
ಬೆಂಗಳೂರು : ಸಿಲಿಕಾನ್ ಸಿಟಿ ಕ್ರೈಂ ಲೋಕದ ತಾಣವಾಗುತ್ತಿದ್ದು, ಬೆಂಗಳೂರು ಶಾಸಕ ಹ್ಯಾರಿಸ್ ನಿಕಟವರ್ತಿ, ಕಾಂಗ್ರೆಸ್ ನಾಯಕ ಮಧ್ಯರಾತ್ರಿ ಕೊಲೆಯಾಗಿದ್ದಾರೆ.
ಕಾಂಗ್ರೆಸ್ ನಾಯಕ ಹೈದರ್ ಆಲಿ ಕೊಲೆಯಾದವರಾಗಿದ್ದು, ಈ ಘಟನೆ ತೀವ್ರ ಕಳವಳ ಸೃಷ್ಟಿಸಿದೆ. ಅಶೋಕನಗರದ ಗರುಡ ಮಾಲ್ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಲೈವ್ ಬ್ಯಾಂಡ್ ಕಾರ್ಯಕ್ರಮವೊಂದರಿಂದ ಸ್ನೇಹಿತನ ಜೊತೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಹೈದರ್ ಅಲಿ ಎಂಬ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಹೈದರ್ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೈದರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಬೆಂಬಲಿಗರ ಹೈಡ್ರಾಮ
ಈ ಘಟನೆ ಬೌರಿಂಗ್ ಆಸ್ಪತ್ರೆ ಬಳಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಹೈದರ್ ಅವರ ಬೆಂಬಲಿಗರು ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಲಾಂಗು, ಮಚ್ಚು ಹಿಡಿದು ಝಳಪಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಶಾಸಕ ಎನ್.ಎ.ಹ್ಯಾರಿಸ್ ನಿಕಟವರ್ತಿ
ಶಾಸಕ ಎನ್.ಎ.ಹ್ಯಾರಿಸ್ ಅವರ ನಿಕಟವರ್ತಿಯಾಗಿದ್ದ ಹೈದರ್ ಅಲಿ, ಅವರ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.