ದಾವಣಗೆರೆ: ಸಾವಿರಾರು ಮೀನುಗಳಿದ್ದ ಕೆರೆಗೆ ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ.
ನಗರದ ಹೊರ ವಲಯದ ಎಲೆಬೇತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಭದ್ರಾ ಕಾಲುವೆ ಆಶ್ರಿತವಾಗಿರುವ ಸುಮಾರು 126 ಎಕರೆ ವಿಸ್ತೀರ್ಣದ ಬೇತೂರು ಕೆರೆಯಲ್ಲಿ ಈ ಬರದಲ್ಲಿ ಸುಮಾರು 60 ಎಕರೆಯಷ್ಟು ನೀರು ಸಂಗ್ರಹವಿತ್ತು. ಇನ್ನು ಕೆರೆ ಅಂಗಳದಲ್ಲಿ ಸುಮಾರು 20 ಅಡಿಗಳಷ್ಟು ಆಳದ ಗುಂಡಿಗಳಲ್ಲಿ 8-10 ಕೆಜಿ ತೂಕದ ಭಾರೀ ಮೀನುಗಳಿದ್ದವು ಆದರೆ ದುಷ್ಕರ್ಮಿಗಳು ವಿಷವಿಕ್ಕಿರುವುದು ದುರಂತ.
ಎಲೆಬೇತೂರು ಗ್ರಾಮದ ಮಂಜಪ್ಪ ಬಾರಿಕೇರ, ಸಿದ್ದಪ್ಪ ಬಾರಿಕರ, ಹನುಮಂತಪ್ಪ ಜಕ್ಕಾವರು ಸೇರಿಕೊಂಡು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು, ಸುಮಾರು 8 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದರು. 5 ವರ್ಷಗಳ ಹಿಂದೆ ಬಿಟ್ಟಿದ್ದ ಮೀನುಗಳ ಸಂತತಿ ಹೆಚ್ಚಾಗಿತ್ತು. ರವೂ, ಕಾಟ್ಲಾ, ಗೌರಿ, ಮಿರಗಲ್, ಬ್ಲಾಕ್ ಶಾರ್ಪ್(ಹುಲ್ಲು ತಿನ್ನುವ ಮೀನು) ಹೀಗೆ ನಾನಾ ಜಾತಿಯ ಮೀನುಗಳ ಮರಿಗಳನ್ನು ಬಿಟ್ಟಿದ್ದ ಮೂವರೂ ಮೀನು ಸಾಕಾಣಿಕೆದಾರರು ಒಂದಿಷ್ಟು ದುಡಿಮೆ ಮಾಡಿಕೊಳ್ಳುವ ಕನಸು ಕಂಡಿದ್ದರು.
ಬರದ ಹಿನ್ನೆಲೆಯಲ್ಲಿ ಇಡೀ ಗ್ರಾಮಸ್ಥರು ಕೆರೆ ನೀರನ್ನು ಕಾಯ್ದಿಟ್ಟುಕೊಂಡು, ಅಂತರ್ಜಲ ವೃದ್ಧಿಗೆ ಹಾಗೂ ಜಾನುವಾರುಗಳ ಮೇವಿಗೆ ಅನುಕೂಲಾಗಲೆಂಬ ನಿರ್ಧಾರ ಮಾಡಿದ್ದರು. ಹಾಗಾಗಿ ಎಲ್ಲಾ ಕೆರೆಗಳು ಬತ್ತಿದ್ದರೂ ಎಲೆಬೇತೂರು ಕೆರೆಯ 126 ಎಕರೆ ಪೈಕಿ ಅರ್ಧದಷ್ಟು ನೀರು ಸಂಗ್ರಹ ಇತ್ತು.
ಸಹಜವಾಗಿಯೇ ಮೀನುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಬೇತೂರು ಕೆರೆಯಲ್ಲಿ ಮೀನುಗಳು ಸತ್ತು ತೇಲುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಲೆಬೇತೂರು, ನಾಗರಕಟ್ಟೆ, ಬಿ.ಚಿತ್ತಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆ ಅಂಗಳಕ್ಕೆದೌಡಾಯಿಸಿದರು.
ಕೆಲವರಂತೂ ಕೈಗೆ ಸಿಕ್ಕಷ್ಟು ಮೀನು ಒಯ್ದರೆ, ಮತ್ತೆ ಕೆಲವರು ಟೆಂಡರ್ದಾರರಿಗೆ ಮೀನು ಹಿಡಿದು ಕೊಡಲು ಕೈಜೋಡಿಸಿದರು. ಆದರೆ, ಸಾಲ ಸೋಲ ಮಾಡಿ, ಟೆಂಡರ್ ಪಡೆದ ಮೀನುಗಾರರ ಸಂಕಟ, ನೋವು ಕಣ್ಣಂಚಿನಿಂದ ಕಣ್ಣೀರಾಗಿ ಇಳಿಯುತ್ತಿತ್ತು.
ಕಳೆದ 5 ವರ್ಷದಿಂದ ಸಾಕಿದ್ದ ವಿವಿಧ ಜಾತಿಯ ಸುಮಾರು 5 ಟನ್ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. 6ರಿಂದ 10 ಕೆಜಿವರೆಗೆ ತೂಗುತ್ತಿದ್ದ ಮೀನುಗಳು ಸಾವನ್ನಪ್ಪಿದ್ದನ್ನು ಕಂಡು ಮೀನು ಸಾಕಾಣಿಕೆ ಮಾಡಿದ್ದ ಟೆಂಡರ್ ದಾರರು ಕಣ್ಣೀರು ಹಾಕುತ್ತಿದ್ದಾರೆ. ಬಲೆ ಹಾಕಿದರೆ ಸೊಪ್ಪಿನ ಮೇಲೆ ಕೂಡುತ್ತಿದ್ದ, ಕೆರೆ ಅಂಗಳದ 20 ಅಡಿ ಗುಂಡಿ ಸೇರುತ್ತಿದ್ದ ಮೀನುಗಳು ಈಗ ವಿಷ ಪ್ರಾಶಣದಿಂದ ಸತ್ತು ಹೊರ ಬರುತ್ತಿವೆ. ಮೀನುಗಾರಿಕೆಗೆ ಟೆಂಡರ್ ಪಡೆಯಲು ಅರ್ಜಿ ಹಾಕಿದ್ದ ರೈತರು ಇದೀಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.