ಶಿವಮೊಗ್ಗ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಇಂದು ಜಿಲ್ಲಾ ಗಂಗಾಮತ ಸಂಘ ಮತ್ತು ಮೊಗವೀರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಂಜಲಿ ಅಂಬಿಗೇರ ಅವರು ಹುಬ್ಬಳ್ಳಿ ನಗರದ ವೀರಾಪುರ ಓಣಿಯವರು. ಅದೇ ಏರಿಯಾದ ವಿಶ್ವನಾಥ್ ಎಂಬ ಯುವಕ ಅಂಜಲಿಯನ್ನು ಚಾಕುವಿನಿಂದ ಬರ್ಬರವಾಗಿ ಚುಚ್ಚಿ ಹತ್ಯೆ ಮಾಡಿದ್ದಾನೆ. ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹತ್ಯೆ ಮಾಡಿದ ಪಾಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಹತ್ಯೆಯಾದ ಯುವತಿಯ ಸಂತ್ರಸ್ತ ಕುಟುಂಬಕ್ಕೆ 50ಲಕ್ಷ ರೂ. ಪರಿಹಾರ ನೀಡಬೇಕು. ಆರೋಪಿಗೆ ಕಠಿಣ ಕಾನೂನು ಮೂಲಕ ಶಿಕ್ಷೆ ವಿಧಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ. ಕೆಂಚಪ್ಪ, ಮೊಗವೀರ ಸಮಾಜದ ಜಿಲ್ಲಾಧ್ಯಕ್ಷ ಕೆ.ವಿ. ಅಣ್ಣಪ್ಪ, ಪ್ರಮುಖರಾದ ಎ. ಹಾಲೇಶಪ್ಪ, ಸೂಗೂರು ಶೇಖರಪ್ಪ, ಜಿ. ನಾಗಪ್ಪ, ಜಿ. ಕೆಂಚಪ್ಪ, ಎಸ್.ಬಿ. ಅಶೋಕ್ ಕುಮಾರ್, ಎಸ್.ಬಿ. ಸತೀಶ್ ಕುಮಾರ್, ಜನಾರ್ಧನ್, ಆರುಂಡಿ ಶ್ರೀನಿವಾಸಮೂರ್ತಿ, ಹೆಚ್.ಎಂ. ರಂಗನಾಥ್, ಹನುಮೇಶ್, ವಿರೂಪಾಕ್ಷಪ್ಪ, ಮೋಹನ್, ವಿಶ್ವನಾಥ್, ಹರೀಶ್, ನಾಗರಾಜ್, ನಟರಾಜ್, ಕುಮಾರ್ ಮೊದಲಾದವರಿದ್ದರು.