ದಾವಣಗೆರೆ : ಈ ಹಿಂದೆ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮೋತ್ಸವ ಮಾಡಿದ ರೀತಿ ಯಡಿಯೂರಪ್ಪ ಸಮಾವೇಶ ನಡೆಸಲು ಮಾಜಿ ಶಾಸಕ ರೇಣುಕಾಚಾರ್ಯ ತಂಡ ತೀರ್ಮಾನ ಮಾಡಿದ್ದು, ಈ ಸಮಾವೇಶ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.
ಒಂದು ಕಡೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ರಾಜಕೀಯ, ಸಮಾವೇಶ ಮಾಡದಂತೆ ಸೂಚನೆ ನೀಡಿದ್ದಾರೆ. ಯಾರು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು ಎಂದಿದ್ದಾರೆ. ಒಂದು ವೇಳೆ ಯಡಿಯೂರಪ್ಪರ ಸಮಾವೇಶ ನಡೆದರೆ ಇತ್ತ ಯತ್ನಾಳ್ ಆ್ಯಂಡ್ ಟೀಂ ಹಿಂದೂ ಸಮಾವೇಶ ಮಾಡಲು ನಿರ್ಧರಿಸಿದೆ.
ಈ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಸಿದ್ಧರಾಮೋತ್ಸವ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶವಾಗಿತ್ತು. ಇದುವರೆಗೂ ಯಾವ ಪಕ್ಷದ ಸಮಾವೇಶದಲ್ಲಿ ಸೇರದಷ್ಟು ಜನ ಅಂದು ಸಿದ್ದರಾಮೋತ್ಸವದಲ್ಲಿ ಸೇರಿದ್ದರು. ಇದೀಗ ಅದೇ ಮಾದರಿಯಲ್ಲಿ ಯಡಿಯೂರಪ್ಪನವ ಜನ್ಮದಿನೋತ್ಸ ಆಚರಣೆಗೆ ಅವರ ಅಭಿಮಾನಗಳು ಮುಂದಾಗಿದ್ದಾರೆ.ಅಲ್ಲದೇ ಯಡಿಯೂರಪ್ಪ ಬಣದ ಮಾಜಿ ಶಾಸಕರು, ಮಾಜಿ ಸಚಿವರುಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಫೆ.27ರಂದು ದಾವಣಗೆರೆಯಲ್ಲಿ ಯಡಿಯೂರಪ್ಪ ಜನ್ಮದಿನ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಯಡಿಯೂರಪ್ಪ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಈ ಜನ್ಮದಿನೋತ್ಸ ಕಾರ್ಯಕ್ರಮ ಆಯೋಜಿಸಲಾಗುತ್ತೆ. ಸಭೆ ಸೇರಿದ ಹತ್ತು ಜನರ ಒಂದು ಸಮಿತಿ ಮಾಡಲಾಗಿದೆ. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ನಮ್ಮಲ್ಲಿ ಭಿನ್ನ ಮತವಿಲ್ಲ, ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ತೇವೆ. ಸಭೆಯಲ್ಲಿ ದೆಹಲಿಗೆ ಹೋಗುವ ಬಗ್ಗೆ ಅಭಿಪ್ರಾಯ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತೀರ್ಮಾನಗಳು ನಡೆಯುತ್ತಿವೆ.
ಇದು ಶಕ್ತಿ ಪ್ರದರ್ಶನಾ?
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆಯ ನೆಪದಲ್ಲಿ ಮಧ್ಯ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಬಿ.ವೈ. ವಿಜಯೇಂದ್ರ ಪರ ಬಣ ಸಜ್ಜಾಗಿದೆ. ಬಿಜೆಪಿಯ ಬಣಗಳ ಕಿತ್ತಾಟ ಅನಿರ್ದಿಷ್ಟಾವಧಿಗೆ ಮುಂದುವರಿಯುವ ಸೂಚನೆಯನ್ನು ಇದು ನೀಡಿದೆ.
ಯತ್ನಾಳ್ ಉಚ್ಚಾಟನೆಗೆ ನಡೆತಾ ಸಭೆ?
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪದಚ್ಯುತಿಗೆ ಪಟ್ಟುಹಿಡಿದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಹೋರಾಡುತ್ತಿರುವ ಮುಖಂಡರು ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಹೊರಗಡೆ ಯಡಿಯೂರಪ್ಪ ಹುಟ್ಟು ಹಬ್ಬದ ಸಮಾವೇಶ ಅಂದರೂ ಒಳಗಡೆ ಯತ್ನಾಳ್ ಉಚ್ಚಾಟನೆ ಬಗ್ಗೆ ಚರ್ಚೆ ನಡೆದಿದೆ.ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಮಾಜಿ ಶಾಸಕರು ಹಾಗೂ ಮಾಜಿ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯ ಕರ್ನಾಟಕ ತಲುಪಿದ ಯತ್ನಾಳ್ ವಿರುದ್ಧ ಹೋರಾಟ
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಿಂದ ಆರಂಭವಾಗಿರುವ ಯತ್ನಾಳ ವಿರುದ್ಧದ ಹೋರಾಟ ಮಧ್ಯ ಕರ್ನಾಟಕ ತಲುಪಿದೆ. ‘ರಾಜಕೀಯ ಸಭೆ ನಡೆಸಬಾರದು’ ಎಂಬ ಪಕ್ಷದ ಸೂಚನೆಯ ನಡುವೆಯೂ ‘ಯಡಿಯೂರಪ್ಪ ಅಭಿಮಾನಿ ಬಳಗ’ದ ಹೆಸರಿನಲ್ಲಿ ನಗರದಲ್ಲಿ ಶನಿವಾರ ಮತ್ತು ಭಾನುವಾರ ಸಭೆ ನಡೆದಿದೆ. ರಾಜಕೀಯ, ಪಕ್ಷದ ಆಂತರಿಕ ಕಿತ್ತಾಟದ ಕುರಿತು ಚರ್ಚಿಸಲಾಗಿದೆ.
10 ಜನರ ಸಮಿತಿ ರಚನೆ
ಫೆ.27ರಂದು ಹಮ್ಮಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಜನ್ಮದಿನಾಚರಣೆಯ ಕಾರ್ಯಕ್ರಮದ ಸಿದ್ಧತೆಗೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ 10 ಜನರ ಸಮಿತಿ ರಚಿಸಲಾಗಿದೆ. ಎರಡು ತಿಂಗಳು ಪೂರ್ವ ಸಿದ್ಧತೆ ಮಾಡಿಕೊಂಡು ದಾವಣಗೆರೆಯಲ್ಲಿ ಲಕ್ಷಾಂತರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ. ಪೂರ್ವ ಸಿದ್ಧತಾ ಸಭೆಯನ್ನು ಜ.16ಕ್ಕೆ ನಿಗದಿಪಡಿಸಲಾಗಿದ್ದು, ಕಾರ್ಯಕ್ರಮದ ಸ್ಥಳ ಗುರುತಿಸಬೇಕಿದೆ.
ಮಾಜಿ ಶಾಸಕ ಹಾಲಪ್ಪ ಹೇಳಿದ್ದೇನು?
ಬಿಎಸ್‌ವೈ ಜನ್ಮದಿನವನ್ನು ಕಳೆದ ವರ್ಷ ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು. 2025ರಲ್ಲಿ ಈ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಯೋಜಿಸಲು ಅಭಿಮಾನಿಗಳು ತೀರ್ಮಾನಿಸಿದ್ದೇವೆ’ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ‘ದಾವಣಗೆರೆಯಲ್ಲಿ ಸಮಾವೇಶ ಸಂಘಟಿಸುವುದಾಗಿ ಮೊದಲೇ ಘೋಷಿಸಿದ್ದೆವು. ರಾಜಕೀಯ ಸಭೆ ನಡೆಸಲು ಪಕ್ಷದಲ್ಲಿ ಅವಕಾಶವಿಲ್ಲ. ಹೀಗಾಗಿ, ಯಡಿಯೂರಪ್ಪ ಅಭಿಮಾನಿ ಬಳಗದ ಹೆಸರಿನಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಲಿದ್ದೇವೆ’ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.
ರಾಜಕೀಯ ಸಭೆ ಅಲ್ಲ
‘ಮಾಜಿ ಸಚಿವ ಬಿ.ಸಿ. ಪಾಟೀಲ ಸೇರಿ ಕೆಲವರು ವಿದೇಶ ಪ್ರವಾಸದಲ್ಲಿದ್ದಾರೆ. 60 ಜನ ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ಪೈಕಿ 55 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೊಂದು ರಾಜಕೀಯ ಸಭೆ ಅಲ್ಲ. ಯಡಿಯೂರಪ್ಪ ಅವರ ಅಭಿಮಾನಿಗಳು, ಹಿತೈಷಿಗಳ ಸಭೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನೊಗಕ್ಕೆ ಹೆಗಲು ಕೊಟ್ಟಿರುವ ಅವರಿಗೆ ಜೊತೆಯಾ ಗುವುದು ನಮ್ಮ ಕರ್ತವ್ಯ. ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಆಗಬೇಕಿದೆ. ಈ ಕುರಿತು ನಾಲ್ಕು ಗಂಟೆಗೂ ಹೆಚ್ಚು ಹೊತ್ತು ಚರ್ಚೆ ಮಾಡಿದ್ದೇವೆ’ ಎಂದು ಹೇಳಿದರು.
ಯತ್ನಾಳ ವಿರುದ್ಧ ಕಿಡಿ
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಆರೋಪ ಸರಿಯಲ್ಲ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಕಿಡಿಕಾರಿದರು.
‘ಬಹಿರಂಗ ಆರೋಪದಿಂದ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಲು ಸಾಧ್ಯವೇ ಇಲ್ಲ’ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.