ಜಗಳೂರು : ಬರ ಪೀಡಿತ ತಾಲೂಕೆಂದೇ ಬಿಂಬಿತವಾಗಿರುವ ಊರಿನಲ್ಲಿ ಕೈ, ಕಮಲ ಜಿದ್ದಾಜಿದ್ದಿ ಜೋರಿದ್ದು, ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಕೂಡ ಅಷ್ಟೇ ಜೋರಾಗಿ ಅಬ್ಬರಿಸುತ್ತಿದ್ದಾರೆ
25 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟನಂತರ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದರೂ ಅಭಿವೃದ್ಧಿ ಅಷ್ಟಕ್ಕಷ್ಟೇ.
ಈ ಹಿಂದೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಮಾಜಿ ಶಾಸಕರಾದ ಟಿ. ಗುರುಸಿದ್ದನಗೌಡ ಕಾಂಗ್ರೆಸ್ಗೆ ಮತ್ತು ಎಚ್.ಪಿ.ರಾಜೇಶ್ ಬಿಜೆಪಿಗೆ ಮರಳಿ ಈಗ ತಾತ್ವಿಕವಾಗಿ ವಿರುದ್ಧ ದಿಕ್ಕಿಗೆ ಹೋಗಿದ್ದಾರೆ.
2023ರ ಚುನಾವಣೆಯಲ್ಲಿ ಎಚ್.ಪಿ. ರಾಜೇಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಮಾಜಿ ಶಾಸಕ ಗುರುಸಿದ್ದನಗೌಡರು ಮತ್ತು ಅವರ ಪುತ್ರರು ತೆರೆಮರೆಯಲ್ಲಿ ಎಚ್.ಪಿ.ರಾಜೇಶ್ ಅವರನ್ನು ಬೆಂಬಲಿಸಿದ್ದರು. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಕೊಂಚ ಹೆಚ್ಚಿದ್ದಾರೆ. ಜತೆಗೆ ಅಹಿಂದ ಮತಗಳು ನಿರ್ಣಾಯಕ, ಮಾಜಿ ಶಾಸಕರಾದ ಗುರುಸಿದ್ದನಗೌಡರು, ಹಾಲಿ ಶಾಸಕ ದೇವೇಂದ್ರಪ್ಪ ಜೊತೆ ‘ಕೈ’ ಜೋಡಿಸಿ ಎಲ್ಲ ಸಮುದಾಯದ ಮತಗಳಿಗೆ ಗಾಳ ಹಾಕುತ್ತಿದ್ದಾರೆ. ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಹಾಲುಮತದ ಜಿ.ಬಿ. ವಿನಯ್ ಕುಮಾರ್ ಅಹಿಂದ ಜೇನುಗೂಡಿಗೆ ಕೈ ಹಾಕಿದ್ದು ಕಾಂಗ್ರೆಸ್ ಮೂಲಕ್ಕೆ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಪ್ರಸ್ತುತ ಲೋಕ ಸಮರದಲ್ಲಿ ಸಮಗ್ರ ನೀರಾವರಿ ಯೋಜನೆ ಮೂಲಕ ಬರ ಮುಕ್ತ ಜಗಳೂರು ಕ್ಷೇತ್ರ ಮಾಡುವ ಮಾತುಗಳು ಎರಡೂ ಪಕ್ಷಗಳ ಅಭ್ಯರ್ಥಿಗಳಿಗಿಂದ ಕೇಳಿ ಬರುತ್ತಿವೆ. ಆದರೆ, ಈ ಹಿಂದೆ ಗೆದ್ದವರೆಲ್ಲ ಕ್ಷೇತ್ರವನ್ನು ಬರಮುಕ್ತ ಮಾಡುವ ಭರವಸೆ ನೀಡಿ ಕೈ ಕೊಟ್ಟವರೇ ಹೆಚ್ಚು ಎನ್ನುತ್ತಾರೆ ಮತದಾರರು.
ಹಿಂದಿನ ರಾಜಕಾರಣ ಹೇಗಿತ್ತು
ಜಗಳೂರು ಕ್ಷೇತ್ರದ ಹಳೆಯ ತಲೆಮಾರಿನ ರಾಜಕಾರಣಿ ಜೆ.ಎಂ.ಇಮಾಂ ಸಾಹೇಬರ ಕಾಲದಲ್ಲಿ ಕರ್ನಾಟಕ ಹಾಗೂ ಭಾರತದ ರಾಜಕಾರಣದಲ್ಲಿ ತಮ್ಮದೇ ಕೆಲಸ ಮಾಡುವ ಮೂಲಕ ಖ್ಯಾತಿಯಾಗಿದ್ದರು. 1952 ಮತ್ತು 1967ರಲ್ಲಿ ಲೋಕಸಭಾ ಸದಸ್ಯರಾಗಿ ಸಮರ್ಥವಾಗಿ ಕಾರ್ಯನಿರ್ವಹಣೆಯೊಂದಿಗೆ ಸೇವೆ-ತ್ಯಾಗ ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದವರು. ನಂತರ ಜಗಳೂರು ಕ್ಷೇತ್ರದ ಮತ್ತೊಬ್ಬ ಸಾತ್ವಿಕ ರಾಜಕಾರಣಿ ಹಾಲುಮತ ಸಮಾಜದ ಚನ್ನಯ್ಯ ಒಡೆಯರ್ 1980ರಲ್ಲಿ ರಾಜ್ಯ ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟವರು. 1984, 1989, 1991ರ ಲೋಕಸಮರದಲ್ಲಿ ಗೆಲ್ಲುವ ಮೂಲಕ ತಮ್ಮದೇ ಛಾಪು ಹೊಂದಿದ್ದರು.
ಕ್ಷೇತ್ರದ ರಾಜಕೀಯ ಇತಿಹಾಸ:
ಜಗಳೂರು ಕ್ಷೇತ್ರದಲ್ಲಿ ಈ ವರೆಗೆ ಉಪಚುನಾವಣೆ ಸೇರಿ 16 ಬಾರಿ ವಿಧಾನಸಭಾ ಚುನಾವಣೆ ನಡೆದಿದ್ದು, ಕಾಂಗ್ರೆಸ್ 9 ಬಾರಿ, ಬಿಜೆಪಿ ಮೂರು ಬಾರಿ, ಕೆಎಂಪಿ, ಕೆಸಿಪಿ, ಸ್ವತಂತ್ರ, ಕೆಜೆಪಿ ತಲಾ ಒಂದು ಸಲ ಗೆಲುವು ಸಾಧಿಸಿವೆ. 1972ರಿಂದ 1989 ರವರೆಗೆ ಜಿ.ಎಚ್. ಅಶ್ವತ್ಥರೆಡ್ಡಿ ಅವರು ನಿರಂತರವಾಗಿ ಶಾಸಕರಾದರು. 1994ರ ಚುನಾವಣೆಯಲ್ಲಿ ಎಂ.ಬಸಪ್ಪ ಶಾಸಕರಾದರು, ನಂತರ 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎಚ್. ಅಶ್ವತ್ಥರೆಡ್ಡಿ ಮತ್ತೆ ಶಾಸಕರಾದರು. ವಿಧಾನಸಭೆ ಚುನಾವಣೆಗಳಲ್ಲಿ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಾಗಲೆಲ್ಲಾ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲೀಡ್ ಕೊಟ್ಟಿತ್ತು.
ಬಿಜೆಪಿಯಿಂದ ಗೆದ್ದಿದ್ದ ಗುರುಸಿದ್ದನಗೌಡ ರಾಜಕೀಯ ಕ್ಷೇತ್ರದಲ್ಲಿ 2004ರ ನಂತರ ಸಾಕಷ್ಟು ಬದಲಾವಣೆಗೆ ನಾಂದಿಯಾಗಿ ಟಿ. ಗುರುಸಿದ್ದನಗೌಡ ಬಿಜೆಪಿಯಿಂದ ಶಾಸಕರಾದರು. 2008ರಲ್ಲಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದಾಗ, ಗುರುಸಿದ್ದನಗೌಡರ ಬದಲಿಗೆ ಬಿಜೆಪಿಯಿಂದ ಎಚ್.ಪಿ.ರಾಜೇಶ್ ನಿಂತಾಗ ಕಾಂಗ್ರೆಸ್ ಪಕ್ಷದಿಂದ ಎಸ್.ವಿ.ರಾಮಚಂದ್ರ ಶಾಸಕರಾಗಿ ಆಯ್ಕೆಯಾದರು. 2011ರಲ್ಲಿ ಎಸ್.ವಿ.ರಾಮಚಂದ್ರ ಬಿಜೆಪಿ ಸೇರಿ ಕೆಜೆಪಿ ಅಭ್ಯರ್ಥಿಯಾಗಿದ್ದ ಎಚ್.ಪಿ. ರಾಜೇಶ್ ಅವರನ್ನು ಮತ್ತೆ ಪರಾಭವಗೊಳಿಸಿದರು.
ಕಾಂಗ್ರೆಸ್ ಸೇರಿದ ಎಚ್.ಪಿ.ರಾಜೇಶ್, ರಾಮಚಂದ್ರ ಅವರನ್ನು ಮಣಿಸಿ ತಾವು ಶಾಸಕರಾದರು. 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ. ರಾಮಚಂದ್ರ ಕಾಂಗ್ರೆಸ್ ಅಭ್ಯ ರ್ಥಿ ಎಚ್.ಪಿ.ರಾಜೇಶ್ ಅವರನ್ನು ಸೋಲಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಎದುರು ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಮತ್ತು ಬಂಡಾಯ ಅಭ್ಯರ್ಥಿ ಎಚ್.ಪಿ.ರಾಜೇಶ್ ಇಬ್ಬರೂ ಕಡಿಮೆ ಅಂತರದಲ್ಲಿ ಸೋತರು. ಒಟ್ಟಾರೆ ಅಹಿಂದ ಮತದಾರರು ಯಾರ ಕೈ ಹಿಡಿಯುತ್ತಾರೆಯೇ ಅವರು ಗೆಲುವಿನ ದಡ ಮುಟ್ಟುತ್ತಾರೆ.
- 2023ರ ಜಗಳೂರು ವಿಧಾನಸಭೆ ಫಲಿತಾಂಶ
- ಬಿ.ದೇವೇಂದ್ರಪ್ಪ (ಕಾಂಗ್ರೆಸ್) 50,765
- ರಾಮಚಂದ್ರ(ಬಿಜೆಪಿ) 49,891
- ಎಚ್.ಪಿ.ರಾಜೇಶ್ (ಪಕ್ಷೇತರ) 49,442
- # ಶೇ.70ರಷ್ಟು ಮತದಾನ
- 2019ರ ಲೋಕಸಭೆ ಪಡೆದ ಮತಗಳು
- ಜಿ.ಎಂ. ಸಿದ್ದೇಶ್ವರ್ – 72,948
- ಎಚ್.ಬಿ. ಮಂಜಪ್ಪ – 56,968 ಮತ ಪಡೆದಿದ್ದರು
- ಮತದಾರರ ವಿವರ
- ಪುರುಷ ಮತದಾರರು 1,00,046
- ಮಹಿಳಾ ಮತದಾರರು 98,759
- 10 ಲಿಂಗತ್ವ ಅಲ್ಪಸಂಖ್ಯಾತರು
- ಒಟ್ಟು ಮತದಾರರು
- 1,98,815