ಹರಪನಹಳ್ಳಿ : ನಾನು ಬಿಜೆಪಿಗೆ ಹೊಸ ಅಭ್ಯರ್ಥಿ ಅಷ್ಟೇ, ಆದ್ರೆ ರಾಜಕೀಯ ಹಳೆಯದ್ದು ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು. ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಾನು ಬಿಜೆಪಿಗೆ ಹೊಸ ಅಭ್ಯರ್ಥಿ ಅಷ್ಟೇ, ಆದರೆ ಪಕ್ಷ ಹಳೆಯದ್ದು. ನಮ್ಮ ಮಾವನವರು ಲೋಕಸಭೆಗೆ ನಿಂತಾಗ ಏಳು ವರ್ಷಗಳ ಕಾಲ ಬಿಜೆಪಿಗೆ ದುಡಿದಿದ್ದೇನೆ.
ನನ್ನ ಪತಿ ಸಂಸದರಾಗಲು 20 ವರ್ಷಗಳ ಕಾಲ ಅವರ ಜತೆ ಕೆಲಸ ಮಾಡಿದ್ದೇನೆ. ನನಗೆ ರಾಜಕೀಯ ಅನುಭವವಿದೆ. ಅದರ ಆಗುಹೋಗುಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಮುಖ ಪರಿಚಯ ಇದೆ. ಹೆಸರು ಗೊತ್ತಿಲ್ಲವಷ್ಟೇ. ನೀವೆಲ್ಲ ನನಗೆ ಗೊತ್ತಿರುವರೇ. ಹಾಗಾಗಿ ನಾನು ಎಲ್ಲರನ್ನೂ ಅಣ್ಣ ಎಂದು ಬೋಧಿಸುತ್ತೇನೆ ಎಂದರು.
ಕೇಂದ್ರ ಸರಕಾರವು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಖ್ಯ ವಾಹಿನಿಗೆ ತರುವ ಇಚ್ಛೆಯಿಂದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 33 ರಷ್ಟು ಮೀಸಲಾತಿ ತರುವ ನಿರ್ಧಾರ ತೆಗೆದುಕೊಂಡಿದೆ.ಅದಕ್ಕಾಗಿ ಬಿಲ್ ಪಾಸ್ ಮಾಡಲಾಗಿದೆ ಅದು ಜಾರಿಗೂ ಮುನ್ನವೇ ಈ ಬಾರಿ ನನಗೆ ಅವಕಾಶ ನೀಡಿದ್ದು, ಸಮಾಜದಲ್ಲಿ ಪುರುಷ ಸಮಾನವಾಗಿ ಮಹಿಳೆಯರು ಸಬಲರಾಗಲು ಪಕ್ಷವು ಸಹಕರಿಸುತ್ತಿರುವುದು ಸಂತಸದ ವಿಚಾರವೆಂದರು.ಬಿಜೆಪಿಯಿಂದ ನನಗೆ ಅವಕಾಶ ಸಿಕ್ಕಿದೆ, ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ, ನನ್ನನ್ನು ಗೆಲ್ಲಿಸಿ ಕಳಿಸಿದರೆ ಮೋದಿಯವರಿಗೆ ಬಲ ಬರುತ್ತದೆ ಎಂದು ಅವರು ತಿಳಿಸಿದರು.
ನಾನು ಸಣ್ಣ ಕುಟುಂಬದಿಂದ ಬಂದವಳು,ನನಗೆ ಗಂಡ ಮಕ್ಕಳು,ಮೈದುನಾ, ತೋಟ, ಮೂವತ್ತು ಹಸುಗಳು ಮಾತ್ರ ನನಗೆ ಪ್ರಪಂಚವಾಗಿತ್ತು. ನನ್ನ ಗಂಡ ದೇಶ ಸೇವೆ ಮಾಡುತ್ತಿದ್ದರೇ, ನಾನು ಮನೆಯಲ್ಲಿ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೇ. ಈಗ ನಿಮ್ಮ ಸೇವೆಗೆ ಬಂದಿದ್ದೇನೆ ಗೆಲ್ಲಿಸಿ. ನಿಮ್ಮಲ್ಲಿ ಯಾಕೆ ಬಣ ಮಾಡಿಕೊಂಡಿದ್ದೀರಿ, ನಾವೆಲ್ಲ ಒಂದೇ..ಪಕ್ಷ ಅಂದ ಮೇಲೆ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ಕೂತು ಬಗೆಹರಿಸಿಕೊಳ್ಳೋಣ..ನಮಗೂ, ನಿಮಗೂ ಇಬ್ಬರಿಗೂ ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ನಾವೆಲ್ಲರೂ ಒಂದಾಗೋಣ, ನನ್ನನ್ನು ಗೆಲ್ಲಿಸಿ, ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.