ತೀರ್ಥಹಳ್ಳಿ: ಚುನಾವಣಾ ನೀತಿ ಸಂಹಿತೆಗೆ ವ್ಯತಿರಿಕ್ತವಾಗಿ ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಸಹಾಯಕ ಚುನಾವಣಾಧಿಕಾರಿ ಹಾಗೂ ಡಿವೈಎಸ್‌ಪಿ ರವರಿಗೆ ದೂರು ನೀಡಿದರು.
ರಾಜ್ಯ ಮಟ್ಟದ ಪತ್ರಿಕೆಯ ಇಂದಿನ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ವರದಿ ಹಾಗೂ ಅದರಲ್ಲಿನ ಹೇಳಿಕೆಯನ್ನು ನಮೂದಿಸಿ “ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮವರಿಗೆ ಕೊಡುತ್ತೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಇದು ಕೋಮು ಭಾವನೆ ಕೆರಳಿಸುವ ಹೇಳಿಕೆ. ರಾಜ್ಯದ ಶಾಂತಿ, ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಧರ್ಮಗಳ ನಡುವೆ ದ್ವೇಷ ಹರಡಿ ಮತ ಗಳಿಸುವ ವ್ಯವಸ್ಥಿತ ಒಳ ಸಂಚು ಇದು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ.
ಹೇಳಿಕೆಯು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಪ್ರಧಾನಿಯವರ ಗೌಪ್ಯ ಪ್ರಮಾಣವಚನ ಮತ್ತು ಸಂಸತ್ ಸದಸ್ಯರ ಪ್ರಮಾಣವಚನಕ್ಕೆ ವಿರೋಧವಾಗಿರುತ್ತದೆ. ಭಾರತೀಯ ದಂಡ ಸಂಹಿತೆಯ ಅನ್ವಯ ಸದರಿ ಹೇಳಿಕೆ ಅಪರಾಧವಾಗಿರುವುದರಿಂದ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಈ ಮೂಲಕ ಆಗ್ರಹಿಸುತ್ತೇನೆ ಎಂದು ಕಿಮ್ಮನೆ ರತ್ನಾಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.