ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲ್ಲುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದ್ದಾರೆ.
ಈ ಕುರಿತು ದಾವಣಗೆರೆ ವಿಜಯದೊಂದಿಗೆ ಮಾತನಾಡಿದ ಅವರು, ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮಾಡುತ್ತಿರುವ ಸಮಾಜ ಸೇವೆ ಅದರಲ್ಲೂ ಆರೋಗ್ಯ ಸೇವೆ ಹೆಚ್ಚು ಜನರಿಗೆ ತಲುಪಿದೆ. ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ಬಡವರಿಗೆ ಉಚಿತ ಡಯಾಲಿಸಿಸ್, ಕ್ಯಾನ್ಸರ್ ತಪಾಸಣೆ ಸೇರಿದಂತೆ ಹಲವು ವೈದ್ಯಕೀಯ ಸೇವೆಗಳನ್ನು ಲಕ್ಷಾಂತರ ಜನರು ಪಡೆದುಕೊಂಡಿರುವುದು ಅವರ ಜನಸೇವೆಯ ದ್ಯೋತಕವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯದೇ ಇರುವ ಕುಟುಂಬಗಳು ಯಾವೂ ಇಲ್ಲ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯದಂಥಹ ಜನಪ್ರಿಯ ಯೋಜನೆಗಳಿಂದ ರಾಜ್ಯದ ಜನರ ಬದುಕು ಹಸನಾಗಿದೆ. ಈ ಎಲ್ಲರೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ಹಾಗಾಗಿ ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ 20 ಲೋಕಸಭಾ ಕಾಂಗ್ರೆಸ್ ಜಯಗಳಿಸಲಿದೆ ಎಂದರು.
ದಾವಣಗೆರೆ ನಗರದ ಅಭಿವೃದ್ಧಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೈಗೊಂಡಿರುವ ಕೆಲಸಗಳೆ ಅವರ ಸಾಧನೆಯನ್ನು ಹೇಳುತ್ತವೆ.ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣ 6 ಕೋಟಿ ರೂ ವೆಚ್ಚದಲ್ಲಿ ಜನರಿಗೆ ಉಚಿತ ವ್ಯಾಕ್ಸಿನೇಷನ್ ನೀಡಿದ್ದಾರೆ.ಇಂಥಹ ಹಲವು ಸಮಾಜ ಮುಖಿ ಕೆಲಸಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಕುಟುಂಬ ಹೆಸರುಗಳಿಸಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದರು