ದಾವಣಗೆರೆ ;ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಫೋಟೋಗ್ರಾರ್ಸ್‌ ನೂತನ ತಂತ್ರಜ್ಞಾನ, ತಾಂತ್ರಿಕತೆ ಬದಲಾದಂತೆ, ಅದಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುವ ಮೂಲಕ ತಮ್ಮ ವೃತ್ತಿಯಲ್ಲಿ ಅನುಭವದ ಜೊತೆಗೆ ಹೊಸ ತಂತ್ರಜ್ಞಾನದ ಸದ್ಭಳಕೆಗೂ ಮುಂದಾಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಫೋಟೋಗ್ರಾಫರ್ಸ್‌ಗಳಿಗೆ ಕರೆ ನೀಡಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಸಂಘ, ಫೋಟೋಗ್ರಾಫರ್ಸ್‌ ವೆಲ್‌ಫೇರ್ ಅಸೋಸಿಯೇಷನ್‌ ಆಯೋಜಿಸಿದ್ದ 2 ದಿನಗಳ ದೇವನಗರಿ ಪ್ರೊ.ಇಮೇಜ್-2024 ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಬುದ್ದಿವಂತಿಕೆ ಬಳಸಿಕೊಂಡು, ಕ್ರಿಯಾಶೀಲರಾಗಿ, ವಿವಿಧ ನವನವೀನ ರೀತಿಯ ಹೊಸ ವಿನ್ಯಾಸಗಳ, ಬಗೆಯ ಫೋಟೋಗಳನ್ನು ತೆಗೆದು ಗ್ರಾಹಕರಿಗೆ ನೀಡಿ, ಮೆಚ್ಚುಗೆ ಪಡೆಯಿರಿ ಎಂದರು.

ಜನ್ಮದಿನ, ಮದುವೆ, ಗೃಹಪ್ರವೇಶ, ಕ್ರೀಡೆ ಸೇರಿದಂತೆ ಶುಭ ಸಮಾರಂಭಗಳ ನೆನಪು ಕಟ್ಟಿಕೊಡುವ, ಹಳೆ ನೆನಪುಗಳನ್ನು ತಂದುಕೊಡುವ ಕೆಲಸ ಮಾಡುತ್ತೀದ್ದೀರಿ. ವರ್ಲ್ಡ್ ಜಿಯಾಗ್ರಾಫಿ ಚಾನಲ್ ಗಳನ್ನು ನಾವು ನೋಡುತ್ತೇವೆ. ಅದರಲ್ಲಿ ಸಮುದ್ರ, ಪಕ್ಷಿ, ಪ್ರಾಣಿಗಳು, ಪರಿಸರ ಕುರಿತ ಅಂತಹ ಫೋಟೋ, ದೃಶ್ಯಗಳನ್ನು ನಾವು ನೋಡಿ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಫೋಟೋ, ದೃಶ್ಯಗಳು ಮಕ್ಕಳಿಗೆ ಸಹಕಾರಿಯಾಗಲಿವೆ. ಇತಿಹಾಸವೆಂದರೆ ಹಿಂದಿನ ಸ್ವಾತಂತ್ರ್ಯದ ಹೋರಾಟಗಳು, ಸತ್ಯಾಗ್ರಹಗಳನ್ನು ನಾವು ಫೋಟೋಗಳಿಂದ, ವೀಡಿಯೋಗಳಿಂದ ನೋಡಿ ತಿಳಿದುಕೊಳ್ಳುತ್ತಿದ್ದೇವೆ. ಇವೆಲ್ಲಾ ಎಂದಿಗೂ ಮರೆಯದ ಕ್ಷಣಗಳಾಗಿವೆ ಎಂದು ಅವರು ತಿಳಿಸಿದರು.

ಬೇರೆ ದೇಶ, ಪ್ರದೇಶದ ಸಂಪ್ರದಾಯ, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಫೋಟೋಗ್ರಫಿ ಸಹಕಾರಿಯಾಗಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತ ಮಿಗಿಲಾಗಿ ವಿಷಯ ತಿಳಿಸುತ್ತದೆ. ಛಾಯಾಗ್ರಾಹಕರು ಭಾವನಾತ್ಮಕ ಕ್ಷಣಗಳಿಂದ ಹಿಡಿದು ಇತಿಹಾಸದ ಮೈಲಿಗಲ್ಲುಗಳವರೆಗೆ ಎಲ್ಲಾ ಘಟನೆಗಳನ್ನು ತಮ್ಮ ಕ್ಯಾಮರಾಗಳ ಮೂಲಕ ಸೆರೆ ಹಿಡಿದು, ಆ ಕ್ಷಣಗಳನ್ನು ಚಿರಕಾಲ ಉಳಿಸುತ್ತಿದ್ದಾರೆ. ಮದುವೆ ಮುಂತಾದ ಸಮಾರಂಭಗಳ ಭಾವನೆಗಳನ್ನು ಚಿತ್ರಗಳು ಸೆರೆ ಹಿಡಿದು ಚಿರಕಾಲ ಉಳಿಸುತ್ತವೆ. ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿ ಮಾಡುವಲ್ಲಿಯೂ ಛಾಯಾಗ್ರಹಣ ನೆರವಾಗುತ್ತಿದೆ ಎಂದು ಅವರು ಶ್ಲಾಘಿಸಿದರು.

ದಾವಣಗೆರೆಯಲ್ಲಿ ಇಂತಹ ಫೋಟೋ ಎಕ್ಸ್ಪೋ ಎಕ್ಷಿಬಿಷನ್ ನಡೆಸುತ್ತಿದ್ದೀರಿ. ಪ್ರದರ್ಶನದಲ್ಲಿ ನಮ್ಮ ಜಿಲ್ಲೆಗೆ ಸಮೀಪದ ಚಿತ್ರದುರ್ಗ, ಗದಗ, ತುಮಕೂರು, ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಸೇರಿದಂತೆ ವಿವಿಧೆಡೆಯಿಂದ ಫೋಟೋ ಮತ್ತು ವೀಡಿಯೋಗ್ರಾಫರ್ಸ್‌ ಭಾಗವಹಿಸಿದ್ದೀರಿ. ಅಲ್ಲದೇ ಈ ವೃತ್ತಿಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸಮಾರಂಭ, ಕಾರ್ಯಾಗಾರ ಮತ್ತು ನಿಮ್ಮ ಮಕ್ಕಳ ಪ್ರತಿಭೆ ಬೆಳಗಲು ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ.

ಸೋನಿ ಕಂಪನಿಯ ನೂತನ ಮಾದರಿಯ ಕ್ಯಾಮರಾವನ್ನು ಪ್ರಥಮ ಬಾರಿಗೆ ಇಲ್ಲಿ ಲಾಂಚ್ ಮಾಡುತ್ತಿರುವುದು ನಮ್ಮ ದಾವಣಗೆರೆಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ.ಅಗಡಿ, ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ ಜಾಧವ್, ಶಿವಮೊಗ್ಗದ ಕೆ.ಟಿ.ಶ್ರೀನಿವಾಸ, ಹಾವೇರಿ ರಾಜೇಂದ್ರ ರಿತ್ತಿ, ಗದಗದ ಪವನ್ ಕೆ. ಮೆಹರವಾಡೆ, ಚಿತ್ರದುರ್ಗದ ಸೈಯ್ಯದ್ ರಹಮತ್‌ವುಲ್ಲಾ, ವಿಜಯನಗರದ ಕೆ.ರಾಮಣ್ಣ, ಕೊಪ್ಪಳದ ವಿಜಯಕುಮಾರ ವಸ್ತ್ರದ್, ಎಚ್‌ಕೆಸಿ ರಾಜು, ಎಸ್.ದುಗ್ಗಪ್ಪ, ಎನ್.ಮಲ್ಲಿಕಾರ್ಜುನ್, ಬಿ.ಎಂ. ತಿಪ್ಪೇಸ್ವಾಮಿ, ಪಂಚಾಕ್ಷರಿ, ತಿಲಕ್, ಕೆ.ಪಿ. ನಾಗರಾಜ್, ಮಿಥುನ್, ಅರುಣ್ ಕುಮಾರ್, ಪ್ರಕಾಶ್, ಕಿಶೋರ್, ಮಹಾಂತೇಶ್, ಎನ್.ಕೆ. ಕೊಟ್ರೇಶ್ ಇತರರು ಇದ್ದರು. ಅಂತಾರಾಷ್ಟ್ರೀಯ ಕಂಪನಿಗಳ ಕ್ಯಾಮರಾ, ಲೆನ್ಸ್‌, ಫ್ರೇಂ, ಪ್ರಿಂಟರ್‌, ಆಲ್ಬಂ ಡಿಜೈನ್, ಆಲ್ಬಂ ತಯಾರಿಕೆಗೆ ಸಂಬಂಧಿಸಿದ ಪರಿಕರಗಳ ಸ್ಟಾಲ್‌ಗಳಿದ್ದವು.ಫೋಟೋಗ್ರಾಫರ್ಸ್‌ ಮತ್ತವರ ಕುಟುಂಬದವರಿಗಾಗಿ ಎಸ್.ಎಸ್.ಜನಕಲ್ಯಾಣ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ನವೀನ ತಂತ್ರಜ್ಞಾನ ಪರಿಚಯ, ಉಚಿತ ಕಾರ್ಯಾಗಾರ, ಉಚಿತ ಕ್ಯಾಮರಾ ತಪಾಸಣೆ, ಅಂಚೆ ಇಲಾಖೆ ಸೌಲಭ್ಯ, ಇ-ಶ್ರಮ ಕಾರ್ಡ್ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ ಪಿ.ಅಗಡಿ, ಸಂಘದ ಅಧ್ಯಕ್ಷ ವಿಜಯ ಜಾಧವ್, ತಿಪ್ಪೇಸ್ವಾಮಿ, ಕೆ.ಪಿ.ಅರುಣಕುಮಾರ, ಎಚ್‌ಕೆಸಿ ರಾಜು, ತಿಲಕ್, ಶಂಭು, ನಾಗರಾಜ,ಪಿ.ಎನ್.ಮಲ್ಲಿಕಾರ್ಜುನ, ದುಗ್ಗಪ್ಪ, ಮಿಥುನ್, ಎನ್.ಕೆ.ಕೊಟ್ರೇಶ ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು.

ಎಸ್ಸೆಸ್ ಜನಕಲ್ಯಾಣ ನೆರವಿಗೆ ಮನವಿ

ದೂಡಾದಿಂದ ಸಂಘಕ್ಕೆ ನಿವೇಶನ ಮಂಜೂರಾಗಿದ್ದೂ, 3 ಲಕ್ಷ ರು. ಕಟ್ಟಿರುತ್ತೇವೆ. ಉಳಿದ ಹಣ ಕಟ್ಟಲು ರಿಯಾಯಿತಿ ನೀಡಬೇಕೆಂದು ಹಾಗೂ ಕಳೆದ 2 ವರ್ಷಗಳಿಂದ ಛಾಯಾಗ್ರಾಹಕರ ಮಕ್ಕಳಿಗೆ ಎಸ್.ಎಸ್.ಜನಕಲ್ಯಾಣ ಟ್ರಸ್ಟ್‌ನಿಂದ ಸ್ಕಾಲರ್‌ಶಿಪ್ ನೀಡುತ್ತಿದ್ದು, ಈಗ ನಿಲ್ಲಿಸಿದ್ದಾರೆ. ಈ ಬಗ್ಗೆ ಸಂಸದರು ಗಮನ ಹರಿಸಿ, ಅನುಕೂಲ ಮಾಡಿಕೊಡುವಂತೆ ಸಂಘದ ಅಧ್ಯಕ್ಷ ಶ್ರೀನಾಥ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ನೀವು ಸಹ ಒಂದು ಬಾರಿ ಬಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಭೇಟಿ ಮಾಡಿ, ಮನವಿ ಮಾಡಿರಿ. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪಾಜಿ, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನರ ಬಳಿ ನಾನೂ ಸಹ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡಿ, ಚರ್ಚಿಸುವೆ ಎಂದು ಭರವಸೆ ನೀಡಿದರು.

Share.
Leave A Reply

Exit mobile version