ದಾವಣಗೆರೆ: ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯ ರೈತ ವಿರೋಧಿಯಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

 ನಗರದ ಪಿ. ಬಿ. ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಎಸಿ ಕಚೇರಿಯವರೆಗೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡೆ. ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. 

ರೈತ ಮುಖಂಡ ಕೆ.ಬಿ.ಕೊಟ್ರೇಶ್ ಮಾತನಾಡಿ, ಭದ್ರಾ ನದಿ ನೀರು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ಈಗ ತೆಗೆದುಕೊಂಡಿರುವ ನಿರ್ಣಯ ಒಪ್ಪುವ ಪ್ರಶ್ನೆಯೇ ಇಲ್ಲ. ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡಬೇಕು. ಶಿವಮೊಗ್ಗ ಜಿಲ್ಲೆಯ ರೈತರ ಗಮನದಲ್ಲಿಟ್ಟುಕೊಂಡು ಐಸಿಸಿ ನಿರ್ಣಯ ತೆಗೆದುಕೊಂಡಿದೆ. 

ಭದ್ರಾ ಅಚ್ಚುಕಟ್ಟುದಾರರ ಪ್ರದೇಶ ಹೆಚ್ಚಿರುವುದು ದಾವಣಗೆರೆ ಜಿಲ್ಲೆಯಲ್ಲಿ. ಹಾಗಾಗಿ, ಈ ನಿರ್ಧಾರ ಪುನರ್ ಪರಿಶೀಲಿಸಿ, ಕೂಡಲೇ ಕಾಡಾ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. 

ಭಾರತ ಹಳ್ಳಿಗಳ ದೇಶ, ಹೆಚ್ಚು ರೈತರು ಹೊಂದಿರುವ ದೇಶ. ರೈತರ ಬದುಕು ಹಸನಾದರೆ ಎಲ್ಲವೂ ಚೆನ್ನಾಗಿರುತ್ತದೆ. ಅನ್ನ ಕೊಡುವ ರೈತರೇ ಸಂಕಷ್ಟದಲ್ಲಿದ್ದರೆ ಕಾಪಾಡುವರು ಯಾರು? ಹಾಗಾಗಿ, ಭದ್ರಾ ನದಿ ನೀರನ್ನು ಬಲದಂಡೆ ನಾಲೆಗೆ 72 ದಿನಗಳ ಕಾಲ ಹರಿಸಲೇಬೇಕು. 

ದಾವಣಗೆರೆ ಜಿಲ್ಲೆಯ ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಭತ್ತ, ಮೆಕ್ಕೆಜೋಳ, ದ್ವಿದಳ ಧಾನ್ಯ, ತರಕಾರಿಬೆಳೆಯುತ್ತಾರೆ. ಆದ್ದರಿಂದ ಕೂಡಲೇ ಭದ್ರಾ ಡ್ಯಾಂ ನೀರನ್ನು ಕುಂಟು ನೆಪ ಹೇಳದೇ ನೀರು ಹರಿಸಬೇಕು. ನಾವು ರೈತರ ಪರವಾಗಿ ಇರುತ್ತೇವೆ ಎಂದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಐಸಿಸಿ ಸಭೆಯನ್ನು ದಾವಣಗೆರೆ ಇಲ್ಲವೇ ಮಲೇಬೆನ್ನೂರಿನಲ್ಲಿ ನಡೆಸಬೇಕು. ಅದು ಸಾಧ್ಯವಾಗದೇ ಹೋದರೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಬೇಕು. ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಸಭೆ ನಡೆಯಬಾರದು. ಸಚಿವ ಮಧು ಬಂಗಾರಪ್ಪ ಅಕ್ರಮ ಪಂಪ್‌ಸೆಟ್‌ದಾರರ ಪರವಾಗಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರ ಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಆ ಭಾಗದ ರೈತರ ಪರವಾಗಿ ನಿಂತಿದ್ದಾರೆ’ ಎಂದು ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.

12 ದಿವಸ ನೀರು ಹರಿಸಿದರೆ ಕೊನೆಯ ಭಾಗದ ರೈತರಿಗೆ ಅದು ತಲುಪುವುದಿಲ್ಲ. ರೈತರು ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಶೇ 80ರಷ್ಟು ಜನರಿಗೆ ಕುಡಿಯುವ ನೀರು ಸಿಗುವುದಿಲ್ಲ. ಕೊನೆಯ ಭಾಗದ ಶಾಸಕರನ್ನು ಐಸಿಸಿ ಸಭೆಯ ಅಧ್ಯಕ್ಷರನ್ನಾಗಿ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರು ರೈತರ ಪರವಾಗಿ ನಿಂತರೆ ಪಕ್ಷಾತೀತವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

ಆಫ್ ಆ್ಯಂಡ್ ಆನ್ ಗೆ ವಿರೋಧ

ಒಕ್ಕೂಟದ ಅಧ್ಯಕ್ಷಆಫ್ ಆ್ಯಂಡ್ ಆನ್ ಗೆ ವಿರೋಧ  ಶಾಮನೂರು ಎಚ್.ಆರ್.ಲಿಂಗರಾಜ್ ಮಾತನಾಡಿ,  ಹೊಸ ವೇಳಾಪಟ್ಟಿಯಂತೆ ಬಲದಂಡೆಗೆ ಜನವರಿ 15ರಿಂದ 12 ದಿನ ನೀರು ಹರಿಸಿ 20 ದಿನ ನಿಲ್ಲಿಸಿದರೆ ದಾವಣಗೆರೆ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಬರೀ 12 ದಿನ ನೀರು ಹರಿಸಿದರೆ ಅದು ದಾವಣಗೆರೆ-ಮಲೇಬೆನ್ನೂರು ಭಾಗದ ಜಮೀನುಗಳಿಗೆ ತಲುಪುವುದಿಲ್ಲ. 

‘ಪ್ರತಿ ದಿನ ಎಡ ಮತ್ತು ಬಲದಂಡೆಗಳಿಗೆ ಹಾಯಿಸಲು 0.29 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಜಲಾಶಯದಲ್ಲಿ ಸದ್ಯ ಇರುವ ನೀರಿನ ಪೈಕಿ 13.83 ಟಿಎಂಸಿ ಅಡಿ ಡೆಡ್‌ ಸ್ಟೋರೆಜ್‌ ನೀರು ತೆಗೆದರೆ 21.54 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗುತ್ತದೆ. ಕೈಗಾರಿಕೆಗಳ ಬಳಕೆಗೂ ಇಂತಿಷ್ಟು ನೀರು ಮೀಸಲಿಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಭದ್ರಾವತಿ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಇಲ್ಲ. ಆದ್ದರಿಂದ ಕೈಗಾರಿಕೆ ಹಾಗೂ ನದಿಗೆ ಹರಿಸುವ ನೀರು ಉಳಿಸಿದರೆ ನಮಗೆ 74 ದಿನ ನೀರು ಕೊಡಬಹುದು’ ಎಂದು ತಿಳಿಸಿದರು. 

ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ಹೊಸ ವೇಳಾಪಟ್ಟಿ ಪ್ರಕಾರ ಭದ್ರಾ ಎಡದಂಡೆ ಕಾಲುವೆಗಳಿಗೆ ಜ. 10ರಿಂದ 16ದಿನ ನೀರು ಹರಿಸಿ 15 ದಿನ ನಿಲ್ಲಿಸುವುದು. ಹೀಗೆ ಒಟ್ಟು 70 ದಿನಗಳ ಕಾಲ ನೀರು ಹರಿಸಲಾಗುವುದೆಂದು ಹೇಳಲಾಗಿದೆ. ಬಲದಂಡೆ ನಾಲೆಗಳಿಗೆ ಜನವರಿ 15ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ ಒಟ್ಟು 53 ದಿನಗಳ ಕಾಲ ನೀರು ಹರಿಸುವುದಾಗಿ ತಿಳಿಸಲಾಗಿದೆ. ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗುತ್ತದೆ’ ಎಂದರು.

ಪ್ರತಿಭಟನೆಯಲ್ಲಿ ಶಾಸಕ ಬಿ ಪಿ ಹರೀಶ್, ಬಿ ಎಂ ಸತೀಶ್ ಕೊಳೇನಹಳ್ಳಿ, ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಧನಂಜಯ ಕಡ್ಲೆಬಾಳ್, ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್, ಎಲ್. ಎನ್. ಕಲ್ಲೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಬಲ್ಲೂರು ಬಸವರಾಜ , ಶಾಗಲೆ ದೇವೇಂದ್ರಪ್ಪ , ಲೋಕಿಕೆರೆ ನಾಗರಾಜ್, ಬೇತೂರು ಸಂಗಪ್ಪ, ಆರನೇ ಕಲ್ಲು ವಿಜಯಕುಮಾರ, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, 

ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಅವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಪ್ರದೀಪ್ ಶಾಗಲೆ, ಜಗದೀಶಗೌಡ್ರು, ಗೋಪನಾಳ್ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ್, ಬಾತಿ ವಿರೇಶ್ ದೊಗ್ಗಳ್ಳಿ,

ಅಣಬೇರು ಶಿವಪ್ರಕಾಶ್, ಮಳಲ್ಕೆರೆ ಕಲ್ಲಪ್ಪಗುಡ್ಡದ್ರ, ಸದಾನಂದ, ನಾಗರಸನಹಳ್ಳಿ ರುದ್ರೇಶ, ಕೈದಾಳೆ ಗುರುಪ್ರಸಾದ್, ಗೋಣಿವಾಡ ನಾಗರಾಜಪ್ಪ, ಹೊಸಹಳ್ಳಿ ಶಿವಮೂರ್ತಿ ಪಾಲ್ಗೊಂಡಿದ್ದರು.

Share.
Leave A Reply

Exit mobile version