ಬೆಂಗಳೂರು:ಸಾರಿಗೆ ಸಿಬ್ಬಂದಿಗಳ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈಗಾಗಲೇ ಸಾರಿಗೆ ಸಚಿವರು ನೌಕರರ ಸಂಘಟನೆಗಳೊಂದಿಗೆ ಅವರ ಬೇಡಿಕೆಗಳಿಗೆ ಸಂಬಂಧಿಸಿ ದಂತೆ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಗದುರಹಿತ ಆರೋಗ್ಯ ಸೇವೆಗೆ ಚಾಲನೆ ನೀಡಲಿದ್ದಾರೆ.

ಸಾರಿಗೆ ಸಂಸ್ಥೆ ಮತ್ತು ಬಸ್ಸುಗಳು ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10000 ಹೊಸ ನೇಮಕಾತಿಗಳು ಹಾಗೂ ಹತ್ತು ಹಲವು ಕಾರ್ಮಿಕ ಕಲ್ಯಾಣ ಉಪಕ್ರಮಗಳು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ಡಿ.7,2024ರಂದು ಸರಕಾರ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ. ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರವೇ ಗ್ಯಾರೆಂಟಿ ನೀಡಿ ರೂ.2000 ಕೋಟಿ ಲೋನ್ ನೀಡಿದೆ. ಆದರೆ ಸಚಿವರ ಆರೋಗ್ಯದ ಕಾರಣದಿಂದಾಗಿ ವೈಯಕ್ತಿಕವಾಗಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಈ ಎಲ್ಲಾ ವಿಷಯಗಳನ್ನು ಕಾರ್ಮಿಕ ಸಂಘಟನೆಗಳಿಗೆ ತಿಳಿಸಲು ವ್ಯವಸ್ಥಾಪಕ ನಿರ್ದೇಶಕರು ಕೆಸ್‌ಆರ್ ಟಿ ಸಿ ರವರಿಗೆ ಸೂಚಿಸಿದ್ದು, ಅದರಂತೆ ಅವರು ಸಭೆ ನಡೆಸಿ ಮಾಹಿತಿ ನೀಡಿದ್ದಾರೆ

Share.
Leave A Reply

Exit mobile version