ಜಗಳೂರು: ವರ್ಲ್‍ಪೂಲ್ ಹೆಸರಿನ ಆನ್‍ಲೈನ್ ಆಪ್ ಮೂಲಕ ಹಣ ಡಬಲ್ ದಂಧೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 35ಕ್ಕೂ ಹೆಚ್ಚು ಜನರು 30.71 ಲಕ್ಷ ರೂ ಕಳೆದುಕೊಂಡು ಮೋಸ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವರ್ಲ್‍ಪೂಲ್ ಹೆಸರಿನ ಬಿಗ್ ಇನ್‍ವೆಸ್ಟ್‍ಮೆಂಟ್ ಕಂಪನಿಯ ಹೆಸರಿನಲ್ಲಿ ಆನ್‍ಲೈನ್ ಖದೀಮರು ವಂಚಿಸಿದ್ದಾರೆ. ಪ್ರಸ್ತುತ ವರ್ಷದ ಫೆ.20 ರಿಂದ ಮೇ.30ರವರೆಗೆ ತಾಲೂಕಿನ ಕಸವನಹಳ್ಳಿ, ಜಗಳೂರು ಗಡಿಮಾಕುಂಟೆ ಸೇರಿದಂತೆ ವಿವಿಧ ಗ್ರಾಮಗಳ 35ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ.

ಆನ್‍ಲೈನ್ ವಂಚಕರ ಬಲೆಗೆ ಬಿದ್ದಿರುವ ಅಮಾಯಕ ಜನರು ಹಣ ಕಳೆದುಕೊಂಡು ಈಗ ಜಗಳೂರು ಪಟ್ಟಣದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಆನ್‍ಲೈನ್ ವಂಚಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.ವರ್ಲ್‍ಪೂಲ್ ವಿಶ್ವದ ಅತ್ಯಂತ ದೊಡ್ಡ ಕಂಪನಿಯಾಗಿದ್ದು ಫ್ರಿಜ್ಟ್, ವಾಷಿಂಗ್ ಮಷೀನ್ ಸೇರಿದಂತೆ ವಿವಿಧ ಗೃಹ ಬಳಕೆಯ ತಾಂತ್ರಿಕ ಪ್ರಾಡಕ್ಟ್‍ಗಳು ಮಾರುಕಟ್ಟೆಯಲ್ಲಿವೆ. ಅದೇ ಹೆಸರಿನಲ್ಲಿ ನಕಲಿ ಆಪ್ ಬಳಸಿದ ಆನ್‍ಲೈನ್ ವಂಚಕರು ಕೂಲಿ ಕೆಲಸ ಮಾಡುವ ಅನೇಕರಿಗೆ ಹಣ ಡಬ್ಬಲ್ ದಂಧೆಗೆ ಬೀಳಿಸಿಕೊಂಡು ವಂಚಿಸಿದ್ದಾರೆ.

ಉದಾಹಣೆಗೆ 520 ರೂಗಳನ್ನು ಆನ್‍ಲೈನ್‍ಲ್ಲಿ ಹಣ ಹೂಡಿಕೆ ಮಾಡಿದರೆ ತಕ್ಷಣ ದ್ವಿಗುಣ ಹಣ 1040 ರೂ ಕೊಟ್ಟ ವಂಚಕರು, ಅದರಂತೆ ಒಂದಕ್ಕೆ ಎರಡು ಪಟ್ಟು ಹಣವನ್ನು ಕೆಲವರಿಗೆ ಕೊಟ್ಟ ನಂತರ ಅದನ್ನೇ ನಂಬಿದ ಜನರು ಆನ್‍ಲೈನ್ ಆಪ್ ಹಣ ದ್ವಿಗುಣದ ಆಸೆಗೆ ಬಿದ್ದು ಹೂಡಿಕೆ ಮಾಡಿದ್ದಾರೆ.

ಹೂಡಿಕೆ ಮಾಡಿದವರಲ್ಲಿ ಕೂಲಿಕಾರರು, ಬಡವರು ಮತ್ತು ಯುವಕರೇ ಹೆಚ್ಚು. ಕೂಲಿ ಕೆಲಸ ಮಾಡಿ ಹಣ ಕೂಡಿಟ್ಟು ಹೂಡಿಕೆ ಮಾಡಿದ 35ಕ್ಕೂ ಹೆಚ್ಚು ಜನ 30.17 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಆನ್‍ಲೈನ್ ವಂಚಕರ ಬಲೆಗೆ ಬಿದ್ದು 3.ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಕಸವನಹಳ್ಳಿ ಗ್ರಾಮದ ಸಂತೋಷ್ ಸೇರಿದಂತೆ 35ಕ್ಕೂ ಹೆಚ್ಚು ಮೋಸ ಹೋದವರು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್‍ಸ್ಪೆಕ್ಟರ್ ಡಿ.ಶ್ರೀನಿವಾಸ್‍ರಾವ್ ನೇತೃತ್ವದಲ್ಲಿ ಪಿಎಸ್‍ಐ ಎಸ್.ಡಿ.ಸಾಗರ್ ಹಾಗೂ ಆಶಾ ತನಿಖೆ ನಡೆಸುತ್ತಿದ್ದಾರೆ.

Share.
Leave A Reply

Exit mobile version