ದಾವಣಗೆರೆ.ಮೇ.೨೧; ನಮನ ಅಕಾಡೆಮಿ ವತಿಯಿಂದ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿಯೊಂದಿಗೆ ಜಂಟಿಯಾಗಿ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಮೇ 24ರ ಸಂಜೆ 6 ಗಂಟೆಯಿಂದ ನಗರದ ಬಿಐಇಟಿ ಕಾಲೇಜಿನ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಉಪಾಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಶ್ರೀ ಮಾಲಿ ಡ್ಯಾನ್ಸಿಂಗ್ ಅಕಾಡೆಮಿಯ 20 ಜನ ನೃತ್ಯ ಕಲಾವಿದರು ಅವರ ಗುರುಗಳಾದ ಮರಿನಿ ಪೆರೇರ ಹಾಗೂ ಹಿಮಾಲಿ ಉಪೇಕ್ಷ ಜಯತಿಲಕ ಮಾರ್ಗದರ್ಶನದಲ್ಲಿ ತಮ್ಮ ದೇಶದ ವಿವಿಧ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ ಜಿ ಈಶ್ವರಪ್ಪ, ಶ್ರೀಲಂಕದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿ ಅಧ್ಯಕ್ಷರಾದ ರೋಷನ್ ಸಿಲ್ವಾ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಕಲಾವಿದರಾದ ಡಾ. ಹೆಚ್ ಬಿ ಮಂಜುನಾಥ ಅವರಿಗೆ ‘ನಮನ ಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮನ ಅಕಾಡೆಮಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಕೆ ಎನ್ ವಹಿಸಿಕೊಳ್ಳಲಿದ್ದಾರೆ.ಈ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಶ್ರೀಲಂಕಾ ತಂಡದೊಂದಿಗೆ ದಾವಣಗೆರೆಯ ನಮನ ಅಕಾಡೆಮಿ, ಹರಿಹರದ ಸಂಕರ್ಷಣ ಭರತನಾಟ್ಯಶಾಲೆ, ರಾಣೇಬೆನ್ನೂರಿನ ಶ್ರೀ ಶಾರದಾ ನೃತ್ಯಲಯ, ಶ್ರೀ ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆಯ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದರೊಂದಿಗೆ ದಾವಣಗೆರೆಯ ಗಾನ ಲಹರಿ ತಂಡದ ಕಲಾವಿದರು ಹಾಡುಗಳನ್ನು ಹಾಡಲಿದ್ದಾರೆ. ಈ ಒಂದು ವಿಶೇಷ ಕಾರ್ಯಕ್ರಮದ ಪೂರ್ಣ ಉಸ್ತುವಾರಿಯನ್ನು ನಮನ ಅಕಾಡೆಮಿಯ ಕಾರ್ಯದರ್ಶಿ ಹಾಗೂ ನೃತ್ಯ ಗುರುಗಳಾದ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ನಿರ್ವಹಿಸಲಿದ್ದಾರೆಂದರು. ನಮನ ಅಕಾಡೆಮಿ ಆಯೋಜಿಸುತ್ತಿರುವ ಎರಡನೇ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ, 2023 ರಲ್ಲಿ ವಿಯೆಟ್ನಾಂ ದೇಶದಲ್ಲಿ ವಿಯೆಟ್ನಾಂನ ವಿ ಯೋಗ ಒಕ್ಕೂಟ, ದಾವಣಗೆರೆಯ ಅವಿಯ ಯೋಗ ಅಕಾಡೆಮಿ ಹಾಗೂ ನಮನ ಅಕಾಡೆಮಿ ಜಂಟಿಯಾಗಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಸನ ಸ್ಪರ್ಧೆ, ಪ್ರತಿಭಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಜಂಟಿಯಾಗಿ ಸಂಘಟಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಕೆ.ಎನ್ ಗೋಪಾಲ ಕೃಷ್ಣ,ಗುರುಗಳಾದ ಮಾಧವಿ ಡಿ.ಕೆ,ನಾಗಭೂಷಣ್,ಕಿರಣ್ ಉಪಸ್ಥಿತರಿದ್ದರು