ದಾವಣಗೆರೆ : ಶಿಮುಲ್ ನಿರ್ದೇಶಕರ ಚುನಾವಣೆ ನಂತರ ಅಧ್ಯಕ್ಷರ ಚುನಾವಣೆ ಇದೇ ಆ.26ಕ್ಕೆ ನಡೆಯಲಿದ್ದು, ಅಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆಗೆ ದೊರೆಯಬೇಕು. ಇನ್ನು ಉಪಾಧ್ಯಕ್ಷ ಸ್ಥಾನ ಯಾರಿಗಾದರೂ ಕೊಡಲಿ ಎಂದು ದಾವಣಗೆರೆ ವಿಭಾಗದವರು ಒತ್ತಾಯಿಸಿದ್ದಾರೆ.
ಸದ್ಯ ದಾವಣಗೆರೆ ವಿಭಾಗದಿಂದ ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ್ಪ, ಚಿತ್ರದುರ್ಗ ವಿಭಾಗದಿಂದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ. ಇವರಲ್ಲಿ ಬಹುತೇಕ ಕಾಂಗ್ರೆಸ್‌ನವರದ್ದು ಇದ್ದು, ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಎಚ್.ಕೆ.ಬಸಪ್ಪ ಈ ಬಾರಿ ಪ್ರಭಲ ಪೈಪೋಟಿ ನೀಡುತ್ತಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಕಿಂಗ್ ಮೇಕರ್ ಮಂಜುನಾಥ್‌ಗೌಡ ನೇತೃತ್ವದ ತಂಡ ಶಿವಶಂಕರ್, ವಿದ್ಯಾಧರ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ತಹಸೀಲ್ದಾರ್ ಗಿರೀಶ್ ನೇತೃತ್ವದ ತಂಡ ಆಡಳಿತ ಮಂಡಳಿ 14 ನಿರ್ದೇಶಕರ ಸ್ಥಾನಗಳ ಚುನಾವಣೆಯನ್ನು ಬಹು ಅಚ್ಚುಕಟ್ಟಾಗಿ ನೆರವೇರಿಸಿದ್ದು, ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಆ.26ರಂದು ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ. ಅಂದು ಬೆಳಗ್ಗೆ 10.3000 11.300 ವರೆಗೆ ನಾಮಪತ್ರಗಳ ಸಲ್ಲಿಕೆ, ಮಧ್ಯಾಹ್ನ 1.30ಕ್ಕೆ ಆಡಳಿತ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತವೆ. ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇದ್ದು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದ ಜನರಿಗೆ ಕುತುಹೂಲ ದಿನದಿಂದ ದಿನಕ್ಕೆ ಏರುತ್ತಿದೆ.

ಕಾಂಗ್ರೆಸ್‌ಗೆ ಬಹುಮತ
ಸದ್ಯ ಶಿಮುಲ್‌ನಲ್ಲಿ ಕಾಂಗ್ರೆಸ್ ಬೆಂಬಲಿತರೇ ಹೆಚ್ಚಾಗಿರುವ ಕಾರಣ ಅವರಲ್ಲಿಯೇ ಪೈಪೋಟಿ ಏರ್ಪಟ್ಟಿದೆ. ಅತ್ತ ಎಸ್.ಎಸ್.ಮಲ್ಲಿಕಾರ್ಜುನ್ ಎಚ್.ಕೆ.ಬಸಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಇತ್ತ ಮಧು ಬಂಗಾರಪ್ಪ ಶಿವಶಂಕರ್, ವಿದ್ಯಾಧರ ಪರ ಬ್ಯಾಟಿಂಗ್ ಬೀಸಿದ್ದಾರೆ. ಈ ನಡುವೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಆಕಾಂಕ್ಷಿ ಅಲ್ಲದೇ ಹೋದರೂ ಅವರು ಸೂಚಿಸುವ ಹೆಸರಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಈ ಕಾರಣದಿಂದ ಎರಡು ಜಿಲ್ಲೆಯವರು ರಾಜಕಾರಣಿಗಳ ಮನೆಗೆ ಓಡಾಟ ಶುರು ಮಾಡಿದ್ದಾರೆ. ಸದ್ಯ 14 ನಿರ್ದೇಶಕರ ಪೈಕಿ 8 ನಿರ್ದೇಶಕರು ಕಾಂಗ್ರೆಸ್ ಬೆಂಬಲಿಗರು, ನಾಲ್ವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬೆಂಬಲಿಗರು ಮತ್ತು ಒಬ್ಬರು ಪಕ್ಷೇತರರು ಇದ್ದಾರೆ. ಕಾಂಗ್ರೆಸ್ ಬೆಂಬಲಿಗರಿಗೆ ಬಹುಮತ ಇರುವುದರಿಂದ ಅವಿರೋಧ ಅಥವಾ ಮತದಾನ ನಡೆದರೂ ಅವರಲ್ಲೇ ಇಬ್ಬರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಬಹುದು.ವಿಶೇಷವೆಂದರೆ 14 ನಿರ್ದೇಶಕರಲ್ಲಿ 8 ಜನ ಹಳಬರಿದ್ದಾರೆ. ಅವರಲ್ಲಿ ಶಿಕಾರಿಪುರದ ಟಿ.ಶಿವಶಂಕರಪ್ಪ, ಹರಿಹರದ ಜಗದೀಶಪ್ಪ ಬಣಕಾರ್, ಹೊಸನಗರದ ವಿದ್ಯಾಧರ್, ಭದ್ರಾವತಿಯ ಡಿ.ಆನಂದ್ ಮತ್ತು ಚಿತ್ರದುರ್ಗದ ಜಿ.ಪಿ.ರೇವಣಸಿದ್ದಪ್ಪ ಮಾಜಿ ಅಧ್ಯಕ್ಷರಾದರೆ, ಚನ್ನಗಿರಿಯ ಎಚ್. ಕೆ.ಬಸಪ್ಪ ಉಪಾಧ್ಯಕ್ಷರಾದ ಅನುಭವ ಹೊಂದಿದ್ದಾರೆ. ಸತತ 4ನೇ ಬಾರಿ ಜಯ ಗಳಿಸಿರುವ ಟಿ.ಶಿವಶಂಕರಪ್ಪ, ತಲಾ ಮೂರನೇ ಬಾರಿ ಶಿಮುಲ್ ಪ್ರವೇಶಿರುವ ವಿದ್ಯಾಧರ ಮತ್ತು ಎಚ್.ಕೆ.ಬಸಪ್ಪ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲದೆ ಅವಕಾಶ ಸಿಕ್ಕರೆ ನಾವೂ ಅಧ್ಯಕ್ಷರಾಗಲು ಸಿದ್ಧ ಎನ್ನುವವರು ಇನ್ನೂ ಹಲವರಿದ್ದಾರೆ. ಮೊದಲ ಬಾರಿಗೆ ಶಿಮುಲ್ ಪ್ರವೇಶಿಸಿರುವ ಆರ್.ಎಂ. ಮಂಜುನಾಥಗೌಡ ಅವರು ಸುಲಭದಲ್ಲಿ ಅಧ್ಯಕ್ಷರಾಗಲು ಅವಕಾಶವಿದೆ. ಅವರು ಬಯಸಿದಲ್ಲಿ ಅವಿರೋಧ ಆಯ್ಕೆಯು ನಡೆಯಬಹುದು. ಆದರೆ, ಅವರು ಈಗಾಗಲೆ ಡಿಸಿಸಿ ಬ್ಯಾಂಕ್ ಮತ್ತು ಎಂಎಡಿಬಿ ಅಧ್ಯಕ್ಷರಾಗಿರುವುದರಿಂದ ಶಿಮುಲ್ ಅಧ್ಯಕ್ಷಸ್ಥಾನ ಬಯಸುವ ಸಾಧ್ಯತೆ ಇಲ್ಲ. ಆದರೆ, ಚುನಾವಣೆಗೆ ಅವರೇ ಕಿಂಗ್ ಮೇಕರ್. ಅವರು ಆಯ್ಕೆ ಮಾಡುವವರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವುದು ಖಚಿತವಾಗಿದ್ದರೂ, ದಾವಣಗೆರೆ ಕಡೆಯಿಂದಲೂ ಹೋರಾಟ ನಡೆಯುತ್ತಲೇ ಇದೆ. ಅಂತಿಮವಾಗಿ ಎರಡು ಜಿಲ್ಲೆಗಳಿಗೆ ಫಿಪ್ಟಿ-ಫಿಪ್ಟಿ ಅಧಿಕಾರ ಸಿಗುವ ಬಹುತೇಕ ಲಕ್ಷಣಗಳು ಕಾಣುತ್ತಿವೆ. ಹೀಗಾದರೂ ಯಾವ ಜಿಲ್ಲೆಯವರು ಮೊದಲು ಅಧ್ಯಕ್ಷರಾಗುತ್ತಾರೆ ಎಂದು ಕಾದು ನೋಡಬೇಕು.

ಎಚ್.ಕೆ.ಬಸಪ್ಪರಿಗೆ ಕೋರ್ಟ್ನಲ್ಲಿ ಜಯ ಸಿಕ್ಕಿತ್ತು

ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷಗಾದಿಗೆ ನಡೆದ ಚುನಾವಣೆ ಅಕ್ರಮವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಆರು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಅಲ್ಲದೆ ಅಕ್ರಮ ಚುನಾವಣೆಗೆ ಸಹಕರಿಸಿದ ಆರೋಪದ ಮೇರೆಗೆ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಮತ್ತು ಸಹಕಾರ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ 10 ಸಾವಿರ ರೂ ದಂಡ ವಿಧಿಸಿತ್ತು.
ಈ ಹಿಂದೆ ಶಿಮುಲ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸೊರಬದ ಶ್ರೀಪಾದ ರಾವ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ಶಿಮುಲ್‌ನಲ್ಲಿ ಬಿಜೆಪಿ 3 , ಕಾಂಗ್ರೆಸ್ 9 ,ಜೆಡಿಎಸ್ 1 ನಿರ್ದೇಶಕರು ಇದ್ದರು. ಇದರಲ್ಲಿ ಕಳೆದ ಡಿಸೆಂಬರ್‌ನಲ್ಲಿ ಶಿಕಾರಿಪುರ ತಾಲೂಕು ಹೀರೆಬಂಬೂರು ಗ್ರಾಮದ ಶಿವಶಂಕರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಗಾರನಹಳ್ಳಿಯ ಟಿ.ಬಸಪ್ಪ ಹಾಗೂ ಹೊಸನಗರ ತಾಲೂಕಿನ ಕಾರ್ಗಡಿ ವಿದ್ಯಾಧರ್ ರವರಿಗೆ ಸಹಕಾರ ಇಲಾಖೆ 29(ಛಿ) ರಂತೆ ನೋಟಿಸ್ ನೀಡಿ, ಚುನಾವಣೆಗೆ ಅನರ್ಹರನ್ನಾಗಿಸಲಾಗಿತ್ತು. ಇವರು ಹೈಕೋರ್ಟ್ಗೆ ಹೋಗಿ ನೀಡಲಾದ ನೋಟಿಸ್‌ಗೆ ತಡೆಯಾಜ್ಞೆ ತಂದಿದ್ದರು. ಸತತ ಕೋರ್ಟ್ ಹೋರಾಟದ ಫಲವಾಗಿ ಶಿವಶಂಕರ್ ಪರ ನ್ಯಾಯಾಲಯ ತೀರ್ಪು ನೀಡಿತ್ತು.
ಯಾರೆಲ್ಲ ಗೆದ್ದಿದ್ದರು

ಶಿವಮೊಗ್ಗ ವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದರು.ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆಯುವ ಮೂಲಕ ವಿಜಯಶಾಲಿಯಾಗಿದ್ದರು. ಸಾಗರ ವಿಭಾಗದಿಂದ ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದು, ಅವರದ್ದೆ ಸಿಂಡಿಕೇಟ್‌ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದರು.

 

ಶಿವಮೊಗ್ಗ : ಎಷ್ಟು ಮತಗಳು

ಆನಂದ.ಡಿ ಭದ್ರಾವತಿ 131
ಎಸ್.ಕುಮಾರ್ ಭದ್ರಾವತಿ 115
ಜಗದೀಶ್ ತ್ಯಾಜ್ಯವಳ್ಳಿ ಶಿವಮೊಗ್ಗ 47
ಕೆ.ಎಲ್.ಜಗದೀಶ್ವರ ಶಿವಮೊಗ್ಗ 105
ದಿನೇಶ್. ಹೆಚ್.ಬಿ ಶಿವಮೊಗ್ಗ 115

ಸಾಗರ ವಿಭಾಗ
ಅಭ್ಯರ್ಥಿ ತಾಲೂಕು ಪಡೆದ ಮತ

ಗಂಗಾಧರಪ್ಪ ಸೊರಬ 109
ದಯಾನಂದ ಸೊರಬ 124
ಭೂಕಾಂತ್ ಶಿಕಾರಿಪುರ 111
ಶಿವಶಂಕರಪ್ಪ ಶಿಕಾರಿಪುರ 16

ದಾವಣಗೆರೆ ವಿಭಾಗ

ಅಭ್ಯರ್ಥಿ ತಾಲೂಕು ಪಡೆದ ಮತ
ಅನಿಲ್ ಕುಮಾರ್ ಹೊನ್ನಾಳಿ 133
ಚೇತನ್ ಸೋಮಣ್ಣ ದಾವಣಗೆರೆ 211
ಜಗದೀಶಪ್ಪ ಬಣಕಾರ್ ಹರಿಹರ 182
ನಾಗರಾಜ್ ಕತ್ತಲಗೆರೆ ಚನ್ನಗಿರಿ 114
ಪಾಲಾಕ್ಷಪ್ಪ ದಾವಣಗೆರೆ 143
ಬಸಪ್ಪ ಚನ್ನಗಿರಿ 176
ಬಸವರಾಜಪ್ಪ ಹೊನ್ನಾಳಿ 164
ಹುನುಮನಹಳ್ಳಿ ಗೌಡ್ರು ಹೊನ್ನಾಳಿ 166
ಶಾಂತವೀರಪ್ಪ ಹರಿಹರ 92
ಸುರೇಶ್ ನ್ಯಾಮತಿ 38
—-

ಅಭ್ಯರ್ಥಿ ತಾಲೂಕು ಪಡೆದ ಮತ
ಕಾಂತರಾಜ್ ಹೊಸದುರ್ಗ 57
ತಿಪ್ಪೇಸ್ವಾಮಿ ಚಿತ್ರದುರ್ಗ 99
ಯಶವಂತರಾಜ ಹಿರಿಯೂರು 79
ರಾಮೇಶಪ್ಪ ಹೊಸದುರ್ಗ 56
ರವಿಕುಮಾರ್ ಹೊಸದುರ್ಗ 163
ರೇವಣಸಿದ್ದಪ್ಪ ಚಿತ್ರದುರ್ಗ 109
ವೀರಭದ್ರಬಾಬು ಚಳ್ಳಕೆರೆ 106
ಶಂಕರಲಿಂಗಪ್ಪ ಹೊಸದುರ್ಗ 42
ಶಿವಣ್ಣ ಹಿರಿಯೂರು 100
ಶಿವಾನಂದ ಹೊಳಲ್ಕೆರೆ 33
ಶೇಖರಪ್ಪ ಹೊಳಲ್ಕೆರೆ 106
ಸಂಜೀವಮೂರ್ತಿ ಚಳ್ಳಕೆರೆ 134

Share.
Leave A Reply

Exit mobile version