![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್‍ಖಾನ್ ಬಾಲಹಿಡಿಯುತ್ತ ಹೋದರೆ ಸಿಎಂ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಫ್‍ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಠಮಾರಿತನ ಧೋರಣೆಯನ್ನು ಮುಂದುವರೆಸುವಂತೆ ಕಾಣುತ್ತದೆ. ಇಡೀ ರಾಜ್ಯವನ್ನೇ ಇಸ್ಲಾಮಿಕ್‍ಕರಣ ಮಾಡಲು ಹೊರಟಿದೆ. ಈಗಾಗಲೇ ಸುಮಾರು 1.10ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ವಕ್ಫ್ ವಿವಾದಗಳು ತಲೆಎತ್ತಿವೆ. ರೈತರ ಜಮೀನುಗಳು, ಸಾಧುಸಂತರ ಮಠಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಇದರಲ್ಲಿ ಸೇರಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ರಕ್ತಕ್ರಾಂತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಸಾಧುಸಂತರೆ ಇದರ ಮುಂದಾಳತ್ವ ವಹಿಸಲಿದ್ದಾರೆ. ಮುಖ್ಯಮಂತ್ರಿಗಳೇನೋ ಅಧಿಕಾರಿಗೆ ಹೇಳಿದ್ದೇನೆ ಕ್ರಮಕೈಗೊಳ್ಳುತ್ತಾರೆ ಎನ್ನುತ್ತಾರೆ. ಅದಷ್ಟೇ ಸಾಲದು ರೈತರ ಪಹಣಿಗಳಲ್ಲಿ ವಕ್ಫ್ ಹೆಸರಿನಲ್ಲಿ ಪಹಣಿ ಇದ್ದು, ಅದನ್ನು ಈ ಕೂಡಲೇ ರದ್ದು ಪಡಿಸಬೇಕು ಎಂದರು.
ಇಡೀ ರಾಜ್ಯದಲ್ಲಿ ಈ ವಿವಾದ ಹಬ್ಬಿದೆ. ಕಲ್ಬುರ್ಗಿ, ಶ್ರೀರಂಗಪಟ್ಟಣ, ಮಂಡ್ಯ, ವಿರಕ್ತಮಠ, ಹೀಗೆ ಎಲ್ಲಾ ಕಡೆಗಳಲ್ಲೂ ಇದು ವ್ಯಾಪಿಸಿದೆ. ಕುರುಬರಿಗೆ ಸೇರಿದ ಬೀರಲಿಂಗೇಶ್ವರ ದೇವಸ್ಥಾನವನ್ನು ಈ ವಕ್ಫ್ ಬಿಟ್ಟಿಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಬೀರಲಿಂಗೇಶ್ವರನು ಅವರನ್ನು ಕ್ಷಮಿಸುವುದಿಲ್ಲ ಎಲ್ಲರ ಶಾಪ ಅವರಿಗೆ ತಟ್ಟಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದರು.
ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾದರೂ ವಕ್ಫ್ ಟ್ರಿಬ್ಯುನಲ್ ಕೋರ್ಟ್‍ಗೆ ಹೋಗಬೇಕು. ಇದು ಸುಪ್ರೀಂ ಕೋರ್ಟ್‍ಗಿಂತ ದೊಡ್ಡದೇ ಈ ಕೋರ್ಟ್‍ಗೆ ಹೋದರೆ ಯಾರ ಪರವಾಗಿ ತೀರ್ಮಾನವಾಗುತ್ತದೆ ಎಂದು ಎಲ್ಲರಿಗೂ ಗೊತ್ತು, ಆ ಕಾರಣಕ್ಕಾಗಿಯೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರದ ಆಶಯವಾಗಿದೆ. ಇದಕ್ಕಾಗಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಆದಷ್ಟು ಬೇಗ ಕಾಯ್ದೆ ಜಾರಿಗೆ ತರಬೇಕು. ವಕ್ಫ್ ಶಬ್ದವೇ ಕೊನೆಗೊಳ್ಳಬೇಕು ಎಂದರು. ಈಗಾಗಲೇ ಸಾಧು ಸಂತರು ಎಚ್ಚೆತ್ತುಕೊಂಡಿದ್ದಾರೆ, ಹೋರಾಟಕ್ಕಾಗಿ ನನ್ನನ್ನು ಕರೆದಿದ್ದಾರೆ. ಸಾಧುಸಂತರೇ ಜಾಗೃತಿಗೊಂಡಿರುವುದು ತುಂಬ ಸಂತೋಷದ ವಿಷಯ. ನಾಳೆ ನಾಡಿದ್ದರಲ್ಲಿ ಬಾಗಲಕೋಟೆಗೆ ಇದಕ್ಕೆ ಸಂಬಂಧಿಸಿದಂತೆ ಸಾಧುಸಂತರೊಂದಿಗೆ ಮಾತನಾಡುವೆ, ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಬಾಲು, ಮೋಹನ್‍ಕುಮಾರ್ ಜಾದವ್, ಶಂಕರನಾಯ್ಕ್, ಕುಬೇರಪ್ಪ, ಚನ್ನಬಸಪ್ಪ, ಮೋಹನ್ ಮತ್ತಿತರರು ಇದ್ದರು.