ದಾವಣಗೆರೆ : ಯಾವುದೇ ಕ್ಷಣದಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ನ 2 ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗೋ ಸಾಧ್ಯತೆ ಇದೆ. ಆ ಪಟ್ಟಿಯಲ್ಲಿ ಬಿಜೆಪಿಯ ಕೆಲ ಹಾಲಿ ಸಂಸದರ ಹೆಸರೂ ಇರಲಿದೆ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಅದರಲ್ಲೂ ಆ ಓರ್ವ ಸಂಸದ ಇವತ್ತು ಬಿಜೆಪಿಗೆ ಗುಡ್ಬೈ ಹೇಳೋ ಎಲ್ಲ ಸಾಧ್ಯತೆ ಇದೆ. ಹಾಗಾದ್ರೆ ಯಾರು ಆ ಸಂಸದರು ಅಂದ್ರಾ?
ರಾಜ್ಯ ಬಿಜೆಪಿಗೆ ಒಂದಲ್ಲ, ಎರಡಲ್ಲ, ಸಾಲು ಸಾಲು ಬಂಡಾಯದ ಬಿಸಿ ತಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ. ಹಾವೇರಿಯಲ್ಲಿ ಟಿಕೆಟ್ ಕೈ ತಪ್ಪಿರೋ ಬಿಸಿ ಪಾಟೀಲ್ ಒಳ ಏಟು ಕೊಡೋ ಸಾಧ್ಯತೆ ಇದೆ. ತುಮಕೂರಿನಲ್ಲಿ ವಿ ಸೋಮಣ್ಣ ಅವರಿಗೆ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ತಿರುಗೇಟು ಕೊಡೋ ಸಾಧ್ಯತೆ ಇದೆ.. ಮತ್ತೊಂದು ಕಡೆ ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಸ್ವಪಕ್ಷದ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ. ಇವರು ಕೂಡ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆ ಇದೆ. ಇನ್ನ ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರ ವಿರುದ್ಧ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅಖಾಡಕ್ಕಿಳಿಯೋದು ಪಕ್ಕಾ ಆಗಿದೆ. ಇದೇ ರೀತಿ ದಾವಣಗೆರೆಯಲ್ಲಿ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ರೊಚ್ಚಿಗೆದ್ದಿದ್ದಾರೆ.. ಹೀಗೆ ರಾಜ್ಯದ ಒಟ್ಟು 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಪರಿಸ್ಥಿತಿ ಹೀಗಿರೋವಾಗ್ಲೇ ಇದೀಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿವಿ ಸದಾನಂದಗೌಡ್ರು ಕೂಡ BJP ವಿರುದ್ಧ ಸಿಡಿದೆದ್ದಿದ್ದಾರೆ. ಇವತ್ತು ಮನ್ ಕಿ ಬಾತ್ ತಿಳಿಸೋದಾಗಿ ಬಿಗ್ ಬಾಂಬ್ ಹಾಕಿದ್ದಾರೆ. ಅಷ್ಟೇ ಅಲ್ಲ, ಇವರು ತಮ್ಮ ಬಿಜೆಪಿ ಪಕ್ಷಕ್ಕೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ. ಅದಕ್ಕೆ ಡಿವಿ ಸದಾನಂದಗೌಡ್ರ ಈ ಮಾತುಗಳೇ ಸಾಕ್ಷಿ.
ಆದರೆ ಸದಾನಂದ ಗೌಡರ ಕೈ ಹಿಡಿಯಲು ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ ಎನ್ನಲಾಗುತ್ತಿದೆ. ಹೌದು ವೀಕ್ಷಕರೇ, ಸದಾನಂದ ಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷದ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಸದಾನಂದ ಗೌಡರ ಪಕ್ಷ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಭಿನ್ನ ಅಭಿಪ್ರಾಯಗಳಿವೆ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ.
ಲೋಕಸಭಾ ಚುನಾವಣೆಯ ಟಿಕೆಟ್ಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಳಿಕ ಮಾಜಿ ಸಿಎಂ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಡಿವಿ ಸದಾನಂದಗೌಡರೂ ಅಸಮಾಧಾನಗೊಂಡಿದ್ದು ಇಂದು ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ‘ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಈ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ಸದ್ಯದಲ್ಲೇ ನನ್ನ ಅಂತರಾಳದ ವಿಚಾರವನ್ನು ತಿಳಿಸುತ್ತೇನೆ’ ಎಂದು ಸದಾನಂದ ಗೌಡ ತಿಳಿಸಿರುವುದು ಕುತೂಹಲ ಮೂಡಿಸಿದೆ.
ನಿಮಗೆ ಗೊತ್ತಿರ್ಲಿ, ಸದಾನಂದ ಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಒಮ್ಮತ ಅಭಿಪ್ರಾಯ ಕಂಡು ಬಂದಿಲ್ಲ. ಮತ್ತೊಂದೆಡೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಸದಾನಂದ ಗೌಡಗೆ ನೀಡುವ ಬಗ್ಗೆ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ಆದರೆ, ಮೈಸೂರು ಕ್ಷೇತ್ರದ ಟಿಕೆಟ್ ನೀಡುವುದು ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಒಂದೊಮ್ಮೆ ಡಿವಿ ಸದಾನಂದಗೌಡ್ರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮೈಸೂರು ಟಿಕೆಟ್ ಬೇಡ ಅಂದ್ರೆ ಇವರು ಖಂಡಿತ ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಅಖಾಡಕ್ಕಿಳಿಯೋದು ಗ್ಯಾರಂಟಿ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಸದಾನಂದ ಗೌಡ ಹೆಸರು ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ಹಾಗಾದ್ರೆ ಕರ್ನಾಟಕದಲ್ಲಿ ಮೋದಿ ಅಲೆಯ ಮಧ್ಯೆ ಬಿಜೆಪಿ ನಾಯಕರ ಬಂಡಾಯ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುತ್ತಾ.? ಎಂದು ಕಾದು ನೋಡಬೇಕಿದೆ