ದಾವಣಗೆರೆ: ಮನುಷ್ಯರಾದ ನಾವು ನಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾದ ಅತ್ಯವಶ್ಯ ವಸ್ತುಗಳನ್ನು ಸಂಗ್ರಹಿಸಿಡುವ ರೀತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ.ಎನ್.ಹೆಗಡೆ ಅಭಿಪ್ರಾಯಪಟ್ಟರು
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಭವನ ಸಮಿತಿ, ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆ ಇವರ ಸಹಯೋಗದಲ್ಲಿ ನಗರದ ಹದಡಿ ರಸ್ತೆಯಲ್ಲಿರುವ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಿಡ, ಮರ, ಹೂವು, ಪಕ್ಷಿ, ಪ್ರಾಣಿ, ಗಾಳಿ, ನೀರು, ಬೆಳಕು ಇವೆಲ್ಲವೂ ಪರಿಸರವಾಗಿವೆ. ಇವೆಲ್ಲವನ್ನೂ ನಾವು ಸಂರಕ್ಷಣೆ ಮಾಡಬೇಕಿದೆ. ಈ ಹಿಂದಿನ 10-15 ವರ್ಷಗಳ ಹಿಂದೆ ನಾವು ಈಗಿನಷ್ಟು ಬಿಸಿಲಿನ ತಾಪದ ಅನುಭವ ಕಂಡಿರಲಿಲ್ಲ. ಆದರೆ, ನಾವುಗಳು ಪರಿಸರ ನಾಶ ಮಾಡುತ್ತಿರುವ ಕಾರಣ ಹವಾಮಾನ ವೈಪರೀತ್ಯವಾಗಿದೆ. ಪ್ರಕೃತಿಯಲ್ಲಿ ಹಲವಾರು ಬದಲಾವಣೆ ಆಗಿವೆ ಎಂದು ಆತಂಕ ವ್ಯಕ್ತ ಪಡಿಸಿದರು.
ನಗರೀಕರಣದ ಹೆಸರಿನಲ್ಲಿ ಕಾಡು, ಮರಗಳನ್ನು ಕಡಿಯಲಾಗುತ್ತಿದೆ. ಕಾರಣ ಪರಿಸರ ರಕ್ಷಣೆ ಮಾಡುವ ಕುರಿತಂತೆ ಯುವಪೀಳಿಗೆ ಚಿಂತನೆ ನಡೆಸಬೇಕಿದೆ. ಅದರಲ್ಲೂ ಇಂದಿನ ಯುವಪೀಳಿಗೆಗೆ ಪರಿಸರದ ಬಗ್ಗೆ ತಿಳಿದೇ ಇರಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಪ್ಲಾಸ್ಟಿಕ್ ಬಳಕೆ, ನಮ್ಮ ಕರ್ತವ್ಯ ಅರಿತುಕೊಂಡರೆ ನಾವು ಪರಿಸರ ಸಂರಕ್ಷಣೆ ಮಾಡಬಹುದು. ಅದರಂತೆ ವಾಯುಮಾಲಿನ್ಯ ಕೂಡ ಪರಿಸರ ನಾಶಕ್ಕೆ ಕಾರಣವಾಗಿದೆ. ಶಬ್ದ ಮಾಲೀನ್ಯ ಕೂಡ ಪರಿಸರ ನಾಶಕ್ಕೆ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಾತನಾಡಿ, ಆಧುನಿಕತೆ ಹೆಚ್ಚಿದಂತೆ ಜನರಲ್ಲಿ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಮಾನವರಾದ ನಮಗೆ ಪರಿಸರ ಇಲ್ಲ ಎಂದರೆ ನಮಗೆ ಜೀವನವೇ ಇಲ್ಲದಂತಾಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಪ್ರತಿಯಲ್ಲಿ ನಾವುಗಳು ಪರಿಸರಕ್ಕೆ ವಿಷ ನೀಡುತ್ತಿದ್ದೇವೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಕಾಸದ ಹೆಸರಿನಲ್ಲಿ ವಿನಾಶದ ಕಡೆಗೆ ಹೋಗುತ್ತಿದ್ದೇವೆ. ಪರಿಸರ ಸಂರಕ್ಷಣೆಯಿAದ ನಾವೆಲ್ಲ ಬದುಕಲು ಸಾಧ್ಯ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಸಮೃದ್ದಿ, ಆರೋಗ್ಯಕರ ಜೀವನ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು.
ಎಂ.ಎA.ಶಿಕ್ಷಣ ಮಹಾವಿದ್ಯಾಲಯದ ಕಾಲೇಜಿನ ಸಲಹಾ ಸಮಿತಿ ಉಪಾಧ್ಯಕ್ಷ ಪ್ರೊ.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಡಾ.ಜೆ.ಬಿ.ರಾಜ್, ಎಂ.ಎA.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಟಿ.ನಾಗರಾಜನಾಯ್ಕ ಇತರರು ಇದ್ದರು.