ಹೊಸದುರ್ಗ : ಕಾರಿನಲ್ಲಿ ಇಟ್ಟಿದ್ದ 10 ಲಕ್ಷ ರೂಪಾಯಿಯನ್ನು ಕೆಲವೇ ನಿಮಿಷಗಳಲ್ಲಿ ಕದ್ದಿರುವ ಘಟನೆ ಹೊಸದುರ್ಗ ಪಟ್ಟಣದ ಬರೋಡ ಬ್ಯಾಂಕ್ ಸಮೀಪ ನಡೆದಿದೆ.
ತಾಲೂಕಿನ ಲಕ್ಕಿಹಳ್ಳಿ ಗ್ರಾಮದ ಮುದ್ದಪ್ಪ ಹಣ ಕಳೆದುಕೊಂಡವರು.

ಮುದ್ದಪ್ಪ ಅವರ ಮಾವ ರುದ್ರಪ್ಪ ಅವರಿಗೆ ಸೇರಿದ ದೊಡ್ಡಕಿಟ್ಟದಹಳ್ಳಿಯ ಜಮೀನು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ಸರಕಾರ ಭೂಸ್ವಾಧೀನ
ನಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಪ್ಪರ್ ಭದ್ರಾ ಇಲಾಖೆಯಿಂದ ಜಮೀನಿಗೆ 19 ಲಕ್ಷದ 97 ಸಾವಿರ ರೂ. ಅವಾರ್ಡ್ ನೀಡಿತ್ತು. ಈ ಹಣ ರುದ್ರಪ್ಪ ಅವರ ಹೊಸದುರ್ಗದ ಕರ್ನಾಟಕ ಬ್ಯಾಂಕ್‍ನ ಖಾತೆಗೆ ಹಣ ಪಾವತಿಯಾಗಿತ್ತು.ಈ ಹಣವನ್ನು ಡ್ರಾ ಮಾಡಲು ಹೋದಾಗ ಕಳ್ಳತನದ ಘಟನೆ ನಡೆದಿದೆ.

ಕರ್ನಾಟಕ ಬ್ಯಾಂಕ್ ನಲ್ಲಿ ಹಣ ಡ್ರಾ

ಬೆಳಗ್ಗೆ 12 ಗಂಟೆ ಸುಮಾರಿಗೆ ಮುದ್ದಪ್ಪ ಹಾಗೂ ಮಾವ ರುದ್ರಪ್ಪ ಅವರು ಪಟ್ಟಣದ ಕರ್ನಾಟಕ ಬ್ಯಾಂಕ್‍ನಲ್ಲಿ 10 ಲಕ್ಷ ರೂ ಹಣ ಡ್ರಾ ಮಾಡಿದ್ದರು.

ನಂತರ ಮತ್ತಷ್ಟು ಹಣ ಡ್ರಾ ಮಾಡುವ ಸಲುವಾಗಿ ಹುಳಿಯಾರು ರಸ್ತೆಯ ಬರೋಡ ಬ್ಯಾಂಕ್‍ಗೆ 12.45 ಗಂಟೆ ಸಮಯದಲ್ಲಿ ತೆರಳಿದ್ದರು.ಈ ಮುಂಚೆಯೇ ಡ್ರಾ ಮಾಡಿದ್ದ ಹಣದ ಬ್ಯಾಗನ್ನು ಕಾರಿನಲ್ಲಿಯೇ ಬಿಟ್ಟು ಲಾಕ್ ಮಾಡಿ ಹೋಗಿದ್ದರು.ಈ ಮೊದಲೇ ಹಿಂಬಾಲಿಸಿದ್ದ ಕಳ್ಳರು ಕಾರಿನ ಮುಂಭಾಗದ ಡೋರ್‍ನ ಗಾಜು ಒಡೆದು ಹಣ ಲಪಟಾಯಿಸಿದ್ದಾರೆ.

ಬರೋಡಾ ಬ್ಯಾಂಕಿನಲ್ಲಿ ಸಾಕಷ್ಡು ಜನ ಇದ್ದ ಕಾರಣ ಉಳಿದ ಹಣ ಬಿಡಿಸಿರಲಿಲ್ಲ

ಬರೋಡ ಬ್ಯಾಂಕಿನಲ್ಲಿ ಸಾಕಷ್ಟು ಗ್ರಾಹಕರು ಇದ್ದುದ್ದರಿಂದ ಹಣ ಡ್ರಾ ಮಾಡದೇ ವಾಪಸ್ಸು ಬಂದಾಗ ಕಾರಿನ ಗಾಜನ್ನು ಒಡೆದು 10 ಲಕ್ಷ ರೂ ಇದ್ದ ಬ್ಯಾಗನ್ನು ಕದ್ದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡುವುದನ್ನು ಗಮನಿಸಿದ್ದ ಗ್ಯಾಂಗೇ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ. ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದ ಇಬ್ಬರು ಕಳ್ಳರು ಕಾರಿನ ಕಿಟಿಕಿಯ ಗಾಜು ಒಡೆದು ಹಣದ ಬ್ಯಾಗ್ ಲಪಟಾಯಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖದೀಮರು ಶಬ್ದ ಕೂಡ ಬಾರದಂತೆ ಗಾಜು ಒಡೆದಿದ್ದಾರೆ.

ಹಾಡಹಗಲೆ ನಡೆದ ಘಟನೆಯಿಂದಾಗಿ ಜನತೆ ಆತಂಕಕ್ಕೆ ಒಳಗಾದರು. ಘಟನೆಗೆ ಸಂಬಂಧಿಸಿದಂತೆ ಮುದ್ದಪ್ಪ 10 ಲಕ್ಷ ರೂ ನಗದು ಕಳುವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ಪೊಲೀಸರ ಭೇಟಿ, ಪರಿಶೀಲನೆ

ಹೆಚ್ಚುವರಿ ಪೋಲೀಸ್ ಅಧೀಕ್ಷಕರು ಕುಮಾರಸ್ವಾಮಿ, ಹಿರಿಯೂರು ಪೋಲೀಸ್ ಉಪಾಧೀಕ್ಷಕಿ ಚೈತ್ರಾ, ವೃತ್ತ ನಿರೀಕ್ಷಕ ತಿಮ್ಮಣ್ಣ ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version