ನಾಯಕನಹಟ್ಟಿ: ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಶುಕ್ರವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.
ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ. ಆದರೆ, ಈ ವರ್ಷ ಜಾತ್ರೆಯ ನಂತರ ಚುನಾವಣೆ ಘೋಷಣೆಯಾದ ಪ್ರಯುಕ್ತ 2 ತಿಂಗಳು ತಡವಾಗಿ ಹುಂಡಿಯನ್ನು ತೆರೆಯಲಾಗಿದೆ. ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6 ಗಂಟೆಗೆ ಮುಕ್ತಾಯವಾಯಿತು.
ಹೊರಮಠದಲ್ಲಿ ₹ 19,53,575, ಒಳಮಠದಲ್ಲಿ ₹ 51,87,750 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಈ ವರ್ಷದ ಜಾತ್ರೆಯಲ್ಲಿ ₹ 71,41,325 ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಹುಂಡಿಗಳಲ್ಲಿ ಬೆಳ್ಳಿ ನಾಣ್ಯಗಳು, ಬೆಳ್ಳಿ ತೊಟ್ಟಿಲು, ಇನ್ನಿತರ ಬೆಳ್ಳಿ ಆಭರಣಗಳು ಕಂಡು ಬಂದವು. ವಿದೇಶಿ ಕರೆನ್ಸಿಯೂ ಕಂಡು ಬಂದವು.
ಕಾರ್ಯ ನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಮುಜುರಾಯಿ ಅಧಿಕಾರಿ ಸದಾಶಿವಪ್ಪ, ಉಪತಹಶೀಲ್ದಾರ್ ಬಿ.ಶಕುಂತಲಾ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ಉಮಾ, ಶಂಕರ್, ಕೆನರಾಬ್ಯಾಂಕ್ ವ್ಯವಸ್ಥಾಪಕ ರಾಮ್‌ಮೋಹನ್, ಸಿಬ್ಬಂದಿ ವಿರೂಪಾಕ್ಷಪ್ಪ, ರಘು ಕೆ.ಮೂರ್ತಿ, ಕೆ.ಎಚ್.ಚೇತನಾ, ಮಹಾಸ್ವಾಮಿ, ವೀರಭದ್ರಪ್ಪ, ಪುರಂದರ್, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಶಿವಕುಮಾರ್, ಮಂಜುನಾಥ, ರುದ್ರೇಶ್, ತಿಪ್ಪಮ್ಮ, ಮಹಾದೇವ ಉಪಸ್ಥಿತರಿದ್ದರು.