ಭದ್ರಾವತಿ: ಶಿವಮೊಗ್ಗ ಲೋಕಸಭಾ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಎಸ್.ಕೆ.ಪ್ರಭು ರವರನ್ನು ಗೆಲ್ಲಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮನವಿ ಮಾಡಿದರು.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿರುವ ಭ್ರಷ್ಟ ಜೆಸಿಬಿ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗದೆ ಹಿಂದುಳಿದಿದೆ. ಪ್ರಾದೇಶಿಕ ಪಕ್ಷ ಎಂದಿದ್ದ ಜೆಡಿಎಸ್ ಬಿಜೆಪಿಯೊಡನೆ ಅಪವಿತ್ರ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ರಾಜ್ಯದಲ್ಲಿ ಉಳಿದಿರುವ ಏಕೈಕ ಪ್ರಾದೇಶಿಕ ಪಕ್ಷ ಕೆಆರ್ ಎಸ್ ಆಗಿರುವ ಉದ್ದೇಶದಿಂದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಇದುವರೆಗೂ ಜಿಲ್ಲೆಯಲ್ಲಿ ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ರವರ ಮಕ್ಕಳ ಕೈಯಲ್ಲಿ ಶಿವಮೊಗ್ಗ ಜಿಲ್ಲೆ ನಲುಗಿದೆ. ಯಡಿಯೂರಪ್ಪ ಮಕ್ಕಳಲ್ಲಿ ಓರ್ವ ಶಾಸಕ, ಇನ್ನೂರ್ವ ಎಂಪಿ ಯಾಗಿದ್ದರೆ, ಬಂಗಾರಪ್ಪ ಪುತ್ರ ಮಂತ್ರಿಯಾದರೆ ಇನ್ನೊಬ್ಬ ಪುತ್ರಿ ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಕುಟುಂಬ ರಾಜಕಾರಣದಿಂದ ಜಿಲ್ಲೆ ನಲುಗಿದೆ. ಇತ್ತ ಕಾರ್ಖಾನೆಗಳು ಅವನತಿಯತ್ತ ಸಾಗಿವೆ. ನಿರುದ್ಯೋಗದಿಂದ ಯುವಕರು ಗುಳೆ ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಜನರಿಗೆ ಚೊಂಬು, ಚಿಪ್ಪು ನೀಡುತ್ತಿರುವ ಭ್ರಷ್ಟಾಚಾರಿ ಪಕ್ಷಗಳ ಪೊಳ್ಳು ಭರವಸೆಗಳಿಗೆ ಮೋಸಹೋಗಬೇಡಿ, ಜನಪರ ಹೋರಾಟ ನಡೆಸುತ್ತಿರುವ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಎಸ್ ಕೆ ಪ್ರಭು ಅವರಿಗೆ ಮತ ನೀಡುವ ಮೂಲಕ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಎಸ್ ಕೆ ಪ್ರಭು, ರಾಜ್ಯ ಪ್ರಧಾನ ಕಾರ್ಯದರ್ಶಿ ಜೀವನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸೇರಿದಂತೆ ತೀರ್ಥಕುಮಾರ್ ಮತ್ತಿತರರಿದ್ದರು.