ಶಿವಮೊಗ್ಗ: ‘ವಿದ್ಯಾರ್ಥಿಗಳಲ್ಲಿ ಯೋಚನಾ ಶಕ್ತಿ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಹೇಳಿದರು. ಇಲ್ಲಿನ ಎಲ್‌ಬಿಎಸ್ ನಗರದ ಆರ್ಯ ಪಿಯು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿ–ಪಾಲಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಯೋಚನಾ ಶಕ್ತಿ ಬೆಳೆದರೆ ಮಾತ್ರ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣೆ ಮಾಡುವ ಗುಣ ಮತ್ತು ಕೌಶಲ ಬೆಳೆಯುತ್ತದೆ. ಮಕ್ಕಳನ್ನು ಆಟವಾಡಲು ಬಿಡಬೇಕು. ಗೆಳೆಯರೊಂದಿಗೆ ಸೇರಲು ಬಿಡಬೇಕು. ಇದರಿಂದಾಗಿ ಅವರಲ್ಲಿ ವಿಭಿನ್ನವಾದ ಯೋಚನಾ ಶಕ್ತಿ ಬೆಳೆಯುತ್ತದೆ. ಸವಾಲುಗಳನ್ನು ಸ್ವೀಕಾರ ಮಾಡುತ್ತಾರೆ’ ಎಂದು ಸಲಹೆ ನೀಡಿದರು.
‘ಎಂಜಿನಿಯರಿAಗ್ ಓದುವ ವಿದ್ಯಾರ್ಥಿಗಳೂ ಟ್ಯೂಷನ್‌ಗೆ ಹೋಗುತ್ತಾರೆ. ಹಾಗಾದರೆ ಕಾಲೇಜಿನಲ್ಲಿ ಏನು ಬೋಧನೆ ಮಾಡುತ್ತಾರೆ ಎಂಬುದನ್ನು ನಾವು ಅರಿಯಬೇಕಿದೆ. ಎಂಜಿನಿಯರಿAಗ್, ವೈದ್ಯಕೀಯ ಮಾತ್ರ ನಮ್ಮ ಆಯ್ಕೆಯಾಗಬಾರದು. ಬಿಎ, ಬಿಎಸ್ಸಿ, ಬಿಸಿಎ ಸೇರಿದಂತೆ ಇನ್ನಿತರ ಕೋರ್ಸ್ಗಳಿಗೂ ಮಕ್ಕಳನ್ನು ಸೇರಿಸಬೇಕು’ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
‘ಒಂದೇ ವಿಷಯದಲ್ಲಿ ಪಾಂಡಿತ್ಯ ಪಡೆದುಕೊಂಡರೆ ಈಗಿನ ಕಾಲದಲ್ಲಿ ಜೀವನ ನಡೆಸುವುದು ಕಷ್ಟ. ಹಲವಾರು ವಿಷಯಗಳು ನಮಗೆ ಗೊತ್ತಿರಬೇಕು. ಬಹುಮುಖ ಪ್ರತಿಭೆ ಇಲ್ಲದಿದ್ದರೇ ಪ್ರತಿಷ್ಠಿತ ಐಐಟಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರೂ ಉದ್ಯೋಗ ಸಿಗುವುದಿಲ್ಲ’ ಎಂದು ತಿಳಿಸಿದರು.
‘ಬಹುತೇಕ ಸ್ಥಿತಿವಂತರ ಮಕ್ಕಳಿಗೆ ಹೊರಗಿನ ಪ್ರಪಂಚದ ಜ್ಞಾನವೇ ಇರುವುದಿಲ್ಲ. ಜೀವನದಲ್ಲಿ ಅಂಕಗಳು ಮಾನದಂಡವಲ್ಲ. ಮೊದಲು ಎಲ್ಲರೊಂದಿಗೆ ಬೆರೆಯಬೇಕು. ಅಂದಾಗಲೇ ಜೀವನದ ಪಾಠ ಅರಿವಾಗುತ್ತದೆ’ ಎಂದರು.
‘ಹೊಸ ಆಶಯ ಇಟ್ಟುಕೊಂಡು ಕಾಲೇಜು ಆರಂಭಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗುವುದು’ ಎಂದು ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ ಹೇಳಿದರು.ಸಂಸ್ಥೆಯ ಅಧ್ಯಕ್ಷ ಪರಮೇಶ, ಸುನೀತಾ ದೇವಿ, ಡಾ. ರಾಧಿಕಾ ದೇವಿ, ಪ್ರದೀಪ್, ನವೀನ್, ಗಣೇಶ್ ಇದ್ದರು.