ದಾವಣಗೆರೆ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ಗಳನ್ನ ತಗೊಂತಿದೆ. ಒಂದು ಕಡೆ ಹೆಚ್ಡಿ ರೇವಣ್ಣ ಈಗಾಗ್ಲೆ ಅರೆಸ್ಟ್ ಆಗಿದ್ರೆ ಪ್ರಜ್ವಲ್ ರೇವಣ್ಣ ಕೂಡ ಅರೆಸ್ಟ್ ಆಗೋ ಎಲ್ಲಾ ಸಾಧ್ಯತೆ ಇದೆ.. ಅಪ್ಪ ಮಕ್ಕಳಿಬ್ಬರಿಂದ ಜೆಡಿಎಸ್ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜ್ ಆಗಿದೆ. ಜೊತೆಗೆ ಪಕ್ಷದ ಶಾಸಕರು ಕೂಡ ಕಾಂಗ್ರೆಸ್ಗೆ ಹಾರೋಕೆ ಸಜ್ಜಾಗಿ ನಿಂತಿದ್ದಾರೆ. ಇದ್ರಿಂದ ಎಚ್ಚೆತ್ತ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಜ್ವಲ್ರನ್ನ ಪಕ್ಷದಿಂದ ಅಮಾನತು ಮಾಡಿದಂತೆ ಇದೀಗ ತಮ್ಮ ಅಣ್ಣ ಹೆಚ್ಡಿ ರೇವಣ್ಣ ಅವರನ್ನೂ ಪಕ್ಷದಿಂದ ಅಮಾನತು ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ. ಹಾಗಾದ್ರೆ ರಾತ್ರೋರಾತ್ರಿ HDK ಸೀಕ್ರೆಟ್ ಮೀಟಿಂಗ್ ಮಾಡಿದ್ದೇಕೆ..? ಇದು ಪಕ್ಷದ ನಿರ್ಧಾರವಾ..? ಇಲ್ಲ, HDK ಪರ್ಸನಲ್ ರಿವೇಂಜಾ.?
ಈಗಾಗ್ಲೇ ಅರೆಸ್ಟ್ ಆಗಿರೋ ಹೆಚ್ಡಿ ರೇವಣ್ಣ, ಮತ್ತೊಂದು ಕಡೆ ಅರೆಸ್ಟ್ ಆಗಲಿರೋ ಪ್ರಜ್ವಲ್ ರೇವಣ್ಣ ಈ ಇಬ್ಬರ ಪೆನ್ಡ್ರೈವ್ ಮತ್ತು ಕಿಡ್ನಾಪ್ ಪ್ರಕರಣಗಳು ರಾಜ್ಯ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾಯಿವೆ. ಇತ್ತ ದೋಸ್ತಿ ಪಕ್ಷ ಬಿಜೆಪಿ ಈ ಪ್ರಕರಣಗಳ ಬಗ್ಗೆ ಬಾಯ್ ಬಿಡೋಕೆ ಹಿಂದೆಮುಂದೆ ನೋಡ್ತಾಯಿದೆ. ಹೀಗಿದ್ರೂ ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಇದೇ ಮೇ 07ರಂದು ನಡೆಯಲಿದ್ದು, ಅಲ್ಲಿಯವರೆಗೂ ದೋಸ್ತಿ ಮುಂದುವರೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಆನಂತರ ನೀವು ಬೇಡ. ನಿಮ್ಮ ದೋಸ್ತಿ ಸಹವಾಸವೂ ಬೇಡ ಅಂತೇಳಿ ಜೆಡಿಎಸ್ನಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯೋಚಿಸಿದೆ ಎನ್ನಲಾಗುತ್ತಿದೆ.
ಆದ್ರೆ ಕುಮಾರಸ್ವಾಮಿ ಮಾತ್ರ ಬಿಜೆಪಿ ದೋಸ್ತಿಯನ್ನ ಉಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ರೇಪ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಅವರಿಗೆ ಈ ಮಾಹಿತಿ ಕೊಟ್ಟವರು ಯಾರು? ರಾಜ್ಯ ಸರ್ಕಾರ ಕೊಡ್ತಾ? ಈ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡಿರುವ ರಾಹುಲ್ಗೆ ಮೊದಲು ಎಸ್ಐಟಿಯಿಂದ ನೋಟಿಸ್ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈಗ ಬಿಡುಗಡೆಯಾಗಿರುವ ವಿಡಿಯೊಗಳಲ್ಲಿ ಪ್ರಜ್ವಲ್ ಮುಖ ಕಾಣುತ್ತಿಲ್ಲ. ಹಾಗಂತ ನಾನೇನು ಆ ವಿಡಿಯೊಗಳನ್ನು ನೋಡಿಲ್ಲ. ಇಷ್ಟಾದರೂ ಸಹಿಸಿಕೊಂಡಿದ್ದೇವೆ. ಕಾಂಗ್ರೆಸ್ನ ಮಹಾನಾಯಕ ತೋಟದಲ್ಲಿ ಏನೇನಾಗಿದೆ.? 6–7 ಜನರನ್ನು ಹೋಟೆಲ್ನಲ್ಲಿ ಇಟ್ಟೀದಿಯಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇತ್ತ ಜೆಡಿಎಸ್ ಪಕ್ಷದ ಮೇಲೆ ಹಿಡಿತ ಸಾಧಿಸೋಕೆ ಹೆಚ್ಡಿ ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದಾರೆ. ಕುಟುಂಬ ಪಕ್ಷವಾಗಿರೋ ಜೆಡಿಎಸ್ನಲ್ಲಿ ಕುಮಾರಸ್ವಾಮಿ ಕುಟುಂಬ ಮತ್ತು ರೇವಣ್ಣ ಕುಟುಂಬಗಳ ಮಧ್ಯೆ ಕೋಲ್ಡ್ ವಾರ್ ನಡೀತಾಯಿರೋದು ನಿಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಸದ್ಯ ಪೆನ್ಡ್ರೈವ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾಯಿದ್ದು, ಜೆಡಿಎಸ್ಗಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ನೆಪ ಮಾಡ್ಕೊಂಡು ಹೆಚ್ಡಿ ಕುಮಾರಸ್ವಾಮಿ ನಿನ್ನೆ ರಾತ್ರೋ ರಾತ್ರಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಈಗಾಗಲೇ ಪಕ್ಷದಿಂದ ಪ್ರಜ್ವಲ್ರನ್ನ ಅಮಾನತು ಮಾಡಿದಂತೆ ಈಗ ಹೆಚ್ಡಿ ರೇವಣ್ಣ ಅವರನ್ನೂ ಅಮಾನತು ಮಾಡಲು ನಿರ್ಧರಿಸಿದ್ದಾರೆ. ಇದು ಪಕ್ಷದ ನಿರ್ಧಾರ ಅಂತೇಳಿ ಕುಮಾರಸ್ವಾಮಿ ಏನೇ ಹೇಳಿದ್ರೂ ಕೆಲವರು ಇದು ಕುಮಾರಸ್ವಾಮಿ ಅವರ ಪರ್ಸನಲ್ ರಿವೇಂಜ್ ಅಂತ ವಾದಿಸುವವರೂ ಇದ್ದಾರೆ.
ಇನ್ನ ಜೆಡಿಎಸ್ ಒಳಗಿನ ಫ್ಯಾಮಿಲಿ ಪಾಲಿಟಿಕ್ಸ್ ನೋಡಿ ಬೇಸತ್ತು ಹೋಗಿರೋ ಜೆಡಿಎಸ್ನ ಸುಮಾರು 12 ಮಂದಿ ಶಾಸಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರೋಕೆ ತುದಿಗಾಲ ಮೇಲೆ ನಿಂತಿದ್ದಾರೆ ಅನ್ನೋ ಮಾತುಗಳೂ ಇವೆ. ಇದು ಹೆಚ್ಡಿ ಕುಮಾರಸ್ವಾಮಿಯವರಿಗೆ ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಆದ್ರೆ ಈ ಬಗ್ಗೆ ರಿಯಾಕ್ಟ್ ಮಾಡಿರೋ ಡಿಸಿಎಂ ಡಿಕೆಶಿ, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡೋದಿಲ್ಲ ಅಂತೇಳಿದ್ದಾರೆ. ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕೇವಲ ಪೆನ್ಡ್ರೈವ್ ಮತ್ತು ಗ್ಯಾರಂಟಿ ಅಸ್ತ್ರಗಳ ಮೂಲಕ ಕಾಂಗ್ರೆಸ್ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲೋ ರಣತಂತ್ರ ರೂಪಿಸಿದೆ.
ಹಾಗಾದ್ರೆ ಹೆಚ್ಡಿ ರೇವಣ್ಣ ಕಿಡ್ನಾಪ್ ಪ್ರಕರಣ ಮತ್ತು ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಗಳು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಮಲ ದಳ ಪಕ್ಷಗಳಿಗೆ ಭಾರೀ ಹಿನ್ನಡೆಯಾಗುವಂತೆ ಮಾಡುತ್ತಾ.? ಈ ಪ್ರಕರಣಗಳಿಂದ ಮುಜುಗರಕ್ಕೆ ಈಡಾಗಿರೋ ಜೆಡಿಎಸ್ನ 12 ಶಾಸಕರು ಕಾಂಗ್ರೆಸ್ ಸೇರ್ತಾರಾ.? ಮೇ 07ರ ನಂತರ ಬಿಜೆಪಿ ಜೆಡಿಎಸ್ನ ದೋಸ್ತಿಗೆ ಎಳ್ಳು ನೀರು ಬಿಡುತ್ತಾ..?