ದಾವಣಗೆರೆ : ದೇವನಗರಿ ದಾವಣಗೆರೆಯಲ್ಲಿ ದಿನೇ, ದಿನೇ ಬಿಜೆಪಿ ಬಣ ರಾಜಕೀಯ ಜೋರಾಗುತ್ತಿದ್ದು, ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬೆಂಬಲಿಗರ ಸಭೆ (ಶನಿವಾರ) ನಡೆದಿದೆ. 

ದಾವಣಗೆರೆ ನಗರದ ಸಾಯಿ ಹೋಟೆಲ್‌ನಲ್ಲಿ
ಈ ನಾಯಕರ ಸಭೆ ತೀವ್ರ ಕುತೂಹಲ‌ ಕೆರಳಿಸಿದೆ. ಈ ನಡುವೆ ಬಿ.ವೈ. ವಿಜಯೇಂದ್ರ ಅವರ ಬೆಂಬಲಿಗರು, ರಾಜ್ಯದ ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಸಭೆ ನಡೆಯಲಿದೆ.

ಬಿ.ವೈ. ವಿಜಯೇಂದ್ರ ಕೈ ಬಲಪಡಿಸಬೇಕು ಮಧ್ಯ ಕರ್ನಾಟಕದಲ್ಲಿ ಒಂದು ಸಮಾವೇಶ ನಡೆಸಬೇಕು. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನ ಉಚ್ಚಾಟಿಸಲು ಹೈಕಮಾಂಡ್‌ಗೆ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವೈ, ಸಂಪಗಿ, ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು ಭಾಗಿಯಾಗಿದ್ದಾರೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಬಿ.ವೈ. ವಿಜಯೇಂದ್ರರಿಗೆ ಬಲವನ್ನ ಕೊಡಲು ಈ ಸಭೆ ನಡೆಯುತ್ತಿದೆ. ಈಗಾಗಲೇ ಆರು ಸಭೆ ನಡೆಸಿದ್ದೇವೆ, ಇದು ಏಳನೇ ಸಭೆಯಾಗಿದೆ. 40ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗಿಯಾಗುತ್ತೇವೆ. ಬಿಜೆಪಿ ಸದೃಢ ಆಗಬೇಕು ಹೀಗಾಗಿ ಈ ಸಭೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯೇಂದ್ರ ಅಧ್ಯಕ್ಷ ಆಗಿ ಒಂದು ವರ್ಷ ಆಯ್ತು, ಅವರ ನೇತೃತ್ವದಲ್ಲಿ 17 ಎಂಪಿ ಸೀಟುಗಳನ್ನ ಗೆದ್ದಿದ್ದೇವೆ. ಮುಂದೆ ಪಕ್ಷವನ್ನ ಬಲಪಡಿಸಲು ಮಾಜಿ ಶಾಸಕರು ನಿರ್ಣಯಿಸಿ ಈ ಸಭೆ ನಡೆಸಿದ್ದೇವೆ. ನಾಳೆ ದುಗ್ಗಮ್ಮನ ದರ್ಶನ ಪಡೆದು ದೇವಸ್ಥಾನ ದರ್ಶನ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮುಖ್ಯ ಸಭೆ ನಡೆಸುತ್ತೇವೆ. ಬಳಿಕ ನಮ್ಮ ನಿರ್ಣಯವನ್ನ ತಿಳಿಸುತ್ತೇವೆ ಎಂದು ಎಂ.ಪಿ. ರೇಣುಕಾಚಾರ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಯಾರ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲು ಈ ಸಭೆ ನಡೆಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಎಫ್ ಐಆರ್ ವಿಚಾರ, ಕಾಂಗ್ರೆಸ್ ಸರ್ಕಾರ ಅವರ ದುರಾಡಳಿತ ಮುಚ್ಚಿ ಹಾಕಿಕೊಳ್ಳಲು ಕೋವಿಡ್ ವಿಚಾರ ತೆಗೆದಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಭಾನುವಾರ ಎರಡನೇ ಸಭೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಗುರುತಿಸಿಕೊಂಡಿರುವ ಬಣ ಭಾನುವಾರ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಶಾಸಕರು ಹಾಗೂ ಸಚಿವರು ಶನಿವಾರ ರಾತ್ರಿಯೇ ನಗರಕ್ಕೆ ಆಗಮಿಸಿದ್ದಾರೆ. ದಾವಣಗೆರೆಯಲ್ಲಿ ಸಂಘಟಿಸುವುದಾಗಿ ಘೋಷಣೆ ಮಾಡಿದ್ದ ಬೃಹತ್ ಸಮಾವೇಶದ ಕುರಿತು ಚರ್ಚೆ ನಡೆಸಲಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದು, ಇದಕ್ಕೂ ಮುನ್ನ ಎಲ್ಲ ನಾಯಕರು ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿಯ ದರ್ಶನ ಪಡೆಯಲಿದ್ದಾರೆ. ಸಭೆಯಲ್ಲಿ 40ಕ್ಕೂ ಅಧಿಕ ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ.

.

 

 

 

Share.
Leave A Reply

Exit mobile version