
ದಾವಣಗೆರೆ : ನಗರದಲ್ಲಿನ ದೊಡ್ಡಪೇಟೆಯಲ್ಲಿರುವ ನಾಮದೇವ ಭಜನಾ ಮಂದಿರದಲ್ಲಿ ಶ್ರೀ ರಾಮ ಪ್ರತಿಷ್ಠಾಪನೆ ನಿಮಿತ್ತ ರಾಮ ಭಕ್ತರು ರಕ್ತದಾನ ಮಾಡುವ ಮೂಲಕ ಭಕ್ತಿ ಮೆರೆದರು.
ದೇವನಗರಿಯ ನಾನಾ ಕಡೆಗಳಲ್ಲಿ ರಾಮನ ಭಕ್ತರು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಇತ್ತ ಕೆ ಆರ್ ಮಲ್ಲಿಕಾರ್ಜುನ್, ರಾಕೇಶ್ ಜಾದವ್, ಬಿ ಎಂ ಗಿರೀಶ್, ಎ ಟಿ ವೀರೇಶ್ ಮತ್ತು ಜನನಿ ಫೌಂಡೇಶನ್ ಸದಸ್ಯರು ಮತ್ತು ಶಿವ ಕುರುಡಿಮಠ ಅಭಿಮಾನಿ ಬಳಗ ರಕ್ತದಾನ ಮಾಡಿ ಇನ್ನೋಬ್ಬರಿಗೆ ಮರು ಜೀವ ನೀಡಿದ್ದಾರೆ.
ರಕ್ತದಾನಿ ಬಿಎಂ ಗಿರೀಶ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದಿರುವುದರಿಂದ ರಕ್ತಕ್ಕೆ ಪರ್ಯಾಯವಿಲ್ಲ. ರಕ್ತವನ್ನು ಇನ್ನೊಬ್ಬ ವ್ಯಕ್ತಿಯ ದೇಹದಿಂದ ಮಾತ್ರ ಸಂಗ್ರಹಿಸಲು ಸಾಧ್ಯ. ರಕ್ತ ನಮ್ಮ ದೇಹದ ಅತೀ ಅಮೂಲ್ಯವಾದ ದ್ರವ್ಯ. ರಕ್ತದ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ ಆದ್ದರಿಂದ ರಕ್ತದಾನ ಮಾಡುವ ಮೂಲಕ ಭಕ್ತಿ ಮೆರೆದಿದ್ದೇವೆ ಎಂದರು.

ಬಿಜೆಪಿ ನಾಯಕ ಎಸ್.ಟಿ.ವೀರೇಶ್ ಮಾತನಾಡಿ,
ಅಪಘಾತ ಸಂಭವಿಸಿ ಗಾಯಗೊಂಡವರ ಚಿಕಿತ್ಸೆಯ ಸಂದರ್ಭದಲ್ಲಿ, ತುರ್ತು ಶಸ್ತ್ರಚಿಕಿತ್ಸೆ, ಚಿಕಿತ್ಸೆಯ ಸಮಯದಲ್ಲಿ, ರಕ್ತದ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿಯರಿಗೆ ಹೆರಿಗೆಯ ಸಮಯದಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇದಲ್ಲದೆ ಕೆಲವೊಂದು ಗಂಭೀರ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತ ವರ್ಗಾವಣೆಯ ಆವಶ್ಯಕತೆ ಇರುತ್ತದೆ ಹಾಗಾಗಿ ರಕ್ತ ನೀಡಿದ್ದೇವೆ ಎಂದು ಹೇಳಿದರು. ಒಟ್ಟಾರೆ ರಾಮ ಭಕ್ತರು ರಕ್ತ ನೀಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾದರು.