ದಾವಣಗೆರೆ : ದಾವಣಗೆರೆಯಲ್ಲಿ ಸದ್ಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ ಆಕ್ರೋಶಗೊಂಡಿರುವ ಶಾಸಕ ಶಿವಗಂಗಾ ಬಸವರಾಜ್ ಮಾತುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಜನರು ನಾನಾ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ…ಹಾಗಾದ್ರೆ ಅದರ ಸಂಪೂರ್ಣ ಡಿಟೇಲ್ಸ್ ನಿಮ್ಮ ಮುಂದೆ…

ಡಿಸಿಸಿ ಬ್ಯಾಂಕ್ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇದು ಒಂದು…ಇಲ್ಲಿ ರೈತರ ಶ್ರೇಯೋಭಿವೃದ್ಧಿಗಿಂತ ರಾಜಕಾರಣವೇ ಜೋರಾಗಿ ಇರುತ್ತದೆ..‌.ಅದರಲ್ಲೂ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಬಿಜೆಪಿ-ಕಾಂಗ್ರೆಸ್ ನಡುವೆ ನೇರಾಹಣಾಹಣಿ ನಡೆದಿತ್ತು..ಅದರಲ್ಲಿಯೂ ಚನ್ನಗಿರಿ ಕ್ಷೇತ್ರ ಡಿಸಿಸಿ ಬ್ಯಾಂಕ್ ಚುನಾವಣೆಗೆ ಹಾಟ್ ಸ್ಪಾಟ್ ಆಗಿತ್ತು…ಅದಕ್ಕೆ ಕಾರಣವೂ ಇತ್ತು…

ಬಿಜೆಪಿ ಬೆಂಬಲಿತ ಸ್ವಾಮಿ, ಶಾಸಕ ಶಿವಗಂಗಾ ಬಸವರಾಜ್ ಬೆಂಬಲಿತ ದೀಪಕ್ ನಡುವೆ ನೇರಹಣಾಹಣಿ ಇತ್ತು. ಸ್ವಾಮಿ ಪರ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ನಿಂತರೇ ದೀಪಕ್ ಪರ ಹಾಲಿ ಶಾಸಕ ಶಿವಗಂಗಾ ಬಸವರಾಜ್ ನಿಂತಿದ್ದರು..ಅಲ್ಲದೇ ಶಾಸಕ ಶಾಂತನಗೌಡ ಕೂಡ ಶಿವಗಂಗಾ ಬಸವರಾಜ್ ಬೆಂಬಲಕ್ಕೆ ನಿಂತಿದ್ದರು. ಈ ನಡುವೆ  ಚನ್ನಗಿರಿ ವಿಧಾನಸಭಾ ಚುನಾವಣೆಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಶಿವಗಂಗಾ ಬಸವರಾಜ್ ನಡುವೆ ನೇರ ಹಣಾಹಣಿ ಇತ್ತು‌‌..ಅಂತಿಮವಾಗಿ ಶಿವಗಂಗಾ ಬಸವರಾಜ್ ಗೆದ್ದರು. ಅಲ್ಲಿಂದ ಬಿಜೆಪಿಯ ಮಾಡಾಳ್ ಮಲ್ಲಿಕಾರ್ಜುನ್, ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ ನಡುವೆ ರಾಜಕೀಯ ದ್ವೇಷ ಉಂಟಾಯಿತು. ಅದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪೋಟಗೊಂಡಿತು.

ಮಾಡಾಳ್ ಮಲ್ಲಿಕಾರ್ಜುನ್ ಪಟ್ಟ ಶಿಷ್ಯ ಸ್ವಾಮಿಗೆ ಮುಂದುವರೆದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನ..ಯಾಕಾಗಿ?

ಬಿಜೆಪಿಯ ಮಾಡಾಳ್ ಮಲ್ಲಿಕಾರ್ಜುನ್ ಪಟ್ಟ ಶಿಷ್ಯ ಸ್ವಾಮಿಯಾಗಿದ್ದು, ಚನ್ನಗಿರಿಯಲ್ಲಿ ತಮ್ಮದೇ ವರ್ಚಸ್ಸು ಇದೆ. ಸದ್ಯ ಮಾಜಿ ಶಾಸಕ ರೇಣುಕಾಚಾರ್ಯ ಜತೆ ಗುರುತಿಸಿಕೊಂಡಿದ್ದಾರೆ. ರೇಣುಕಾಚಾರ್ಯ ಕೂಡ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜತೆ ಚೆನ್ನಾಗಿದ್ದಾರೆ.  ಇದನ್ನು ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ವಾಮಿ ಎನ್ ಕ್ಯಾಚ್ ಮಾಡಿಕೊಂಡು ಮಾಡಾಳ್ ಮಲ್ಲಿಕಾರ್ಜುನ್ ಮೂಲಕ ಮಾಜಿ ಶಾಸಕ ರೇಣುಕಾಚಾರ್ಯರನ್ನು ಬಳಸಿಕೊಂಡು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ಒತ್ತಡ ತಂದು ಹಾಲಿ ನಿರ್ದೇಶಕ ಸ್ವಾಮಿಯನ್ನು ಅಪೆಕ್ಸ್ ಬ್ಯಾಂಕ್ ಗೆ ಮುಂದುವರಿಸಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದು  ಶಾಸಕ ಶಿವಗಂಗಾ ಬಸವರಾಜ್  ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸೋಲು, ಸ್ವಾಮಿ ಗೆಲುವು

ಡಿಸಿಸಿ ಬ್ಯಾಂಕ್ ನಿರ್ದೇಶಕ  ಚುನಾವಣೆ ಈ ಬಾರಿ ಜೋರಾಗಿದ್ದು, ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಶಾಸಕ ಶಿವಗಂಗಾ ಬಸವರಾಜ್ ಬೆಂಬಲಿತರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಬ್ಬರು ಸಹ ಚುನಾವಣೆ ನಡೆಯುವ ಸಂದರ್ಭದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಒಂದಿಷ್ಟು ವಾಗ್ವಾದ ಕೂಡ ಆಗಿತ್ತು. ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೀಪಕ್ ಗೆ ಕೇವಲ ಐದು ಮತಗಳು ಬಿದ್ದರೇ ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿತ ಸ್ವಾಮಿಗೆ 17 ಮತಗಳು ಬಿದ್ದಿದ್ದವು. ಅಂತಿಮವಾಗಿ ಸ್ವಾಮಿ ಗೆಲುವು ಸಾಧಿಸಿದರು.ಅಲ್ಲದೇ ಡಿಸಿಸಿ ಬ್ಯಾಂಕ್ ಚುನಾವಣೆ ಸಂಪೂರ್ಣ ನೇತೃತ್ವ ವಹಿಸಿದ್ದು ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದು ಯಾಕೆ ಎಂಬುದಕ್ಕೆ ನಾನಾ ಉತ್ತರಗಳು ಬಂದವು.

ಆಡಳಿತಮಂಡಳಿ ಕಾಂಗ್ರೆಸ್ ನದ್ದೇ ಇದ್ದರೂ, ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಮುಂದುವರೆದ ಬಿಜೆಪಿ ಬೆಂಬಲಿತ ಸ್ವಾಮಿ

ಸದ್ಯ ದಾವಣಗೆರೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಕಾಂಗ್ರೆಸ್ ಹಿಡಿತದಲ್ಲಿದೆ. ಸರಕಾರವೂ ಕಾಂಗ್ರೆಸ್ ನದ್ದೇ ಇದೆ. ಆದರೂ ಬಿಜೆಪಿ ಸ್ವಾಮಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಮುಂದುವರೆದಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಸ್ವಾಮಿಯನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರಕಾರವಿದ್ದು ಜಿಲ್ಲೆಯ ಡಿಸಿಸಿ ಬ್ಯಾಂಕ್ ನಿಂದ  ಒಬ್ಬರನ್ನು ನಾಮ ನಿರ್ದೇಶನ ಮಾಡಿ ಅಪೆಕ್ಸ್ ಬ್ಯಾಂಕ್ ಗೆ  ಶಿಫಾರಸ್ಸು ಮಾಡಬೇಕು. ನಂತರ ಸರಕಾರ ಅದನ್ನು ಅನೋಮೋದಿಸುತ್ತದೆ. ಇದರ ಸಂಪೂರ್ಣ ಅಧಿಕಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರುತ್ತದೆ. ಆದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್ ನ ಯಾವ ಸದಸ್ಯರನ್ನು ನಾಮ ನಿರ್ದೇಶನ ಮಾಡಿಲ್ಲ…ಬದಲಾಗಿ ಬಿಜೆಪಿ ಬೆಂಬಲಿತ ಸ್ವಾಮಿ ಮುಂದುವರೆದಿದ್ದಾರೆ. ಅಲ್ಲದೇ ಇದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಶಾಸಕ ಶಿವಗಂಗಾ ಬಸವರಾಜ್ ಮಾತುಗಳು ಪೂರಕವಾಗಿದೆ.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದರೂ, ಸ್ವಾಮಿ ಮುಂದುವರಿಕೆ

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಲು ಕಾಂಗ್ರೆಸ್ ನಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಆದರೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸ್ವಾಮಿ ಮುಂದುವರಿದಿರುವುದು ಕಾಂಗ್ರೆಸ್ ನಿರ್ದೇಶಕರಿಗೆ ಒಂದಿಷ್ಟು ಇರಿಸು ಮುರಿಸು ಆಗಿದೆ. ಈ ನಡುವೆ ಸಚಿವ ಎಸ್.ಎಸ್.ಎಂ ಕೂಡ ಮೌನವಹಿಸಿರುವುದು ಇತರರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೇ ಏನು ಮಾಡದ ಸ್ಥಿತಿಯಲ್ಲಿ ಇದ್ದಾರೆ.. ಅಂತಿಮವಾಗಿ ಶಾಸಕ ಶಿವಗಂಗಾ ಬಸವರಾಜ್ ಈ ಬಗ್ಗೆ ಮಾತನಾಡಿದ್ದಾರೆ.

ಯಾರು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳು

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸದ್ಯ ಹಿರಿಯ ಮುತ್ಸದ್ದಿ ಜೆ.ಆರ್.ಷಣ್ಮುಖಪ್ಪ, ಎಚ್.ಕೆ.ಬಸಪ್ಪ, ವೇಣುಗೋಪಾಲ ರೆಡ್ಡಿ, ಮುದೇಗೌಡ್ರು ಗಿರೀಶ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳಿದ್ದು, ಇವರಲ್ಲೊಬ್ಬರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಬಹುದಾಗಿದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಗ್ಗೆ ಗಮನಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಹೊನ್ನಾಳಿ ಶಾಸಕ ಪುತ್ರ ಸುರೇಂದ್ರ ಪರವಹಿಸಿದ ಶಾಸಕ ಶಿವಗಂಗಾ ಬಸವರಾಜ್ ಸ್ವ ಕ್ಷೇತ್ರದ ಇಬ್ಬರನ್ನು ಯಾಕೆ ಪರಿಗಣಿಸಲಿಲ್ಲ?

ಬೆಳಗಾವಿಯಲ್ಲಿ  ಮಾತನಾಡಿದ ಶಿವಗಂಗಾ  ಚನ್ನಗಿರಿಯಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಲು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಕಾರಣ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಸೋಲು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮವರಿಂದಲೇ ಸೋತರೆ ನಮಗೆ ಹೇಗಾಗಬೇಡ ಎಂದು ಕಿಡಿಕಾರಿದ್ದಾರೆ. ಅಪೆಕ್ಸ್ ಬ್ಯಾಂಕ್ ನಲ್ಲಿ ಸ್ವಾಮಿ ಎಂಬಾತ ಇದ್ದ. ಆತನನ್ನು ಮುಂದುವರಿಸಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ನಲ್ಲಿ ಗಂಡಸರು ಇಲ್ವಾ? ಅಪೆಕ್ಸ್ ಬ್ಯಾಂಕ್ ಹೋಗುವಂಥ ಗಂಡಸರು  ಕಾಂಗ್ರೆಸ್ ನಲ್ಲಿ ಇಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದರು.ಅಲ್ಲದೇ ಕಾಂಗ್ರೆಸ್ ಶಾಸಕ ಶಾಂತನಗೌಡ ಪುತ್ರ, ಹಾಲಿ ನಿರ್ದೇಶಕ ಸುರೇಂದ್ರರನ್ನು ಶಾಸಕ ಶಿವಗಂಗಾ ಬಸವರಾಜ್ ಶಿಫಾರಸ್ಸು ಮಾಡಿದ್ದು, ಸ್ವ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಎಚ್ .ಕೆ.ಬಸಪ್ಪ, ಸಂತೋಷ ಇದ್ದು, ಅವರನ್ನು ಬಿಟ್ಟು ಹೊನ್ನಾಳಿ ಶಾಸಕ ಶಾಂತನಗೌಡ ಪುತ್ರ ಸುರೇಂದ್ರರನ್ನು ಶಿಫಾರಸ್ಸು ಮಾಡಿರುವುದು ಕೂಡ ನಾನಾ ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಾರೆ ಡಿಸಿಸಿ ಬ್ಯಾಂಕ್ ಪಡಸಾಲೆಯಲ್ಲಿ ನಾನಾ ಚರ್ಚೆಗಳು ಆಗುತ್ತಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.

Share.
Leave A Reply

Exit mobile version