಿತ್ತು. ಆ ಬಗ್ಗೆ ರಿಯಾಕ್ಟ್ ಮಾಡಿದ್ದ ರೇಣುಕಾಚಾರ್ಯ, ನನ್ನ ಪುತ್ರಿಗೆ ಸಹೋದರ ಎಸ್‌ಸಿ ಜಾತಿ ಪ್ರಮಾಣಪತ್ರ ಕೊಡಿಸಿದ್ದು ನಿಜ. ಆ ವಿಷಯ ನನ್ನ ಗಮನಕ್ಕೆ ಬಂದ ಕೂಡಲೇ ಅದನ್ನು ರದ್ದು ಮಾಡಲು ಅಂದೇ ಪತ್ರ ನೀಡುವಂತೆ ಸೂಚಿಸಿದ್ದೆ. ಆನಂತರ ಏನಾಗಿದೆಯೋ ಗೊತ್ತಿಲ್ಲ ಅಂತೇಳಿದ್ರು. ಇಂಥ ಸೂಕ್ಷ್ಮ ವಿಚಾರಗಳು ಕಾಂಗ್ರೆಸ್ ಕೈ ಸೇರಿದ್ರೆ ಇವರು ನಾಮಪತ್ರ ಸಲ್ಲಿಸಿದ್ಮೇಲೆ ಕ್ಯಾತೆ ತೆಗೆದು ಚುನಾವಣಾ ಲಾಭ ಪಡೆದುಕೊಳ್ಳೋ ಸಾಧ್ಯತೆ ಇದೆ.

ಇನ್ನ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಸಂಸದ ಸಿದ್ದೇಶ್​​ಗೂ ಮೊದಲಿನಿಂದಲೂ ಜುಗಲ್ ಬಂದಿ ಇದೆ. ತನ್ನ ಮಗ ಲೋಕಾಯುಕ್ತ ಬಲೆಗೆ ಬೀಳಲು ಸಂಸದ ಸಿದ್ದೇಶ್ವರ್ ಅವರೇ ಕಾರಣ. ಅಲ್ಲದೇ ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಸಿಗದೇ ಇರುವುದು, ಪಕ್ಷದಿಂದ ಉಚ್ಚಾಟನೆ ಮಾಡಿರುವ ಕಾರಣ ರೆಬೆಲ್ ರೇಣುಕಾ ಜತೆ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ವಮಲ್ಲಿಕಾರ್ಜುನ್ ರೇಣುಕಾಚಾರ್ಯ ಜತೆ ಸೇರಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೇ ಮತ್ತೆ ತೊಂದರೆಯಾಗಲಿದೆ ಎಂಬ ಭಯ ಮಾಡಾಳ್ ಕುಟುಂಬಕ್ಕೆ ಇದೆ. ಆದ್ದರಿಂದ ಹಿಂಭಾಗಲಿನಿಂದ ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂಬುದು ಬಿಜೆಪಿ‌ನಾಯಕರ ಮಾತು. ಇದು ಎಷ್ಟು ಸತ್ಯ, ಎಷ್ಟು ಸುಳ್ಳೋ ಗೊತ್ತಿಲ್ಲ.

ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾದ ಬಿ.ಜಿ.ಅಜೇಯ್ ಕುಮಾರ್ ಸೋಲಲು ಸಂಸದ ಜಿಎಂ ಸಿದ್ದೇಶ್ವರ ಆಪ್ತ ಯಶವಂತರಾವ್ ಜಾಧವ್ ಕಾರಣ ಎಂದು ರೇಣುಕಾಚಾರ್ಯ ಜತೆ ಸೇರಿದ್ದಾರೆ. ಅಲ್ಲದೇ ಇವರು ಕೂಡ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ದರಿಂದ ಇವರು ಕೂಡ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೇ ಕಾಂಗ್ರೆಸ್ ಪ್ಲಸ್ ಪಾಯಿಂಟ್ ಆಗಿ ಬಳಸಿಕೊಂಡಿದೆ. ಇನ್ನು ಉತ್ತರ ವಿಧಾನ ಸಭಾ ಕ್ಷೇತ್ರ ಪರಾಜಿತ ಅಭ್ಯರ್ಥಿ‌ ಲೋಕಿಕೆರೆ ನಾಗರಾಜ್​​ಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಎಂಪಿ ಲಾಬಿ ಮಾಡುತ್ತಾರೆ ಎಂದು ರೇಣುಕಾಚಾರ್ಯರ ಬಳಿ ಸೇರಿಸಿಕೊಂಡಿದ್ದಾರೆ ಎಂಬ ಮಾತಿದೆ.

ಮಾಜಿ ಶಾಸಕ, ಪುತ್ರರ ಪಕ್ಷ ಉಚ್ಚಾಟನೆಗೆ ಸಂಸದರೇ ಕಾರಣ ಎಂಬ ಆರೋಪ

ಜಗಳೂರಿನಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಕಡಿಮೆ ಅಂತರದಿಂದ ಸೋಲಲು ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ  ಪುತ್ರ ರವಿಕುಮಾರ್ ಕಾರಣ ಎಂದು ಸಿದ್ದೇಶ್ವರ ಆಪ್ತ ಎಸ್.ವಿ.ರಾಮಚಂದ್ರ ಆರೋಪಿಸಿದ್ದರು. ಇದಕ್ಕೆ ಸಂಸದ ಸಿದ್ದೇಶ್ವರ ಉಚ್ಚಾಟನೆಗೆ ಶಿಫಾರಸ್ಸು ಮಾಡಿದ್ದರು. ಅಲ್ಲದೇ ಲೋಕಸಭೆ ಟಿಕೆಟ್ ಆಕಾಂಕ್ಷಿಯೂ ಆಗಿದ್ದು, ರೇಣುಕಾಚಾರ್ಯ ನಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಅವರಿಗೆ ಬೆಂಬಲಿಸುತ್ತೇವೆ ಎಂದಿದ್ದಾರೆ‌. ಒಂದು ವೇಳೆ ಸಂಸದರ ಕುಟುಂಬಕ್ಕೆ ಟಿಕೆಟ್ ಸಿಕ್ಕರೇ ಇವರನ್ನು ಬಳಸಿಕೊಂಡು ಕಾಂಗ್ರೆಸ್ ಆ್ಯಂಟಿ ಬಿಜೆಪಿ ಮಾಡಬಹುದು ಎಂಬ ಮಾತು ಕೂಡ ಬರುತ್ತಿದೆ.

ಕಾಂಗ್ರೆಸ್ ಡೆಲ್ಲಿ ಬಾಯ್ಸ್ ಸಪೋರ್ಟ್​​ಗೆ ನಿಂತಿದೆಯಾ?

ಶತಯಾಗತಯಾ ಕಾಂಗ್ರೆಸ್  ಅಭ್ಯರ್ಥಿ ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಎಸ್.ಎಸ್‌‌ಮಲ್ಲಿಕಾರ್ಜುನ್ ಡೆಲ್ಲಿ ಬಾಯ್ಸ್ ನಾಯಕ ರೇಣುಕಾಚಾರ್ಯರನ್ನು ಹಿಂಭಾಗಲಿನಿಂದ ಭೇಟಿ ಮಾಡುತ್ತಿದೆ. ಅಲ್ಲದೇ ಅವರಿಗೆ ಬೇಕಾದ ಎಲ್ಲವನ್ನು ನೀಡುತ್ತಿದೆ. ಈ ಮೂಲಕ ಬಿಜೆಪಿ ಸೋಲಿಸಬೇಕಿದೆಯೆಂದು ಬಿಜೆಪಿ ಆಪ್ತವಲಯ ತಿಳಿಸುತ್ತಿದೆ.

ಯಡಿಯೂರಪ್ಪ ಸಿದ್ದೇಶ್ವರ ಬೆಂಬಲಕ್ಕೆ, ವಿಜಯೇಂದ್ರ ರೇಣುಕಾಚಾರ್ಯ ಬೆಂಬಲಕ್ಕೆ

ಮಾಜಿ ಸಿಎಂ ಯಡಿಯೂರಪ್ಪ ಈಗಾಗಲೇ ಎರಡು ಬಾರಿ ಸಂಸದ ಜಿಎಂ ಸಿದ್ದೇಶ್ವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರೇಣುಕಾಚಾರ್ಯರ ಬೆಂಬಲಕ್ಕೆ ನಿಂತಿರುವುದು ಒಂದಿಷ್ಟು ಗೊಂದಲಕ್ಕೆ ಕಾರಣವಾಗಿದೆ.

ಡೆಲ್ಲಿಯಲ್ಲಿ ಠಿಕಾಣಿ

ಡೆಲ್ಲಿ ಬಾಯ್ಸ್ ದೆಹಲಿಗೆ ಹೋದರೂ, ಅಲ್ಲಿ ರಾಷ್ಟ್ರೀಯ ನಾಯಕರು ಕೈಗೆ ಸಿಗುತ್ತಿಲ್ಲ. ಅಲ್ಲದೇ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಆದರೂ ಪ್ರಯತ್ನ ಬಿಡದೆ ಡೆಲ್ಲಿ ಬಾಯ್ಸ್ ಹೈಕಮಾಂಡ್ ಭೇಟಿ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ ಡೆಲ್ಲಿ ಬಾಯ್ಸ್ ಭೇಟಿಯಾಗಿರುವುದಕ್ಕೆ ಯಾವುದೇ ಪೋಟೋ ಸಿಗುತ್ತಿಲ್ಲ ಎಂದು ಬಿಜೆಪಿ ಇನ್ನೊಂದು ಬಣ ಹೇಳುತ್ತಿದೆ.

ಮಾವನ ವಿರುದ್ದ ಅಳಿಯ ಹೂಡಿದ್ರಾ ತಂತ್ರ?

ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್  ಬದ್ದ ವೈರಿ ಮಾವ ಸಿದ್ದೇಶ್ ಆಗಿದ್ದು, ಇವರ ಸೋಲಿಗೆ ಮಲ್ಲಿಕಾರ್ಜುನ್ ತಂತ್ರ ಹೂಡಿದ್ದು, ಡೆಲ್ಲಿ  ಬಾಯ್ಸ್ ರನ್ನು ಬಳಕೆ ಮಾಡುತ್ತಿದ್ದಾರೆ  ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಏನೇ ಆಗಲಿ ಕಾಂಗ್ರೆಸ್ ದಾಳಕ್ಕೆ ಡೆಲ್ಲಿ ಬಾಯ್ಸ್  ಉರುಳುತ್ತಿದ್ದಾರಾ ಅಥವಾ ಇಲ್ವ ಗೊತ್ತಿಲ್ಲ. ಆದರೆ ಚುನಾವಣೆ ನಂತರ ಇದಕ್ಕೆ ಉತ್ತರವೊಂತು ಸಿಗಲಿದೆ.ಇದಷ್ಟೇ ಅಲ್ಲ,  ಈ ಸಲ ಜಿಎಂ ಸಿದ್ದೇಶ್ವರ್ ಅವರಿಗೆ ಲೋಕಸಭಾ ಚುನಾವಣಾ ಟಿಕೆಟ್ ಸಿಗಬಾರದು ಅಂತೇಳಿ ನಡೆಸಿದ ರಣತಂತ್ರಳು ಒಂದಾ, ಎರಡಾ.? ಅದರಲ್ಲಿ ಸಿದ್ದೇಶ್ವರ್ ಅವರಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್ ಮಾಡಿಸಿದ ತಂತ್ರವೂ ಒಂದು ಅಂತ ಹೇಳಬಹುದು. ಹೌದು ವೀಕ್ಷಕರೇ, ಈ ಹಿಂದೆ ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರಿ​ಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿತ್ತು, ಈ ಸಂಬಂಧ ಸಂಸದರು ಕಳೆದ ವರ್ಷ ಜುಲೈ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಸದರಿಗೆ ವಿಷ ಹಾಕಿ ಸಾಯಿಸಲು ಸಂಚು?

ದಾವಣಗೆರೆ ಬಿಜೆಪಿಯಲ್ಲಿ ಆಲದಮರವಾಗಿ ಬೆಳೆದಿರೋ ಜಿಎಂ ಸಿದ್ದೇಶ್ವರ್ ಅವರಿಗೆ ವಿಷ ಹಾಕಿ ಸಾಯಿಸಲು ಹೊಂಚು ನಡೆದಿದೆ ಅನ್ನೋ ಮಾತುಗಳೂ ಇವೆ. ಕಳೆದ ಜನವರಿ 14ರಂದು ಈ ಬಗ್ಗೆ ಖುದ್ದು ಸಂಸದರೇ ಇಂಥ ಗಂಭೀರ ಆರೋಪ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಈ ಬಾರಿಯೂ ಕಣಕ್ಕಿಳಿಯಲು ಸಜ್ಜಾಗಿರುವುದಾಗಿದ್ದೇನೆ. ಆದರೆ, ನನಗೆ ಶತ್ರುಗಳ ಕಾಟ ಇನ್ನಿಲ್ಲದಂತೆ ಕಾಡ್ತಾಯಿದೆ. ನಮಗೆ ವಿಷ ಹಾಕಿ ಕೊಲ್ಲಲು ಕೆಲವರು ಹೊಂಚು ಹಾಕುತ್ತಿದ್ದಾರೆ ಅಂತೇಳಿ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ನಾನು ಹೊರಗಡೆ ಎಲ್ಲೂ ಆಹಾರ ಸೇವಿಸುತ್ತಿಲ್ಲ ಅಂತಾನೂ ಹೇಳಿದ್ದರು.ಅದೇನೇ ಇರಲಿ., ರಾಜಕೀಯ ಅಂದ್ರೆನೇ ಕಲ್ಲು ಮುಳ್ಳಿನ ಹಾದಿ. ಓರ್ವ ವ್ಯಕ್ತಿ ಪ್ರಬಲ ನಾಯಕನಾಗಿ ಬೆಳೆಯಬೇಕು ಅಂದ್ರೆ ಅಲ್ಲಿ ಶತ್ರುಗಳು ಇದ್ದೇ ಇರ್ತಾರೆ. ಅದಕ್ಕೆ ಹೇಳೋದು ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್. ಲೆಸ್​​ ಸ್ಟ್ರಾಂಗ್ ಲೆಸ್​ ಎನಿಮಿಸ್. ನೋ ಸ್ಟ್ರಾಂಗ್ ನೋ ಎನಿಮಿಸ್ ಅಂತ. ಹಾಗಾದ್ರೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರೋ ಹಾಲಿ ಬಿಜೆಪಿ ಸಂಸದ GM ಸಿದ್ದೇಶ್ವರ್ ಅವರಿಗೆ ಮತ್ತೆ MP ಟಿಕೆಟ್ ಸಿಗುತ್ತಾ.? ಡೆಲ್ಲಿ ಬಾಯ್ಸ್​ ಕಾಂಗ್ರೆಸ್ ಲಿಂಕ್ ರಣತಂತ್ರ ನಿಜಕ್ಕೂ ವರ್ಕೌಟ್ ಆಗುತ್ತಾ. ಆಗಲ್ವಾ.? ಈ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Share.
Leave A Reply

Exit mobile version