ಸಂತೆಬೆನ್ನೂರು.

ಮೋಜಿನ ಆಹಾರವೆಂದು ಸಿಗರೇಟು ಹಾಗೂ ಮದ್ಯದ ಸಾಲಿಗೆ ಪಾಪ್‌ ಕಾರ್ನ್‌ ಜೋಳವನ್ನೂ ಸೇರಿಸಿ ಮೂರು ಹಂತದ ತರಿಗೆ ವಿಧಿಸಲು ಡಿ.21 ರಂದು ನಡೆದ ಜಿಎಸ್‌ಟಿ ಸಭೆಯಲ್ಲಿ ಕೇಂದ್ರ ಸರಕಾರ ಕೈಗೊಂಡ ತೀರ್ಮಾನ ಈಗಷ್ಟೇ ಬೆಳೆಗಾರರಿಗೆ ತಿಳಿಯುತ್ತಿದೆ.

ಮೆಕ್ಕೆಜೋಳದ ಕಣಜವಾದ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷದಿಂದ ರೈತರು ಹೊಸ ಪ್ರಯೋಗವಾಗಿ ಪಾಪ್‌ ಕಾರ್ನ್‌ ಬೆಳೆಯುತ್ತಿದ್ದು, ಒಳ್ಳೆಯ ಬೆಲೆಯನ್ನೂ ಪಡೆದಿದ್ದಾರೆ. ಕೇಂದ್ರದ ಹೊಸ ವರಸೆ ಬೆಲೆಯ ಮೇಲೆ ಯಾವ ಪರಿಣಾಮ ಬೀರೀತು ಎಂದು ಸಾಮಾನ್ಯ ರೈತರಿಗೆ ಇನ್ನೂ ತಿಳಿದಿಲ್ಲವಾದರೂ, ವ್ಯಾಪಾರಿಗಳು ಇದರಿಂದ ಸಮಸ್ಯೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಹೊರತು ಪಡಿಸಿದರೆ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಹೋಬಳಿಯಲ್ಲಿ 4 ಸಾವಿರ ಹೆಕ್ಟೇರ್‌ನಲ್ಲಿ ಪಾಪ್‌ಕಾರ್ನ್‌ ಜೋಳ ಬೆಳೆಯಲಾಗುತ್ತಿದೆ. 1990 ರಿಂದ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಕಳೆದ ದಶಕದಲ್ಲಿ ಹೆಚ್ಚಿನ ರೈತರು ಇತ್ತ ವಾಲಿದರು. ಈಗ ಒಂದು ವರ್ಷದ ಅವಧಿಯಲ್ಲಿ ಸುಮಾರು 1.20 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ರಪ್ತಾಗುವ ಮಾರುಕಟ್ಟೆಗಳು; ರೈತರಿಂದ ವರ್ತಕರು ಪಾಪ್‌ಕಾರ್ನ್‌ ಜೋಳವನ್ನು ಖರೀದಿಸಿ ಭಾರತದ ಹೈದರಾಬಾದ್‌, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ್‌, ಅಸ್ಸಾಂ ಹಾಗೂ ದೆಹಲಿ ರಾಜ್ಯಗಳ ನಗರಳಿಗೆ ರವಾನಿಸುತ್ತಾರೆ.

ಉತ್ತರ ರಾಜ್ಯಗಳಲ್ಲಿ ಬೇಡಿಕೆ

ಅತಿ ಶೀತವಲಯ ವಾಗಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಪಾಪ್‌ಕಾರ್ನ್‌ ಜೋಳವನ್ನು ಸೇವನೆ ಮಾಡುತ್ತಾರೆ. ಏಕೆಂದರೆ ಈ ಜೋಳ ಹೆಚ್ಚು ಉಷ್ಟಾಂಶ ಕೊಡುತ್ತದೆ. ಪಾಪ್‌ಕಾರ್ನ್‌ಗೆ ಸರ್ಕಾರದ ಅಧಿಕೃತ ಮಾರುಕಟ್ಟೆ ಇಲ್ಲ.

ರೈತರು ಬೆಳೆದ ಪಾಪ್‌ಕಾರ್ನ್‌ ಮೆಕ್ಕೆಜೋಳಕ್ಕೆ ಅಧಿಕೃತವಾಗಿ ಎಪಿಎಂಸಿ ಮಾರುಕಟ್ಟೆ ಇಲ್ಲ. ಇದು ಕೇವಲ ದಲ್ಲಾಳಿಗಳಿಂದ ನಡೆಯುವ ವ್ಯವಹಾರವಾಗಿದೆ. ಎರಡು-ಮೂರುಕಡೆ ತೆರಿಗೆ ವಿದಿಸುವುದರಿಂದ ಹಾಗೂ ತೆರಿಗೆ ಹೆಚ್ಚಳದಿಂದ ಪಾಪ್‌ಕಾರ್ನ್‌ ಬೇಡಿಕೆ ಕಡಿಮೆಯಾಗುವ ಸಾದ್ಯತೆ ಹೆಚ್ಚಿದ್ದು, ಒಂದು ಕಡೆ ತೆರಿಗೆ ನಿಗದಿ ಮಾಡಿ, ರೈತರಿಗೆ ಅಧಿಕೃತವಾಗಿ ಮಾರುಕಟ್ಟೆ ಒದಗಿಸಬೇಕು ಎಂದು ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಜಿ.ಗೂಡಾಳ್‌ ಮಹೇಶ್ವರಪ್ಪ ಒತ್ತಾಯಿಸಿದ್ದಾರೆ.

”ಈಗಲೇ ಪಾಪ್‌ ಕಾರ್ನ್‌ ರೈತನಿಗೆ ನಿರ್ದಿಷ್ಟ ಬೆಲೆ ಸಿಗುತ್ತಿಲ್ಲ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿ ಇಲ್ಲ. ಹೀಗಿರುವಾಗ ರೈತರಿಂದ ಖರೀದಿಸಿದ ವರ್ತಕರು ಶೇ.4, ವರ್ತಕರಿಂದ ಖರೀದಿಸಿ ಬ್ರಾಂಡ್‌ ಮಾಡಿ ಮತ್ತು ಚಿಲ್ಲರೆ ಮಾರುವವನಿಗೆ ಶೇ.18 ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇದು ಅಂತಿಮವಾಗಿ ಇದು ಗ್ರಾಹಕನ ಮೇಲೆ ಹೊರೆಯಾಗಿ, ಪಾಪ್‌ಕಾರ್ನ್‌ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ” ಎನ್ನುತ್ತಾರೆ ಪಾಪ್‌ಕಾರ್ನ್‌ ವರ್ತಕ ಸಂತೆಬೆನ್ನೂರಿನ ಪಿ.ಸಿ.ಕಿರಣ್‌ ಕುಮಾರ್‌. ರೈತನ ಬೆಳೆಗೆ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತಕ್ಕೆ ಕಾರಣವಾಗಬಹುದು ಎಂದೂ ಅವರು ಹೇಳಿದರು.

ಉತ್ತಮ ಇಳುವರಿ ಬಂದರೂ ಕೈಕೊಟ್ಟ ಮಾರುಕಟ್ಟೆ: ಪಾಪ್‌ಕಾರ್ನ್‌ ಜೋಳ ಬೆಲೆ ಕುಸಿತ, ರೈತರು ಕಂಗಾಲು

“ಸಿನಿಮಾ ನೋಡುವಾಗ ಪಾಪ್‌ ಕಾರ್ನ್‌ ಎಂಬುದು ಇತ್ತೀಚಿನ ವರ್ಷದ ಹೊಸ ಆಕರ್ಷಣೆ. ಹಾಗೆಂದು ಇದು ಮಾದಕವಸ್ತುವೇನೂ ಅಲ್ಲ. ದಾವಣಗೆರೆ ರೈತರು ಪಾಪ್‌ ಕಾರ್ನ್‌ ಜೋಳ ಬೆಳೆಯುತ್ತಿರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಈ ಹೊಸ ಉಪಕ್ರಮವು ಖಂಡಿತವಾಗಿ ಗೊಂದಲದ ವಿಚಾರ. ಈ ಕುರಿತು ನಮ್ಮ ಪಕ್ಷವು ಇಷ್ಟರಲ್ಲೇ ಒಂದು ಜನಪರ ನಿಲುವು ತೆಗೆದುಕೊಳ್ಳಲಿದೆ” ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

 

 

 

Share.
Leave A Reply

Exit mobile version