
ದಾವಣಗೆರೆ : ದಾವಣಗೆರೆ ಹೇಳಿ, ಕೇಳಿ ಲೋಕಸಭೆಯಲ್ಲಿ ಬಿಜೆಪಿ ಭದ್ರಕೋಟೆ. ಇಲ್ಲಿ ಬಿಜೆಪಿ ಟಿಕೆಟ್ ಸಿಕ್ಕೋರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಎಲ್ಲರ ನಂಬಿಕೆ..ಅದಕ್ಕಾಗಿ ಸಾಮಾನ್ಯ ನಿವೃತ್ತ ಸರಕಾರಿ ನೌಕರರೊಬ್ಬರು ದಾವಣಗೆರೆ ಬಿಜೆಪಿ ಟಿಕೆಟ್ ಗಾಗಿ ಹರಸಾಹಸ ಮಾಡುತ್ತಿದ್ದಾರೆ…
ಹೌದು..ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆಯಲ್ಲಿ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಾಮಾನ್ಯ ನೌಕರನಾಗಿದ್ದ ಕೆ.ಬಿ.ಕೊಟ್ರೇಶ್ ಇಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ…ಅಲ್ಲದೇ ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ.
ರಾಜಕೀಯ ಗಾಢ್ ಫಾದರ್ ಇಲ್ಲ
ಈಗಾಗಲೇ ಬಿಜೆಪಿಯಲ್ಲಿ ಸಾಕಷ್ಟು ರಾಜಕಾರಣಿ ಮಕ್ಕಳು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಕೊಟ್ರೇಶ್ ಗೆ ಯಾವುದೇ ರಾಜಕಾರಣಿ ಗಾಡ್ ಫಾದರ್ ಇಲ್ಲ. ಹಾಗಾಗಿ ಟಿಕೆಟ್ ಗಾಗಿ ಹಲವು ಪ್ರಯತ್ನ ಮಾಡುತ್ತಿದ್ದಾರೆ.

ಹಿರಿಯ ನಾಯಕರ ದುಂಬಾಲು ಬಿದ್ದ ಟಿಕೆಟ್ ಆಕಾಂಕ್ಷಿಗಳು
ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಹರಸಾಹಸ ಮಾಡಿ ಹಿರಿಯ ನಾಯಕರ ಕಾಲು ಹಿಡಿದು ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಕೊಟ್ರೇಶ್ ಹಗಲು ರಾತ್ರಿ ಎನ್ನದೇ, ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಇನ್ನು ಕೆಲವರು ಹಿರಿಯ ನಾಯಕರ ಬೆಂಬಲದಿಂದ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೋರಾಟ ನಡೆಸುತ್ತಿದ್ದಾರೆ..
ಹೇಳೋದಕ್ಕೆ ಎಲ್ಲ ಒಂದೇ, ಆದರೆ ಜಾತಿ ಬೆಂಬಲ ಬೇಕಿದೆ
ಒಂದೆಡೆ ಜಾತಿ, ಧರ್ಮವನ್ನು ಮೀರಿ ಬೆಳೆಯಬೇಕೆಂಬ ಗಿಣಿಪಾಠ ಕೇಳುತ್ತಾ ಇದ್ದರೂ, ಅದು ರಾಜಕೀಯದಲ್ಲಿ ಹೇಳೋದಕ್ಕಷ್ಟೆ ಸೀಮಿತ. ರಾಜಕೀಯದಲ್ಲಿ ಸಮುದಾಯದ ಬೆಂಬಲ, ಹಿರಿಯ ನಾಯಕರ ಕೃಪಾಶೀರ್ವಾದ, ಆರ್ಥಿಕ ಬಲ ಬೇಕೇ ಬೇಕಿದೆ. ಇದು ಇಲ್ಲದೇ ಹೋದರೆ ಬೆಳೆಯುವುದು ಕಷ್ಟ ಸಾಧ್ಯ. ಕೆಲವೊಮ್ಮೆ ಕ್ಷೇತ್ರದಲ್ಲಿ ಜನ ಬೆಂಬಲ ಇದ್ದರೂ, ಗಾಢ್ ಫಾದರ್ ಇಲ್ಲದೆ ಹೋದರೆ ಮುನ್ನಡೆಯುವುದು ಅಸಾಧ್ಯ ಎನ್ನುವಂತಾಗಿದೆ.
ಮಾ. 20 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ
ಮಾ. 20 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ ಇದೆ. ಅಲ್ಲದೇ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವುದರಿಂದ ರಾಜ್ಯಮಟ್ಟದಲ್ಲಿ ರಾಜಕೀಯ ಪಕ್ಷಗಳ ನಾಯಕರು ನಮ್ಮ ಪಕ್ಷದ ಮುಂದಿನ ಗೆಲುವು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಒಂದಷ್ಟು ನಾಯಕರು ಕಣಕ್ಕಿಳಿಯಲು ಟಿಕೆಟ್ಗಾಗಿ ಈಗಿನಿಂದಲೇ ಕಸರತ್ತು ನಡೆಸುತ್ತಿದ್ದಾರೆ. ಆದರೆ ಕಸರತ್ತು, ತಂತ್ರ ಮಾಡಿ ಕಣಕ್ಕಿಳಿದರೂ ಕೂಡ ಅಂತಿಮವಾಗಿ ಯಾರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡುವವರು ಮತದಾರರೇ.
ಕೇವಲ ಎರಡು ತಿಂಗಳು ಬಾಕಿ
ಲೋಕಸಭಾ ಚುನಾವಣೆಗೆ ಕೇವಲ ಎರಡು ತಿಂಗಳಷ್ಟೆ ಬಾಕಿಯಿದೆ. ಈ ಎರಡು ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ಹೇಗೆ ಬೇಕಾದರೂ ತಿರುವು ಪಡೆದುಕೊಳ್ಳಬಹುದು. ಅದೃಷ್ಟ ಕುಲಾಯಿಸಿದರೆ ಟಿಕೆಟ್ ಸಿಗಲೂ ಬಹುದು. ಅಲ್ಲದೇ ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಬಹಳಷ್ಟು ನಾಯಕರು ಕೊನೆಗಳಿಗೆಯಲ್ಲಿ ತಮ್ಮ ಪಕ್ಷ ನಿಷ್ಠೆ ಬದಲಾಯಿಸುವ ಸಾಧ್ಯತೆಯೂ ಹೆಚ್ಚಿದೆ.
ಸಮೀಕ್ಷೆಯಲ್ಲಿ ಪಾಸ್ ಆದ್ರೇ ಮಾತ್ರ ಟಿಕೆಟ್?
ಎಷ್ಟೇ ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಸಮೀಕ್ಷೆಯಲ್ಲಿ ಪಾಸ್ ಆದ್ರೇ ಮಾತ್ರ ಟಿಕೆಟ್ ಸಿಗಲಿದೆ. ಹಾಗಾಗಿ ಆಕಾಂಕ್ಷಿಗಳು ಜನರ ಬಳಿ ಹೋಗಲು ಪ್ರಯತ್ನಿಸುತ್ತಿದ್ದಾರೆ.ಇನ್ನು ಪಕ್ಷ ಬದಲಾಯಿಸುವ ನಾಯಕರು ಪ್ರಭಾವಿಗಳು ಮತ್ತು ವೈಯಕ್ತಿಕ ವರ್ಚಸ್ಸು ಹೊಂದಿರುವ ಕಾರಣದಿಂದ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ನಾಯಕರಾಗಿರುತ್ತಾರೆ. ಆದ್ದರಿಂದ ಸರ್ವೆ ನಡೆಯುತ್ತದೆ. ಇಲ್ಲಿ ಗೆದ್ದವರಿಗೆ ಟಿಕೆಟ್ ಸಿಗಲಿದೆ.
ಟಿಕೆಟ್ ಪಡೆಯಲು ನಾನಾ ಕಸರತ್ತು
ರಾಜಕೀಯದಲ್ಲಿ ಪಕ್ಷದ ಗೆಲುವು ಮತ್ತು ಅಧಿಕಾರಕ್ಕೆ ಬರಲು ಮ್ಯಾಜಿಕ್ ಸಂಖ್ಯೆ ಅಗತ್ಯವಾಗಿರುವುದರಿಂದ ಕೊನೆಗಳಿಗೆಯಲ್ಲಿ ಅಧಿಕಾರದ ಮುಂದೆ ಸಿದ್ಧಾಂತಗಳನ್ನೆಲ್ಲ ಬದಿಗೆ ಸರಿಸಿ ಗೆಲ್ಲುವ ಕುದುರೆಯ ಬಾಲ ಹಿಡಿಯುವ ಪ್ರವೃತ್ತಿ ಜಾಸ್ತಿಯಾಗಿದೆ. ಈ ಕಾರಣದಿಂದಾಗಿ ತಳಮಟ್ಟದಲ್ಲಿ ಗುರುತಿಸಿಕೊಂಡು ತಾನು ಕೂಡ ಎಂಪಿ ಆಗಬೇಕೆಂಬ ಕನಸು ಕಾಣುವ ಬಹುತೇಕ ನಾಯಕರ ಬಯಕೆಗಳು ಈಡೇರುವುದು ಕಷ್ಟಸಾಧ್ಯವಾಗಿದೆ.
ಆದರೂ ಒಂದಷ್ಟು ನಾಯಕರು ರಾಜಕೀಯ ದೃಷ್ಟಿಯಿಂದಲೇ ಹೆಚ್ಚು, ಹೆಚ್ಚಾಗಿ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಜನರ ನಡುವೆ ಹೋಗುತ್ತಿದ್ದಾರೆ. ಮತ್ತೊಂದಷ್ಟು ನಾಯಕರು ಜನನಾಯಕನಾಗುವ ಕಸರತ್ತು ಮಾಡಿದ್ದಾರೆ.
ಆದರೆ ಕ್ಷೇತ್ರದಲ್ಲಿರುವ ನಾಯಕರು ಏನೇ ಸಮಾಜ ಸೇವೆ ಮಾಡಿ ಜನರಿಗೆ ಹತ್ತಿರವಾಗಿದ್ದರೂ ಅಂತಿಮವಾಗಿ ಸ್ಪರ್ಧೆಗೆ ಟಿಕೆಟ್ ನೀಡುವವರು ಪಕ್ಷದ ರಾಜ್ಯಮಟ್ಟದ ನಾಯಕರಾಗಿದ್ದಾರೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ? ಎಂಬುದು ಕೂಡ ಮುಖ್ಯವಾಗಿದೆ.
ಹಿರಿಯ ನಾಯಕರ ಕೃಪಾಶೀರ್ವಾದ ಅಗತ್ಯ
ರಾಜಕೀಯದಲ್ಲಿ ಜನರ ನಡುವೆ ಗುರುತಿಸಿಕೊಂಡು, ಪಕ್ಷಕ್ಕಾಗಿ ದುಡಿಯುತ್ತಿದ್ದರೂ, ಮೇಲ್ಮಟ್ಟದ ನಾಯಕರ ಕೃಪಕಟಾಕ್ಷ ಬೇಕೆ ಬೇಕಿದೆ. ಇಲ್ಲದೇ ಅವರು ಬೆಳೆಯುವುದು ಕಷ್ಟವೇ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹಿರಿಯ ನಾಯಕರ ಕೃಪಾಶೀರ್ವಾದ ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ.
ಹಿರಿಯಲು ಅಧಿಕಾರ ಬಿಡುತ್ತಿಲ್ಲ, ಕಿರಿಯರಿಗೆ ಸಿಗುತ್ತಿಲ್ಲ
ಈಗಾಗಲೇ ರಾಜಕೀಯ ಪಕ್ಷದ ಉನ್ನತ ಸ್ಥಾನದಲ್ಲಿರುವ ಹಿರಿಯ ನಾಯಕರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಜತೆಗೆ ತಾವು ತಮ್ಮ ಸ್ಥಾನವನ್ನು ಯುವ ನಾಯಕರಿಗೆ ಬಿಟ್ಟುಕೊಟ್ಟು, ನಿವೃತ್ತಿ ಪಡೆಯುವ ಮಾತನಾಡುತ್ತಿಲ್ಲ. ಇದರಿಂದಾಗಿ ನಾಯಕರು ತಾವು ಮತ್ತು ತಮ್ಮ ಕುಟುಂಬ ವರ್ಗವಷ್ಟೆ ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬೇರೆಯವರಿಗೆ ಅವಕಾಶವೇ ಇಲ್ಲದಂತಾಗಿದೆ. ಕೆಲವು ನಾಯಕರಂತು ಪಕ್ಷದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಕಳೆದ ಕೆಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅದನ್ನು ಪ್ರಚಾರ ಮಾಡಿ ಪಕ್ಷದ ಹಿರಿಯ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲೂ ಬಹುದು. ಅಲ್ಲದೆ ಪಕ್ಷದ ವತಿಯಿಂದ ಟಿಕೆಟ್ ಸಿಗದೆ ಹೋದರೆ ಅಂತಹವರು ತಿರುಗಿ ಬಿದ್ದು ಚುನಾವಣೆಯಲ್ಲಿ ತಟಸ್ಥರಾಗಿದ್ದು ಬಿಡಬಹುದು.
ಕೊನೆ ಆಟ ರೋಚಕ
ರಾಜಕೀಯದಲ್ಲಿ ಎಲ್ಲವೂ ಸರಿಯಿದೆ. ಎಲ್ಲರೂ ನಮ್ಮವರೇ ಎನ್ನಲಾಗುವುದಿಲ್ಲ. ಚುನಾವಣೆ ತನಕ ಪಕ್ಷಕ್ಕೆ ನಿಷ್ಠಾವಂತರಾಗಿದ್ದವರು ಕೊನೆಗಳಿಗೆಯಲ್ಲಿ ತಿರುಗಿ ಬಿದ್ದರೂ ಅಚ್ಚರಿಪಡಬೇಕಾಗಿಲ್ಲ. ಆದರೂ ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಿರೀಕ್ಷೆ ಮಾಡುವುದು ಅಸಾಧ್ಯವೇ.
ಮತದಾರರ ತೀರ್ಮಾನ ಅಂತಿಮ
ಸದ್ಯಕ್ಕೆ ಎಲ್ಲರ ಮುಂದೆ ಇರುವುದು 2024ರ ಲೋಕಸಭೆ ಚುನಾವಣೆಯಾಗಿದೆ. ಈ ಬಾರಿಯ ಚುನಾವಣೆಗೆ ಸದ್ಯ ಕಾಂಗ್ರೆಸ್, ಬಿಜೆಪಿ ನಡುವೆ ನೇರಾಹಣಾಹಣಿ ಇದೆ. ಎರಡು ಪಕ್ಷಗಳ ನಾಯಕರು ಕೂಡ ನಮ್ಮದೇ ಗೆಲುವು ಎಂಬ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ.ಅದು ಏನೇ ಇರಲಿ ಅಧಿಕಾರದ ವಿಚಾರ ಬಂದಾಗ ಯಾರು ಯಾರಿಗೆ ಮಿತ್ರರಾಗುತ್ತಾರೆ ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಆದರೆ ರಾಜಕೀಯ ನಾಯಕರು ಏನೇ ಕಸರತ್ತು ಮಾಡಿದರೂ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರರ ಕೈಯ್ಯಲ್ಲಿದೆ. ಹಾಗಾಗಿ ಮತದಾರರ ತೀರ್ಮಾನವೇ ಅಂತಿಮವಾಗಲಿದ್ದು, ಟಿಕೆಟ್ ಆಟದ ನಂತರವೇ ಪೂರ್ಣ ಚಿತ್ರಣ ಸಿಗಲಿದೆ.