


ಜಗಳೂರು: ಅದು ಸರಕಾರಿ ನೌಕರರು, ವ್ಯಾಪಾರಸ್ಥರು, ವಕೀಲರು, ಅಧಿಕಾರಿಗಳು ವಾಸವಾಗಿರುವ ಬಡಾವಣೆ. ಆದರೆ ಆ ಬಡಾವಣೆಗಳಿಗೆ ಹೋಗುವ ಏಕೈಕ ಮಾರ್ಗದಲ್ಲಿ ಸೇತುವೆ ಮುರಿದು ಬಿದ್ದು ನಾಲ್ಕು ವರ್ಷಗಳೇ ಕಳೆದರೂ ಪಪಂ ಸದಸ್ಯರಾಗಲಿ, ಮುಖ್ಯಾಧಿಕಾರಿಗಳಾಗಲಿ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ.
ಹೌದು, ಪಟ್ಟಣದ ದೇವೇಗೌಡ ಬಡಾವಣೆ ಮುಖ್ಯರಸ್ತೆಯ ಅಶ್ವನಿ ಲೇಔಟ್ ಮತ್ತು ಮುದ್ದಮ್ಮ ಮತ್ತು ಬಸಮ್ಮ ಲೇಔಟ್‍ಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವದು. ಲೇಔಟ್ ಮಾಡುವಾಗ ಹಳ್ಳಕ್ಕೆ ಸೇತುವೆ ಕಟ್ಟಿ ನೆಪ ಮಾತ್ರಕ್ಕೆ ಕಾಮಗಾರಿ ಮುಗಿಸಿ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡಿಕೊಂಡು ನೆಮ್ಮದಿಯಾಗಿದ್ದಾರೆ. ಆದರೆ ವಾಸವಾಗಿರುವ ಬಡಾವಣೆ ನಿವಾಸಿಗಳಿಗೆ ನಿತ್ಯ ಫಜೀತಿ ಶುರುವಾಗಿದೆ.

ಕಬ್ಬಿಣದ ತುಂಡುಗಳು ಅಸ್ತಿ ಪಂಜರದಂತೆ ಇದೆ
ಪಿಲ್ಲರ್ ನಿರ್ಮಿಸದೇ ಬೇಕೋ ಬೇಡೋ ಎಂಬಂತೆ ಕಳಪೆ ಸೇತುವೆ ಕಟ್ಟಿದ್ದರು. ನಂತರ ಬಾರಿ ಮಳೆ ಮತ್ತು ಬೃಹತ್ ವಾಹನಗಳ ಓಡಾಟದಿಂದ ಸೇತುವೆಗೆ ಹಾಕಿದ್ದ ಸಿಮೆಂಟ್ ಮುಗುಚಿಬಿದ್ದು ಕಬ್ಬಿಣದ ತುಂಡುಗಳು ಅಸ್ತಿಪಂಜರದಂತೆ ಘೋಚರಿಸುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದರೂ ಆಗಿನ ಶಾಸಕ ಎಸ್.ವಿ.ರಾಮಚಂದ್ರ ತಿರುಗಿಯೂ ನೋಡಲಿಲ್ಲ. ಪಪಂ ಚೀಫ್ ಆಫೀಸರ್ ಆಗಿದ್ದ ಲೋಕ್ಯಾನಾಯ್ಕ್ ಈಗಲೂ ಅಧಿಕಾರಿಯಾಗಿದ್ದಾರೆ. ಆದರೆ ಅವರಿಂದಲೂ ಬಡಾವಣೆ ನಿವಾಸಿಗಳಿಗೆ ನ್ಯಾಯ ಮರಿಚೀಕೆಯಾಗಿದೆ.
ಜನರಿಗೆ ಇದೇ ರಸ್ತೆಯೇ ಮೂಲ
ವಿವಿಧ ಬಡಾವಣೆಗಳ ನಿವಾಸಿಗಳು ಪಟ್ಟಣಕ್ಕೆ ಹೋಗಬೇಕಾದರೆ ಇದೇ ರಸ್ತೆಯನ್ನೇ ಹೆಚ್ಚು ಬಳಸುತ್ತಾರೆ. ಅಷ್ಟೇ ಅಲ್ಲ ಶಾಲಾ ಮಕ್ಕಳು ಶಾಲೆಗಳಿಗೆ ಹೋಗಬೇಕು ಎಂದರೆ ಇದೇ ಪ್ರಮುಖ ರಸ್ತೆಯಾಗಿದೆ.
ಈ ರಸ್ತೆಯಲ್ಲಿ ಸೇತುವೆ ದುಸ್ತಿತಿಯಲ್ಲಿರುವ ಕಾರಣ ಶಾಲಾ ವಾಹನಗಳು ಬಾರದೇ ಇರುವ ಕಾರಣ ಪೋಷಕರೇ ತಮ್ಮ ಮಕ್ಕಳನ್ನು ನಿತ್ಯ ಶಾಲೆಗೆ ದ್ವಿಕ್ರವಾಹನದಲ್ಲಿ ಬಿಟ್ಟು ಬರಬೇಕು. ಅಷ್ಟೇ ಅಲ್ಲ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡಲು ಇಟ್ಟಿಗೆ, ಸಿಮೆಂಟ್, ಮರಳು ಸಾಗಾಣೆ ಮಾಡಲು ಸಾಧ್ಯವೇ ಇಲ್ಲ. ಕಿಮೀ ಗಟ್ಟಲೆ ಸುತ್ತಿ ಬಳಸಿ ಬರಬೇಕು. ಇಷ್ಟೊಂದು ಸಮಸ್ಯೆಯಿದ್ದರೂ ಅಧಿಕಾರಿಗಳು ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ.
ಇತ್ತ ಗಮನಹರಿಸದ ಶಾಸಕ ದೇವೇಂದ್ರಪ್ಪ
ಸಾರ್ವಜನಿಕರ ಮೂಲ ಸೌಕರ್ಯಕ್ಕೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಶಾಸಕ ಬಿ.ದೇವೇಂದ್ರಪ್ಪ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಮುಕ್ತಿಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ ಎಂಬುದು ಬಡಾವಣೆ ನಿವಾಸಿಗಳ ಬೇಡಿಕೆಯಾಗಿದೆ.
ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ
ವರ್ಗಾವಣೆಯಾಗಿ ಈಗಷ್ಟೇ ಬಂದಿದ್ದು ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ತಕ್ಷಣವೇ ಬಡಾವಣೆ ನಿವಾಸಿಗಳ ಸಮಸ್ಯೆಗೆ ಮುಕ್ತಿಕೊಡಿಸಲು ಪಪಂ ಸದಸ್ಯರು ಮತ್ತು ಚೀಫ್ ಆಫೀಸರ್ ಜೊತೆ ಸಭೆ ನಡೆಸಿ ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ,ಸೈಯದ್ ಕಲೀಂಉಲ್ಲಾ.
ಕಳೆದ ನಾಲ್ಕು ವರ್ಷಗಳಿಂದ ಸೇತುವೆ ಮುರಿದು ಬಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ಮತ್ತು ಕಳೆದ ಬಾರಿ ಶಾಸಕರಾಗಿದ್ದ ಎಸ್.ವಿ.ರಾಮಚಂದ್ರ ಗಮನಕ್ಕೆ ತಂದರೂ ಯಾರೂ ಗಮನ ಹರಿಸುತ್ತಿಲ್ಲ. ನೂತನ ಶಾಸಕರಾದ ದೇವೇಂದ್ರಪ್ಪ ಈ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ
ಹಕ್ಕೊತ್ತಾಯ
ಪಪಂನಲ್ಲಿರುವ ಪ್ರಸ್ತುತ ಅಧ್ಯಕ್ಷರಿಲ್ಲ. ತಹಶೀಲ್ದಾರ್ ಅವರೇ ಆಡಳಿತಾಧಿಕಾರಿಗಳಾಗಿದ್ದಾರೆ. ಶಾಸಕರಾದ ದೇವೇಂದ್ರಪ್ಪ ಅವರು ಈ ಸಮಸ್ಯೆಗೆ ಮುಕ್ತಿಕೊಡಿಸಿ ಶೀಘ್ರವೇ ಕಾಮಗಾರಿ ಮುಗಿಸಲಿ ಎಂದು ಸಾರ್ವಜನಿಕರು ಹಕ್ಕೊತ್ತಾಯಿಸಿದ್ದಾರೆ.