ದಾವಣಗೆರೆ : ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾಗಿರುವ ಕಾಂತರಾಜ್ ವರದಿ ಆಯೋಗದ ಜಾತಿಗಣತಿ ವಿಚಾರ ಅಂಗೀಕರಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಮನವಿ ಸಲ್ಲಿಸಲಾಗಿದೆ ಹಾಗೂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಆದ್ದರಿಂದ ನಾವು ಕಾದು ನೋಡುತ್ತೇವೆ ಎಂದುಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಶಾಸಕರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಜಾತಿಗಣತಿ ವರದಿ ಅಂಗೀಕರಿಸಿ ಬಿಡುಗಡೆ ಸಂಬಂಧ ಈಗಾಗಲೇ ಮಹಾಸಭಾವು ಸ್ಪಷ್ಟ ನಿರ್ಧಾರ ಹೇಳಿದೆ ಎಂದು ತಿಳಿಸಿದರು.

ಜಾತಿಗಣತಿ ವರದಿ ಬಿಡುಗಡೆ ಮಾಡದೇ ವಿರೋಧ ಮಾಡುವುದು ಸರಿಯಲ್ಲ

ಮೊದಲು ವರದಿ ಬಿಡುಗಡೆ ಆಗಲಿ. ಜಾತಿಗಣತಿ ವರದಿ ಬಿಡುಗಡೆ ಮಾಡದೇ ವಿರೋಧ ಮಾಡುವುದು ಸರಿಯಲ್ಲ. ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಅಭಿಪ್ರಾಯ ನಾವು ತಿಳಿಸಿದ್ದೇವೆ. ಸಿದ್ದರಾಮಯ್ಯ ಅವರೂ ಕೂಡ ನಾನು ಸಹ ವರದಿ ನೋಡಿಲ್ಲ, ಲೋಪದೋಷವಾಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಕ್ಕೆ ಅವಕಾಶ ನೀಡುವುದು ಬೇಡ. ಎಲ್ಲರೂ ಒಟ್ಟಾಗಿ ಹೋಗೋಣ ಶಾಸಕ ಶಾಮನೂರು ಹೇಳಿದರು.

ಡಿ. 23 ಮತ್ತು 24ರಂದು ನಡೆಯಲಿರುವ ಅಧಿವೇಶನದಲ್ಲಿ ಚರ್ಚೆ

ದಾವಣಗೆರೆಯಲ್ಲಿ ಡಿ. 23 ಮತ್ತು 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಎಲ್ಲವನ್ನೂ ಹೇಳಲಾಗದು. ಸಮಾವೇಶದಲ್ಲಿ  ತೆಗೆದುಕೊಳ್ಳುವ ನಿರ್ಣಯ ಕುರಿತಂತೆ ಮಹಾಸಭಾದ ಪದಾಧಿಕಾರಿಗಳು, ಸಮಾಜದ ಶ್ರೀಗಳು ಸೇರಿದಂತೆ ಎಲ್ಲರೊಟ್ಟಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.

ಎರಡರಿಂದ ಮೂರು ಲಕ್ಷ ಜನ ಆಗಮನ

ಸುಮಾರು ಎರಡರಿಂದ ಮೂರು ಲಕ್ಷಕ್ಕೂ ಹೆಚ್ಚು  ಜನರು ಸೇರುವ ನಿರೀಕ್ಷೆ ಇದೆ. ಈಗಾಗಲೇ ಎಂಬಿಎ ಮೈದಾನದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಕ್ಷಕ್ಕೂ ಅಧಿಕ ಖರ್ಚಿಗಳನ್ನು ಹಾಕಲಾಗಿದೆ. ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹರಿಹರ ವೀರಶೈವ ಲಿಂಗಾಯತ  ಪಂಚಮಸಾಲಿ ಪೀಠದವರು ಸಹ ವಸತಿ, ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ವಚನಾನಂದ ಸ್ವಾಮೀಜಿ ಕೂಡ ತಿಳಿಸಿದ್ದಾರೆ. ಯಾವುದೇ ರೀತಿಯ ತೊಂದರೆ ಆಗದಂತೆ ನಾವೂ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಮಾಹಿತಿ ನೀಡಿದರು.

ಹೊರ ರಾಜ್ಯದಿಂದ ಬರುವ ಜನರು

ಸಮಾವೇಶಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ ತಂಡಗಳನ್ನು ರಚಿಸಲಾಗಿದೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಂದಲೂ ವೀರಶೈವ ಲಿಂಗಾಯತ ಸಮಾಜದವರು ಪಾಲ್ಗೊಳ್ಳುತ್ತಾರೆ. ಹಾಗಾಗಿ ನಮ್ಮ ನಿರೀಕ್ಷೆಗೂ ಹೆಚ್ಚಿನ ಸಮಾಜದ ಜನರು ಬರುವ ವಿಶ್ವಾಸ ಇದೆ ಎಂದರು.

ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯ

ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ನಮ್ಮ ಬೇಡಿಕೆ. ಕೇವಲ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂಬುದಲ್ಲ. ಎಲ್ಲಾ ಒಳಪಂಗಡದವರಿಗೂ ಈ ಸೌಲಭ್ಯ ಸಿಗುವಂತಾಗಬೇಕು ಎಂದು ಶಾಮನೂರಜ ಹೇಳಿದರು.

ಎಲ್ಲರಿಗೂ ಸೌಲಭ್ಯ ಸಿಗಲಿ ಎಂಬುದಷ್ಟೇ ನಮ್ಮ ಆಶಯ

ವೀರಶೈವ ಲಿಂಗಾಯತ ಸಮಾಜದಲ್ಲಿ ಹಲವು ಒಳಪಂಗಡಗಳಿವೆ. ಗಾಣಿಗರು, ಕ್ಷೌರಿಕರು, ಬಡಿಗೇರ್ ಸೇರಿದಂತೆ ಕಸುಬುನಿಂದ ಬಂದ ಉಪಜಾತಿಗಳ ವೀರಶೈವ  ಲಿಂಗಾಯತರಿದ್ದಾರೆ. ಎಲ್ಲರಿಗೂ ಸೌಲಭ್ಯ ಸಿಗುವಂತಾಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಶಾಸಕ ಶಾಮನೂರು ತಿಳಿಸಿದರು.

ಊಹಾಪೋಹಗಳಿಗೆ ಆಸ್ಪದ ಕೊಡಬೇಡಿ

ಯಾವುದೇ ಊಹಾಪೋಹಗಳಿಗೆ ಆಸ್ಪದ ಕೊಡುವುದು ಬೇಡ. ವೀರಶೈವ ಲಿಂಗಾಯತ ಸಮಾಜದ ಕಾರ್ಯಕ್ರಮ ಇದು. ಹಾಗಾಗಿ, ಬೇರೆಯವರನ್ನು ಕರೆದಿಲ್ಲ. ಮಹಾ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ವೀರಶೈವ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಜಾತಿಗಣತಿಗೆ ನಮ್ಮದು ಮಾತ್ರ ವಿರೋಧವಲ್ಲ

ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವುದು ನಾವು ಮಾತ್ರ ಅಲ್ಲ, ಒಕ್ಕಲಿಗ ಸಮುದಾಯ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ ವಿರೋಧ ಮಾಡಿದರೆ ಕಾಂಗ್ರೆಸ್ ಗೆ ನಷ್ಟ ಆಗಲ್ಲ. ನಾನು ಕಾಂಗ್ರೆಸ್ಸಿಗ. ಪಕ್ಷಕ್ಕೆ ಪ್ರೋತ್ಸಾಹ ಮಾಡಲು ಇರುವುದು ಎಂದು ಶಾಮನೂರು ಹೇಳಿದರು.

ಸಮಾಜದ ಕಾರ್ಯಕ್ರಮ, ಸಿಎಂಗೆ ಆಹ್ವಾನವಿಲ್ಲ

ಮಹಾ ಅಧಿವೇಶನ ಸಮಾಜದ ಕಾರ್ಯಕ್ರಮ ಆಗಿರುವುದರಿಂದ ಮುಖ್ಯಮಂತ್ರಿಯವರನ್ನು
ಕರೆದಿಲ್ಲ. ಹಾಗಾಗಿ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಶಾಮನೂರು ಹೇಳಿದರು.

ಈ ವೇಳೆ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನಿ ಶಿವಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಸಿ. ಉಮಾಪತಿ, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಶುಭಾ ಐನಳ್ಳಿ, ಸುಷ್ಮಾ ಪಾಟೀಲ್ ಮತ್ತಿತರರಿದ್ದರು.

Share.
Leave A Reply

Exit mobile version