ಹೊನ್ನಾಳಿ: ನಾನು ಹೊರಜಿಲ್ಲೆಯವನಲ್ಲ, ನಾನು ದಾವಣಗೆರೆ ಜಿಲ್ಲೆಯವನು, ಬೇಕಾದ್ರೆ ದಾಖಲೆ ಪರಿಶೀಲಿಸಿ, ಸುಮ್ಮನೆ ಜನರಿಗೆ ತಪ್ಪು ಮಾಹಿತಿ ಕೊಡಬೇಡಿ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸಚಿವ ಎಸ್ ಎಸ್ ಎಂಗೆ ಟಾಂಗ್ ನೀಡಿದರು‌

ಹೊನ್ನಾಳಿ ತಾಲ್ಲೂಕಿನ ದಿಡಗೂರು, ಹರಳಹಳ್ಳಿ, ಬೀಜೋಗಟ್ಟಿ, ಒಡೆಯರಹತ್ತೂರು ಗ್ರಾಮಗಳಿಗೆ ಭೇಟಿ ನೀಡಿ ಜನಾಭಿಪ್ರಾಯ ಸಂಗ್ರಹಿಸಿದ ಸಂದರ್ಭದಲ್ಲಿ ಅವರು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಂಗಳವಾರ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.

‘ನಾನು ಹುಟ್ಟಿದ್ದು ದಾವಣಗೆರೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಆಸ್ಪತ್ರೆಯಲ್ಲೇ. ಬೇಕಾದರೆ ಸಚಿವರು ದಾಖಲೆಗಳನ್ನು ಪರಿಶೀಲಿಸಲಿ. ನಾನು ಜಿಲ್ಲೆಯವನಲ್ಲ ಎಂಬ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಅವರು ಮಾಡಬಾರದು’  

‘ಅವರಿಗೆ ದಾವಣಗೆರೆ ನಗರ ಹೊರತುಪಡಿಸಿದರೆ ಜಿಲ್ಲೆಯ ಇತರ ತಾಲ್ಲೂಕುಗಳಿಗೆ, ಅದರಲ್ಲೂ ಹಳ್ಳಿಗಳಿಗೆ ಭೇಟಿ ನೀಡಿ ಅಭ್ಯಾಸವಿಲ್ಲ. ಜನರ ನಾಡಿಮಿಡಿತ ಅವರಿಗೆ ಗೊತ್ತಿಲ್ಲ. ಕ್ಷೇತ್ರದ ಹಳ್ಳಿಗಳ ಪರಿಚಯವೇ ಇಲ್ಲ. ಆದರೂ ಅಂಥವರಿಗೆ ಪಕ್ಷ ಮನ್ನಣೆ ನೀಡುತ್ತದೆ ಎಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ನೀಡಿದಂತಾಗುತ್ತದೆ’ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳಿದ್ದರೂ ಕುಟುಂಬ ರಾಜಕಾರಣದಿಂದಾಗಿ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಬಡತನ, ನಿರುದ್ಯೋಗ, ಜನರ ನಾಡಿಮಿಡಿತ ಅರಿತವರಿಗೆ ಮಾತ್ರ ಇಂತಹ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಈ ಸಮಸ್ಯೆಗಳಿಗೆ ಪರಿಹಾರ ಕೊಡಿಸಿದಾಗ ಮಾತ್ರ ಮತದಾರರಿಗೆ ಸಾಮಾಜಿಕ ನ್ಯಾಯ ಕೊಡಿಸಿದಂತಾಗುತ್ತದೆ’ ಎಂದರು.

ಜನಸಾಮಾನ್ಯರಿಗೆ ಪರಿಚಯವಿಲ್ಲದಂಥವರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಜಿಲ್ಲೆಯ ಜನತೆ ಮನಗಾಣಬೇಕು’ ಎಂದು ಹೇಳಿದರು. 

ಈ ಸಂದರ್ಭದಲ್ಲಿ ದಿಡಗೂರು ಗ್ರಾಮದ ಮುಖಂಡರು ಮಾತನಾಡಿ, ‘ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲೇಬೇಕು. ಯಾರ ಒತ್ತಡಕ್ಕೂ ಮಣಿಯಬಾರದು, ಅಭಿವೃದ್ಧಿಯ ಕನಸು ಹೊಂದಿದ ನಿಮ್ಮಂಥವರೇ ನಮಗೆ ಬೇಕು’ ಎಂದು ಹೇಳಿದರು.’ಅಂದಾಜು 30 ವರ್ಷಗಳಿಂದ ಈಗಿನ ಜಿಲ್ಲಾ ಉಸ್ತುವಾರಿ ಸಚಿವರೂ, ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರೂ ನಮ್ಮ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಬೆಳರಣಿಕೆಯಷ್ಟು ಮುಖಂಡರನ್ನು ಹೊರತುಪಡಿಸಿದರೆ ಅವರಿಗೆ ಜನರ ಸಂಪರ್ಕವೂ ಇಲ್ಲ. ನಾವು ಅವರನ್ನು ಏಕೆ ಬೆಂಬಲಿಸಬೇಕು’ ಎಂದು ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಆದ ದಿಡಗೂರು ಫಾಲಾಕ್ಷಪ್ಪ ಅವರು ಜಿ.ಬಿ. ವಿನಯಕುಮಾರ್ ಅವರನ್ನು ಅಭಿನಂದಿಸಿದರು.

Share.
Leave A Reply

Exit mobile version