ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಲ್ಲಾ ಯೋಜನೆಗಳ ಅನುದಾನಕ್ಕೆ ಸರ್ಕಾರ ಕತ್ತರಿ ಹಾಕಿ ಆ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದರ ಮೂಲಕ ದಲಿತ, ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ದಲಿತ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ ಎಂದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ಅನುದಾನವನ್ನು ಸರ್ಕಾರದ ಖಜಾನೆಯಿಂದ ಖುಲ್ಲಂಖುಲ್ಲ ಖಾಸಗಿ ಕುಟುಂಬಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಸಚಿವ ನಾಗೇಂದ್ರ ಬಂಧನಕ್ಕೊಳಗಾಗಿ ತನಿಖೆ ಎದುರಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ಸದನದಲ್ಲಿ 187 ಕೋಟಿ ರೂ. ಅಲ್ಲ, 89 ಕೋಟಿ ರೂ. ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಮೈಸೂರಿನ ಮುಡಾದಿಂದ 14 ನಿವೇಶನಗಳನ್ನು ತನ್ನ ಪತ್ನಿ ಹೆಸರಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ ಪಡೆದಿದ್ದಾರೆ. ಅಲ್ಲದೇ, ರಾಜ್ಯದ ಎಸ್.ಸಿ., ಎಸ್.ಟಿ. ಅಭಿವೃದ್ಧಿ ಯೋಜನೆ, ವಿಶೇಷ ಯೋಜನೆ ಹಾಗೂ ಬುಡಕಟ್ಟು ಯೋಜನೆಗಳಿಂದ ಮೀಸಲಿಟ್ಟ 25,800 ಕೋಟಿ. ರೂ.ಗಳನ್ನು ಗ್ಯಾರಂಟಿಗಳಿಗಾಗಿ ಬಳಸಿಕೊಂಡಿದ್ದಾರೆ.
ಈ ಮೂರೂ ಹಗರಣಗಳು ದಲಿತ ಕೇಂದ್ರೀತ ಹಗರಣಗಳಾಗಿದ್ದು, ವಿಪಕ್ಷಗಳಿಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದೇ ಒಂದು ದಿನ ಮುಂಚಿತವಾಗಿ ಅಧಿವೇಶನ ಬರ್ಕಾಸ್ತು ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ಕ್ರಮವಾಗಿದೆ ಎಂದರು.
ವಿರೋಧ ಪಕ್ಷಗಳನ್ನು ಜನರು ಆರಿಸುವುದು ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಧ್ವನಿ ಎತ್ತುವುದಕ್ಕಾಗಿ. ಆದರೆ, ಈಗಿನ ಆಡಳಿತಾರೂಢ ಸರ್ಕಾರ ವಿಪಕ್ಷದ ಮೇಲೆಯೇ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡುವ ಸ್ಥಿತಿಗೆ ಬಂದಿದೆ. ವಿಪಕ್ಷಗಳು ದಲಿತರ ವಿಷಯ ಕೈಗೆತ್ತಿಕೊಂಡಾಗ ವಿಷಯವನ್ನು ಬೇರೆಡೆಗೆ ತಿರುಚುವ ಪ್ರಯತ್ನ ಮಾಡಲಾಗುತ್ತಿದೆ.
ಮೂರು ಜನ ಗಣ್ಯ ನಾಗರಿಕರು ರಾಜ್ಯಪಾಲರಿಗೆ ದೂರು ನೀಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದಾಗ ಮೇಲ್ನೋಟಕ್ಕೆ ಸತ್ಯಾಂಶ ಕಂಡು ಬಂದಿದ್ದರಿಂದ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ತನಿಖೆಯಾಗಲಿ, ಸತ್ಯ ಹೊರಗೆ ಬಂದು ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ. ಅಲ್ಲಿಯವರೆಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದರು.ಆದರೆ, ಕಾಂಗ್ರೆಸ್ ನವರು ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಬೆದರಿಕೆಯೊಡ್ಡುತ್ತಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯಪಾಲರೇ ಜವಾಬ್ದಾರಿ ಎಂದು ಗೂಂಡಾ ಪ್ರವೃತ್ತಿಯ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಾರೆ. ಶಾಸಕ ಐವನ್ ಡಿಸೋಜ ರಾಜ್ಯಪಾಲರಿಗೆ ಬಾಂಗ್ಲಾದೇಶದ ಪ್ರಧಾನಿಗೆ ಆದ ಗತಿಯೇ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ಸಚಿವ ಜಮೀರ್ ಅಹಮ್ಮದ್ ಖಾನ್ ಕೂಡ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಾರೆ. ಹಾಗಾಗಿ ಅವರ ಮೇಲೆ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾ ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ. ರಾಜ್ಯವ್ಯಾಪಿ ಹೋರಾಟಕ್ಕೆ ನಾಳೆಯಿಂದಲೇ ಕರೆ ನೀಡಿದೆ. ಸರ್ಕಾರ ಜಮೀರ್ ಅಹಮ್ಮದ್ ಖಾನ್ ಹಾಗೂ ಐವನ್ ಡಿಸೋಜ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಭಯೋತ್ಪಾದಕ ಕೃತ್ಯಕ್ಕೆ ಪ್ರಚೋದನೆ ಪ್ರಕರಣ ಕೂಡ ದಾಖಲಿಸಬೇಕು ಎಂದರು.
ಮುಡಾ ಹಗರಣದಲ್ಲಿ 1997ರಲ್ಲಿ ಪರಿಶಿಷ್ಟ ಜಾತಿಯವರಿಗೆ ಸೇರಿದ ಜಮೀನನ್ನು ಮುಡಾ ವಶಕ್ಕೆ ಪಡೆದಿತ್ತು ಕೂಡ ಅಕ್ರಮವಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಿದ್ದು, 2004 ರಲ್ಲಿ ಸಿದ್ಧರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ್ ಅವರಿಗೆ ಎಸ್ಸಿ ಜಮೀನು ನೀಡಿದ್ದು ಕೂಡ ಅಕ್ರಮವಾಗಿದೆ. ಈ ಬಗ್ಗೆ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಮೇಲಿನ ಮೂರು ಅಂಶಗಳನ್ನಿಟ್ಟುಕೊಂಡು ಇಂದಿನಿಂದ ಹೋರಾಟ ಮುಂದುವರೆಯಲಿದೆ. ಪರಿಶಿಷ್ಟ ವರ್ಗದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸಿರುವುದು ಹಾಗೂ ಅವರ ಪ್ರತಿಕೃತಿ ದಹನ ಮಾಡಿದ್ದು ಕೂಡ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದ್ದು, ರಾಜ್ಯಪಾಲರನ್ನು ನಿಂದಿಸಿದವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗುವುದು. ಅನೇಕ ದಲಿತ ಸಂಘಟನೆಗಳು ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಹೋರಾಟಕ್ಕೆ ಕೈ ಜೋಡಿಸಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಶಿವರಾಜ್, ಹರಿಕೃಷ್ಣ, ಕುಪೇಂದ್ರ, ಹರೀಶ್, ಸಂತೋಷ್, ಸಿ. ಮೂರ್ತಿ. ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.