ದಾವಣಗೆರೆ: ಕಾಂಗ್ರೆಸ್ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್ ಕುಂದುವಾಡ ಕೆರೆ ಅಭಿವೃದ್ಧಿಯಲ್ಲಿ ಸಂಸದರು 16 ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಬಿಜೆಪಿಯ ಮಹಿಳಾ ಮೋರ್ಚಾ ಮುಖಂಡರಾದ ಹೆಚ್.ಸಿ.ಜಯಮ್ಮ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದುವಾಡ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿದ್ದು ಸಂಸದ ಸಿದ್ದೇಶ್ವರ ಅವರೇ ವಿನಹ ಎಸ್.ಎಸ್.ಮಲ್ಲಿಕಾರ್ಜುನ್ ಅಲ್ಲ. ಮಲ್ಲಿಕಾರ್ಜುನ್ ಸಚಿವರಿದ್ದಾಗ ಕುಂದುವಾಡ ಕೆರೆ ಅಭಿವೃದ್ಧಿಗಾಗಿ 3.5 ಕೋಟಿ ಅನುದಾನ ಬಳಸಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಈ ಹಣದಲ್ಲಿ ಕೇವಲ ಹೂಳೆತ್ತಲಾಗಿತ್ತೇ ವಿನ: ನಯಾ ಪೈಸೆ ಕೆಲಸ ಮಾಡಿಲ್ಲ. ರಾಷ್ಟ್ರೀಯ ಕೂಲಿಗಾಗಿ ಯೋಜನೆಯಡಿ ಸ್ವತ: ರೈತರೇ ಸ್ವಯಂ ಪ್ರೇರಿತರಾಗಿ ಟ್ರಾಕ್ಟರ್ಗಳಲ್ಲಿ ಹೂಳೆತ್ತಿಕೊಂಡು ಹೋಗಿದ್ದಾರೆ. ರೈತರೇ ಸ್ವತ: ಹೂಳೆತ್ತಿರುವಾಗ 3.5 ಕೋಟಿ ಅನುದಾನ ಎಲ್ಲಿ ಹೋಯ್ತು. ಈ ಬಗ್ಗೆ ಅನಿತಾಬಾಯಿ ಮೊದಲು ಇದಕ್ಕೆ ಉತ್ತರಿಸಲಿ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 16 ಕೋಟಿ ಅನುದಾನ ಬಳಸಿ ಪಾರದರ್ಶಕವಾಗಿ ಟೆಂಡರ್ ಕರೆದು ನಾವು ಅಭಿವೃದ್ಧಿಪಡಿಸಿದ್ದೇವೆಯೇ ವಿನ: ನಿಮ್ಮ ಸಚಿವರಂತೆ ಟೆಂಡರ್ ಕರೆಯದೇ ಹಣದ ಗಂಟನ್ನು ಮನೆಗೆ ಹೊಯ್ದಿಲ್ಲ. ನಿಮ್ಮ ಸಚಿವರ ಕಾಲದಲ್ಲಿ ಹದಡಿ ಕೆರೆ ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಹೊಡೆಯಲಾಗಿದೆ. ಮಾತೆತ್ತಿದರೆ ಜರ್ಮನ್ ತಂತ್ರಜ್ಞಾನ, ಜಪಾನ್ ತಂತ್ರಜ್ಞಾನ ಎನ್ನುವ ನಿಮ್ಮ ಸಚಿವರು ಹದಡಿ ಕೆರೆ ಏರಿಯನ್ನು ಯಾವ ತಂತ್ರಜ್ಞಾನದಿಂದ ಅಭಿವೃದ್ಧಿ ಮಾಡಿದ್ದರು. ಯಾವ ಕಾರಣಕ್ಕೆ ಹದಡಿ ಕೆರೆ ಏರಿ ಕುಸಿದಿತ್ತು. ಕಳೆದ ಒಂದು ವರ್ಷದ ಹಿಂದೆ ನಮ್ಮ ಸರ್ಕಾರ ನಿಮ್ಮ ಸಚಿವರು ಕುಸಿಯುವಂತೆ ಮಾಡಿದ್ದ ಹದಡಿ ಕೆರೆ ಏರಿಯನ್ನು 2 ಕೋಟಿ ಅನುದಾನ ಬಳಸಿ ಸರಿ ಮಾಡಿದ್ದೇವೆ. ಇದೇ ಅಲ್ಲವೇ ನಿಮ್ಮ ಸಚಿವರ ತಂತ್ರಜ್ಞಾನ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಸಚಿವರಾಗಿ ಮಾಡಿದ ಮೊದಲ ಕೆಲಸವೇ ಸ್ಮಾರ್ಟ್ ಸಿಟಿ ಯೋಜನೆಗಳನ್ನು ತನಿಖೆ ಮಾಡಿಸಿದ್ದು, ತನಿಖೆ ಮಾಡಿದ ವರದಿ ನಿಮ್ಮ ಸಚಿವರ ಕೈಯಲ್ಲಿದೆ, ಹೋಗಿ ಕೇಳಿ ತನಿಖೆಯಲ್ಲಿ ಏನು ಹೇಳಿದ್ದಾರೆ ಎಂದು, ಕಾಮಗಾರಿಗಳು ಸಮಪರ್ಕವಾಗಿ ಅನುಷ್ಟಾನಗೊಂಡಿವೆ ಎಂದು ತನಿಖೆ ಮಾಡಿದವರು ವರದಿ ನೀಡಿದ್ದಾರೆ. ಇದು ನಿಮ್ಮ ಸಚಿವರಿಗೆ ಹಾಗೂ ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ. ಅಷ್ಟಕ್ಕೂ ನಿಮಗೆ ಹಾಗೂ ನಿಮ್ಮ ಸಚಿವರಿಗೆ ತೃಪ್ತಿ ಇಲ್ಲ ಅಂದ್ರೆ, ಸರ್ಕಾರ ನಿಮ್ಮದೇ ಇದೆ, ಸಿ.ಬಿ.ಐ ಗೆ ಕೊಡಲಿ, ಸಿಐಡಿಗೆ ಕೊಡಲಿ. ಲೋಕಾಯುಕ್ತಕ್ಕೆ ಕೊಡಲಿ ಎಂದು ಸವಾಲು ಹಾಕಿದರು.
ನಿಮ್ಮ ಪತಿ ದೂಡಾ ಅಧ್ಯಕ್ಷರಾಗಿದ್ದಾಗ ಏನು ಮಾಡಿದ್ದೀರಿ, ಎಷ್ಟು ಬೇನಾಮಿ ಸೈಟುಗಳನ್ನು ಮಾಡಿದ್ದೀರಿ, ಎಲ್ಲೆಲ್ಲಿ ನಿವೇಶನಗಳಿವೆ ಎಂದು ತಿಳಿಸಿ, ಇದೆಲ್ಲಾ ಗೊತ್ತಾದ ಮೇಲೆ ನಿಮ್ಮ ಸಚಿವರು ನಿಮ್ಮನ್ನು ಬೀದಿಯಲ್ಲಿ ಜಿಲೇಬಿ ಮಾಡೋಕೆ ಹಚ್ಚಿದಾರೆ ಅಂದರೆ ನೀವೆಷ್ಟು ಬುದ್ದಿವಂತರಿದ್ದೀರಿ ಎಂದು ತಿಳಿದುಕೊಳ್ಳಿ ಎಂದು ಟಾಂಗ್ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಭಾಗ್ಯ ಪಿಸಾಳೆ, ಪುಷ್ಪಾ ವಾಲಿ, ಶಶಿಕಲಾ, ಶ್ಯಾಮಲಾ, ಚೇತನಾ, ವೀಣಾ ಇತರರು ಇದ್ದರು.