ದಾವಣಗೆರೆ : ಕೈಗಾರಿಕೀರಣ, ನಗರೀಕರಣ ಮತ್ತು ಜನಸಂಖ್ಯೆ ಬೆಳೆದಂತೆ ಪರಿಸರ ಸಂರಕ್ಷಣೆ ಒಂದು ಬೃಹತ್ ಸಮಸ್ಯೆಯಾಗಿದೆ. ನಾಗರಿಕತೆಯ ಹೆಸರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಪ್ರಕೃತಿದತ್ತ, ನಿಸರ್ಗಜನ್ಯ ಸಂಪನ್ಮೂಲಗಳ ಬಳಕೆ ಹೆಚ್ಚುತ್ತಿದೆ. ಮುಂದಿನ ಪೀಳಿಗೆಗೆ ನಿಸರ್ಗದ ಒಡಲು ಬರಿದಾಗ ಬಹುದಾದ ಸಾಧ್ಯತೆ ಇದೆ.
ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಶಾಸನಗಳ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವೆ? ಜನತೆ ತಮ್ಮ ಅತಿ ಬಳಕೆಗೆ ಕಡಿವಾಣ ಅವಶ್ಯ. ಅಮೇರಿಕಾ ಮತ್ತು ಐರೋಪ್ಯ ರಾಷ್ಟ್ರಗಳ ‘ಹಸಿರುಬಳಗ’, ‘ಹಸಿರುಸಂಕುಲ’ ಅಥವಾ ಗ್ರೀನ್ ಕಮ್ಯೂನ್ ಎಂಬ ಹೆಸರಿನಲ್ಲಿ ಪರಿಸರವಾದಿಗಳು ಸಂಘಟಿತರಾಗಿ ಕಾರ್ಯೋನ್ಮುಖರಾಗಿದ್ದಾರೆ.
ಈ ಚಿಂತನೆಯತ್ತ ಪರಿಸರ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಭಾರತವೂ ಗಮನಹರಿಸುವುದು ಸೂಕ್ತವಾಗಿದೆ. ಔದ್ಯೋಗಿಕರಣದ ನಂತರ ಬಂಡವಾಳ ಶಾಹಿಗಳು ಹುಟ್ಟುಹಾಕಿರುವ ಪ್ರವೃತ್ತಿಗಳನ್ನು ವಿರೋಧಿಸುತ್ತಾ ಸ್ವಾವಲಂಬನೆಯನ್ನು ಪ್ರತಿಪಾದಿಸುವುದು, ಎಲ್ಲಾ ಕ್ಷೇತ್ರಗಳಲ್ಲೂ ಸಹಕಾರ, ಸ್ವಾವಲಂಬನೆ, ಅನ್ಯೋನ್ಯ ಮಾನವೀಯ ಸಂಬಂಧಗಳು, ಪ್ರಜಾಸತ್ತಾತ್ಮಕ ನಿರ್ಧಾರಗಳು, ಹಸಿರು ಬಳಗಗಳ ಪ್ರಮುಖ ರೂಪುರೇಷೆಗಳು.
ಈ ಬಳಗದ ಜೀವನಸೂತ್ರ ಸರಳತೆ, ನೈಸರ್ಗಿಕ ಆಹಾರ ಸೇವನೆ, ಹಸಿತಿಂಡಿ, ತಿನುಸುಗಳ ೪೦ ಬಗೆಯ ವಿಶೇಷ ಮೆನು ಇವರಲ್ಲಿದೆ. ಗಿಡಬಳ್ಳಿಗಳನ್ನು ಬೆಳೆಸುವುದು. ನೀರು ಶುದ್ಧೀಕರಿಸುವ ಮಣ್ಣಿನ ತಪ್ಪಲೆಗಳ ಬಳಕೆೆ, ಪೆಟ್ರೂಲ್, ಡೀಸೆಲ್, ಗ್ಯಾಸ್, ವಿದ್ಯುಚ್ಛಕ್ತಿ, ಇಂಧನಗಳಿಗೆ ಬದಲಾಗಿ ಸೌರಶಕ್ತಿ, ಜೈವಿಕ ವಸ್ತುಗಳ ಉಪಯೋಗ, ಆರೋಗ್ಯ ಸಂರಕ್ಷಣೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ ಮುಂತಾದವುಗಳಿಗೆ ಆದ್ಯತೆ. ಅನಿವಾರ್ಯಸಂದರ್ಭಗಳಲ್ಲಿ ಮಾತ್ರ ಅಲೋಪತಿ ಔಷಧಿ ಮತ್ತು ಚಿಕಿತ್ಸೆಗಳಿಗೆ ಮೊರೆ ಹೋಗುತ್ತಿದ್ದಾರೆ.
ಸಸ್ಯಹಾರಿಗಳ ಕ್ಲಬ್, ಹಸಿತಿಂಡಿ ತಿನಿಸುಗಳ ಕ್ಲಬ್ಗಳು ಹೆಚ್ಚು ಪ್ರಚಲಿತವಾಗಿವೆ. ಹಸಿರು ಬಳಗಗಳು ಬಹುತೇಕ ನೈಸರ್ಗಿಕ ಆಹಾರ ಸೇವೆನೆಯನ್ನು ಪ್ರತಿಪಾದಿಸುತ್ತದೆ. ಸೌರಬಸ್ಸುಗಳು, ವಾಹನಗಳು, ಕಾರುಗಳ ಬಳಕೆ ಹೆಚ್ಚಾಗುತ್ತಿದೆ. ಉಡುಗೆ-ತೊಡುಗೆಗಳು ನೈಸರ್ಗಿಕವಾಗಿ ಉತ್ಪಾದಿಸಲ್ಪಟ್ಟವುಗಳಿಗೆ ಒತ್ತು ನೀಡಲಾಗುತ್ತಿದೆ.
ಪರಿಸರ ಶಿಕ್ಷಣ ಮತ್ತು ಉದ್ಯೋಗ ಅವಕಾಶ:
ಕೈಗಾರಿಕೀಕರಣ ಮತ್ತು ಪರಿಸರ ಈ ಎರಡನ್ನು ಪ್ರಸ್ತುತ ಸರಿದೂಗಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಿದ್ದು, ಈ ಸವಾಲನ್ನು ಎದುರಿಸಲು ಪರಿಸರ ತಜ್ಞರ ಸಹಾಯ, ಸಹಕಾರ, ನೆರವು, ಮಾರ್ಗದರ್ಶನ ಅತ್ಯಗತ್ಯ. ಪರಿಸರ ಶಿಕ್ಷಣ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಶಿಕ್ಷಣದ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು ಎಂಬುದು ಕೊಠಾರಿ ಶಿಕ್ಷಣ ಆಯೋಗದ ಆಶಯ. ನಮ್ಮ ದೇಶದ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪರಿಸರ ಶಿಕ್ಷಣ ನೀಡಲಾಗುತ್ತಿದೆ. ೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯದಲ್ಲಿ ಪರಿಸರ ಶಿಕ್ಷಣಕ್ಕೆ ಆದ್ಯತೆನೀಡಿ ಅಧ್ಯಾಪಕರಿಗೆ ತರಬೇತಿ ನೀಡಲಾಯಿತು. ಪರಿಸರ ವಿಜ್ಞಾನದಲ್ಲಿ ಬಿ.ಎಸ್.ಸಿ, ಎಂ.ಎಸ್.ಸಿ., ಪಿಎಚ್.ಡಿ ಮಾಡಬಹುದಾಗಿದೆ. ಹಾಗೆಯೇ ಫಾರೆಸ್ಟ್ ಮ್ಯಾನೇಜಮೆಂಟ್ನಲ್ಲಿ ಎಂ.ಬಿ.ಎ., ಐ.ಎಫ್.ಎಸ್. ಪರೀಕ್ಷೆ, ಪರಿಸರ ಇಂಜನೀಯರಿಂಗ್ ಕೋರ್ಸಗಳಿವೆ. ಪರಿಸರಕ್ಕೆ ಸಂಬಂಧಿಸಿದ ಸಂಶೋಧನೆ ಮಾಡಲು ವಿಪುಲ ಅವಕಾಶಗಳಿವೆ. ಪರಿಸರ ಕಾನೂನು ಕುರಿತು ಡಿಪ್ಲೋಮಾಗಳಿವೆ.
ಪರಿಸರಕ್ಕೆ ಕಾಳಜಿ ವಹಿಸುವವರಿಗೆ, ಪರಿಸರ ತಜ್ಞರಿಗೆ ಹೆಚ್ಚಿನ ಬೇಡಿಕೆಗಳಿವೆ. ಸರ್ಕಾರಗಳು ಹಾಗೂ ಕಂಪನಿಗಳು ಪರಿಸರ ಸಂರಕ್ಷಣೆ ಯೋಜನೆಗಳಿಗೆ ಸಾಕಷ್ಟು ಬಂಡವಾಳ ಹೂಡುತ್ತಿವೆ. ‘ನಡೆ ಹಸಿರಿಗೆ (ಗೋಗ್ರೀನ್)’ ಹೆಚ್ಚು ಜನಪ್ರಿಯವಾಗಿರುವ ಘೋಷಣೆ. ಪರಿಸರ ವಿಜ್ಞಾನ, ಪರಿಸರ ಇಂಜನೀಯರಿಂಗ್, ಪರಿಸರ ಅರ್ಥಶಾಸ್ತçಜ್ಞರಿಗೆ ಉದ್ಯೋಗಾವಕಾಶಗಳು ವಿಪುಲವಾಗಿವೆ. ಒಟ್ಟಾರೆ ಪರಿಸರ ಶಿಕ್ಷಣದಿಂದ ಪರಿಸರ ಸಂರಕ್ಷಣೆ ಸಾಧ್ಯವೆನ್ನಬಹುದು.
ಪರಿಸರ ಮಾಲಿನ್ಯಕ್ಕೆ ಕಾರಣವಾದ ಅಂಶಗಳು:
*ಅರಣ್ಯಗಳ ನಾಶ *ರಸಾಯನಿಕ ಪದಾರ್ಥಗಳ ಬಳಕೆ *ವಿಪರೀತ ವಾಹನಗಳ ಓಡಾಟ *ಕೈಗಾರಿಕೀಕರಣ *ನಗರೀಕರಣ *ಜನಸಂಖ್ಯಾ ಹೆಚ್ಚಳ *ಪರಿಸರ ಪ್ರಜ್ಞೆಯ ಅಭಾವ *ಆಡಳಿತ ನಿರ್ವಹಣೆಯ ಕೊರತೆ *ಅಣುವಿಕಿರಣ ಸ್ಥಾವರಗಳು * ಆರ್ಥಿಕ ಅಸಮಾನತೆಗಳು.
ಪರಿಸರ ಮಾಲಿನ್ಯದ ದುಷ್ಪರಿಣಾಮಗಳು:
*ಮಾನವ ಸಂಪತ್ತಿನ ಅಪಾರ ನಷ್ಟ *ಪಶು, ಪ್ರಾಣಿ, ಪಕ್ಷಿಗಳಿಗೆ ಗಂಡಾAತರ *ಕೃಷಿ ಅಭಿವೃದ್ಧಿ ಕುಂಠಿತ *ಜಲಸಂಪತ್ತಿನ ನಾಶ *ವಿಚಿತ್ರ ರೋಗ ರುಜಿನಗಳು *ಜನರ ನೆಮ್ಮದಿಗೆ ಭಂಗ *ಸಂಸ್ಕೃತಿಯ ನಾಶ *ಪ್ರಗತಿಪರ ಕಾರ್ಯಗಳಿಗೆ ಕಡಿವಾಣ *ಸಾಮಾಜಿಕ ವೈಷಮ್ಯ.
ಪರಿಸರ ಮಾಲಿನ್ಯದ ವಿವಿಧ ಬಗೆಗಳು:
*ವಾಯು ಮಾಲಿನ್ಯ *ಜಲ ಮಾಲಿನ್ಯ *ನೆಲ ಮಾಲಿನ್ಯ *ಶಬ್ದ ಮಾಲಿನ್ಯ *ಅಣುವಿಕಿರಣ ಮಾಲಿನ್ಯ *ನಗರ ಮಾಲಿನ್ಯ.
ವಾಯು ಜೀವನಾಧಾರವಾದ ವಸ್ತು. ಅದು ಶುದ್ಧವಾಗಿದ್ದರೆ, ಸಾಕಷ್ಟು ಆಮ್ಲಜನಕದಿಂದ ಕೂಡಿರುತ್ತದೆ. ವಾಯು ಮಾಲಿನ್ಯವಾದರೆ ಶಾರೀರಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯ ಹೃದಯ ಹಾಗೂ ಶ್ವಾಸಕೋಶದ ಮೇಲೆ ಕೆಟ್ಟಪರಿಣಾಮ ಬೀರಿ, ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ವಾಹನಗಳು, ಕಾರ್ಖಾನೆಗಳು, ದುರ್ವಾಸನೆ ವಾಯು ಮಾಲಿನ್ಯಕ್ಕೆ ಪೂರಕವಾಗಿವೆ. ನೀರು ಸಮಸ್ತ ಜೀವಿಗಳ ಮೂಲ ಜೀವಾಳ. ಜೀವಿಗಳ ಬದುಕು, ವಿಕಾಸಕ್ಕಾಗಿ ನೀರು ಅಗತ್ಯ. ಭೂಮಿಯ ಮೇಲೆ ಮುಕ್ಕಾಲು ಭಾಗನೀರಿದ್ದರೂ ಅವು ಕುಡಿಯಲು ಯೋಗ್ಯವಲ್ಲ. ಭೂಮಿಯ ಮೇಲೆ ಲಭ್ಯವಿರುವ ಸಿಹಿ ನೀರು ಅತ್ಯಲ್ಪ ಇಂದು ಶುದ್ಧ ನೀರಿನ ಕೊರತೆ. ದುಸ್ತರವಾಗಿ ಜಲವು ಮಾಲಿನ್ಯ ಉಂಟಾಗುತ್ತಿದೆ. ನದಿಗಳು ಮಲಿನವಾಗಿವೆ.
ನೀರಿನ ಅಶುದ್ಧತೆಯು ಹಲವು ರೋಗಗಳಿಗೆ ಕಾರಣವಾಗಿದೆ. ಹಾಗೆಯೇ ಶಬ್ಧ ಮಾಲಿನ್ಯವು ಮೋಟಾರು, ಕಾರು, ಕಾರ್ಖಾನೆಗಳು, ಸೈರನ್ನಗಳು, ಪಟಾಕಿಗಳು, ಸಿಡಿಮುದ್ದುಗಳು ಡೈನಮಂಟ್ಗಳು, ಬಾಂಬ್ಗಳು, ಧ್ವನಿವರ್ಧಕಗಳು ಇವುಗಳಿಂದಾಗಿ ಜನರಲ್ಲಿ ಶಬ್ದದ ತೀವ್ರತೆಯಿಂದ ಕಿವುಡುತನ, ನಿದ್ರಾಭಂಗ, ರಕ್ತದೊತ್ತಡ, ಹೃದಯರೋಗ, ಮುಂತಾದ ರೋಗಗಳಿಗೆ ಕಾರಣವಾಗಿದೆ. ಅಣುವಿಕಿರಣ ಮಾಲಿನ್ಯವು ಅನೇಕ ಸಾವು-ನೋವುಗಳಿಗೆ, ಅಂಗವಿಕಲತೆಗೆ, ಆರೋಗ್ಯ ಸಮಸ್ಯೆಗೆ ಎಡೆಮಾಡಿಕೊಟ್ಟರೆ. ನಗರ ಮಾಲಿನ್ಯವು ಕೊಳಚೆ ಪ್ರದೇಶಗಳಿಂದ ದುರ್ಬಲ ಒಳಚರಂಡಿ ವ್ಯವಸ್ಥೆಗಳು. ಕಾರ್ಖಾನೆಗಳು, ಜನಸಾಂದ್ರತೆಯಿಂದ ಜನತೆಯಲ್ಲಿ ಅನೇಕ ಬಗೆಯ ರೋಗ-ರುಜಿಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಶುದ್ಧ ಪರಿಸರವೇ ನಮ್ಮ ರಕ್ಷಣೆ ನಮ್ಮ ಉತ್ತಮ ಬದುಕು. ಮಲಿನತೆಯೇ ನಮ್ಮಗಳ ವಿನಾಶ ಎಂಬ ಮಾತು ಗೊತ್ತಿರಲಿ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಮೊ: ೯೮೮೦೦೯೩೬೧೩