ದಾವಣಗೆರೆ: ವೀರಶೈವ ಲಿಂಗಾಯತ ಸಮಾಜವನ್ನು ವಿಭಜಿಸಲು ಅವಕಾಶ ನೀಡುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಬಾಪೂಜಿ ಕಾಲೇಜು ಆವರಣದಲ್ಲಿ ಆರಂಭಗೊಂಡ 2 ದಿನಗಳ ಅಖಿಲ ಭಾರತ ವೀರಶೈವ-ಲಿಂಗಾಯತ 24 ನೇ ಮಹಾಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನಮ್ಮ ಸಮಾಜವನ್ನು ವಿಘಟಿಸುವ – ವಿಭಜಿಸುವ ಹಲವಾರು ಪ್ರಯತ್ನ ನಡೆದಿವೆ. ಮಹಾಸಭಾ ಸಮಾಜದ ವಿಘಟನೆಗೆ ಅವಕಾಶ ನೀಡಿಲ್ಲ. ಇನ್ನು ಮುಂದೆಯೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಯುವ ಪೀಳಿಗೆಗೆ ನಮ್ಮ ಧರ್ಮದ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ತಿಳಿಸಿಕೊಡಲು ಅಧಿವೇಶನದಲ್ಲಿ ಭಾಗವಹಿಸಿರುವ ನಮ್ಮ ಸಮಾಜದ ಹಿರಿಯರು, ಗುರುಗಳು ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡಲಿ ಎಂದು ಆಶಿಸಿದರು.
ಹಾನಗಲ್ ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಪ್ರಾರಂಭಗೊಂಡ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಗೆ 119 ವರ್ಷಗಳ ಸೇವಾ ಇತಿಹಾಸವಿದೆ. ಮಹಾಸಭೆಯು ಇಲ್ಲಿಯವರೆಗೆ 22 ಅಧ್ಯಕ್ಷರುಗಳ ಸೇವೆ ಸಲ್ಲಿಸಿದ್ದು, 23ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗಿದೆ.
ಕೆ.ಪಿ.ಪುಟ್ಟಣ್ಣ ಚೆಟ್ಟಿಯವರ ಅಧ್ಯಕ್ಷತೆಯಲ್ಲಿ 8 ನೇ ಅಧಿವೇಶನವು 1917ರ ಡಿಸೆಂಬರ್ 27, 28, 29 ಮತ್ತು 30 ರಂದು ಒಟ್ಟು 4 ದಿನಗಳ ಕಾಲ ದಾವಣಗೆರೆಯಲ್ಲಿ ನೆರವೇರಿತ್ತು. 106 ವರ್ಷಗಳ ನಂತರ ಇಂದು ಮಹಾಸಭೆಯ 24ನೇ ಮಹಾ ಅಧಿವೇಶನವು ನನ್ನ ಜನ್ಮಭೂಮಿ, ಕರ್ಮಭೂಮಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ.
ಅಂದು ನಡೆದ ಮಹಾ ಅಧಿವೇಶನದಲ್ಲಿ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಲಿಂ. ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಧಿವೇಶನ ನಡೆಸುವ ಸಲುವಾಗಿ ಚಿರಸ್ಥಾಯಿ ನಿಧಿ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಪೂಜ್ಯರನ್ನೂ ಕೂಡ ಸ್ಮರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರಣಾಂತರಗಳಿಂದ ಎರಡು ಸಲ ಮಹಾಅಧಿವೇಶನವನ್ನು ಮುಂದೂಡಲಾಗಿತ್ತು. ಈ ಮಹಾಅಧಿವೇಶನ ನಡೆಸಲು ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಕಾರದೊಂದಿಗೆ ದಾವಣಗೆರೆ ಜಿಲ್ಲಾ ಘಟಕವು ಆತಿಥ್ಯ ವಹಿಸಿಕೊಂಡಿದೆ ಎಂದು ಹೇಳಿದರು.