ದಾವಣಗೆರೆ : ಸಿಟ್ಟು, ಆಕ್ರೋಶ, ಕಡು ಕೋಪ.. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಇವೆಲ್ಲವನ್ನೂ ಒಟ್ಟೊಟ್ಟಿಗೆ ಹೊರ ಹಾಕ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಬಿಎಸ್‌ವೈ ಪುತ್ರ ಬಿವೈ ರಾಘವೇಂದ್ರ ಬಳಸಿದ ಸ್ಮಾರ್ಟ್ ಸ್ಟ್ರಾಟಜಿಯ ಬಗ್ಗೆ ಕೆಂಡಾ ಕಾರುತ್ತಿದ್ದಾರೆ. ಅಷ್ಟೇ ಅಲ್ಲ., ‘ಚುನಾವಣೆಯ ನಂತ್ರ ಹೊಸ ಪಕ್ಷ ಕಟ್ಟಲು ನಾನು ಬಿಎಸ್‌ವೈ ಅಲ್ಲ’ ಅಂತೇಳಿ ಗುಡುಗಿದ್ದಾರೆ. ಹಾಗಾದ್ರೆ ಬಿವೈ ರಾಘವೇಂದ್ರ ಬಳಸಿದ್ದಾರೆ ಎನ್ನಲಾದ ಸ್ಟ್ರಾಟಜಿಯಿಂದ ಶಿವಮೊಗ್ಗದಲ್ಲಿ ಈಶ್ವರಪ್ಪನವರಿಗೆ ಸೋಲಾಗುತ್ತಾ.? ಈಶ್ವರಪ್ಪನವರ ಹೋರಾಟಕ್ಕೆ ಗೆಲುವು ಸಿಗುತ್ತಾ.? ಅಷ್ಟಕ್ಕೂ ಮೇ 07ರಂದು ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಳಸಿದ ಆ ಸ್ಟ್ರಾಟಜಿ ಏನ್ ಗೊತ್ತಾ.?
ಒಂದು ಚುನಾವಣೆ ಗೆಲ್ಲೋಕೆ ಬಿಜೆಪಿ ನಾಯಕರು ಬಳಸೋದು ತಂತ್ರ, ಪ್ರತಿತಂತ್ರ, ರಣತಂತ್ರಗಳನ್ನಲ್ಲ. ಬದಲಿಗೆ ಕುತಂತ್ರಗಳನ್ನ. ಎದುರಾಳಿ ಅಭ್ಯರ್ಥಿಗಳ ಬಗ್ಗೆ ಪುಗಸಟ್ಟೆ ಆರೋಪಗಳು, ಸುಳ್ಳು-ಪೊಳ್ಳು ತಿರುಚಿದಂತಾ ಹೇಳಿಕೆಗಳು, ಕೊನೆ ಕ್ಷಣದಲ್ಲಿ ಮತದಾರರನ್ನ ಯಾಮಾರಿಸೋವಂತಾ ಮಾತುಗಳು ಅನ್ನೋ ವಿಷ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗ್ತಾಯಿವೆ. ಹಿಂದೂ ಮುಸ್ಲಿಂರ ಮಧ್ಯೆ ವೈಮನಸ್ಸನ್ನ ಹುಟ್ಟುಹಾಕೋದು.
ಸಿದ್ದರಾಮಯ್ಯನವರ ಅರ್ಧಂಬರ್ಧ ಹೇಳಿಕೆಗಳನ್ನ ಬಿಜೆಪಿಗೆ ಪ್ಲಸ್ ಆಗೋ ರೀತಿ ವೈರಲ್ ಮಾಡೋದು ಬಿಜೆಪಿಗರ ಸಾಮಾನ್ಯ ಸ್ಟ್ರಾಟಜಿ ಆಗಿತ್ತು. ಆದ್ರೆ ಕಳೆದ ಮೇ 07ರಂದು ಶಿವಮೊಗ್ಗ ಲೋಕಸಭಾ ಚುನಾವಣೆಗೂ ಮೊದ್ಲು ಈಶ್ವರಪ್ಪನವರ ಹಳೆ ವಿಡಿಯೋವನ್ನ ವೈರಲ್ ಮಾಡಿಸಿ ಬಿಜೆಪಿ ಲಾಭ ಗಿಟ್ಟಿಸಿಕೊಂಡಿದೆ ಅಂತೇಳಿ ಖುದ್ದು ಕೆ.ಎಸ್ ಈಶ್ವರಪ್ಪನವರೇ ಗರಂ ಆಗಿದ್ದಾರೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ಕೆ.ಎಸ್ ಈಶ್ವರಪ್ಪ, ಬಿಜೆಪಿಯ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿವೈ ರಾಘವೇಂದ್ರ ಮತದಾನದ ದಿನ ಕೊನೇ ಗಳಿಗೆಯಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರದ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಅಂತೇಳಿ ಒತ್ತಾಯಿಸಿದ್ದಾರೆ.
ಯಾವುದೇ ಪತ್ರಿಕೆಯ ಹೆಸರಿಲ್ಲದೆ, ಸುದ್ದಿ ರೂಪದಲ್ಲಿ ಪ್ರಕಟವಾಗಿರುವ ನಕಲಿ ಸುದ್ದಿಗಳನ್ನು ಒಳಗೊಂಡ ಪೆನ್ ಡ್ರೈವ್ ಅನ್ನು ಬಿಡುಗಡೆ ಮಾಡಿದರು. ಇದರಲ್ಲಿ ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ರೀತಿ ಬಿಂಬಿಸಲಾಗಿದೆ. ರಾಘವೇಂದ್ರ ಅವರು ಶಿಕಾರಿಪುರದಲ್ಲಿ ಸಾರ್ವಜನಿಕ ಸಭೆ ಆಯೋಜಿಸದಂತೆ ತಡೆದಿದ್ದು, ಶಿರಾಳಕೊಪ್ಪದ ರಾಷ್ಟ್ರಭಕ್ತರ ಬಳಗದ ಕಚೇರಿಯಲ್ಲಿ ಮಾಂತ್ರಿಕ ಕೃತ್ಯವೆಸಗಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
‘ನನ್ನ ಪರವಾಗಿ ಬಿಜೆಪಿಗೆ ವೋಟ್ ಕೊಡಿ, ಈಶ್ವರಪ್ಪ’, ‘ನನಗೆ ನನ್ನ ತಪ್ಪಿನ ಅರಿವಾಗಿದೆ, ಕಾಂಗ್ರೆಸ್ಸಿಗೆ ಲಾಭವಾಗುವುದು ಬೇಡ ಅನ್ನೋ ರೀತಿಯ ಶೀರ್ಷಿಕೆಯಲ್ಲಿ ಹಳೆಯ ಫೋಟೋಗಳನ್ನು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿರುವಂತೆ ಮಾಡಲಾಗಿದೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿವೈ ರಾಘವೇಂದ್ರ ಅವರ ಪರ ಪ್ರಚಾರ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗುವಂತೆ ಮಾಡಲಾಗಿದೆ ಅಂತೇಳಿ ಕಳೆದ 3 ದಿನಗಳಿಂದ ಈಶ್ವರಪ್ಪ ತಮ್ಮ ಆಸಮಾಧಾನವನ್ನ ಹೊರ ಹಾಕ್ತಾನೇ ಇದ್ದಾರೆ. ಆದ್ರೆ ಸುದ್ದಿ ಮಾಧ್ಯಮಗಳು ಮಾತ್ರ ಹೇಳಿಕೆಯನ್ನ ಗಂಭೀರವಾಗಿ ತಗೊಂತಿಲ್ಲ.
ಇದ್ರಿಂದ ಈಶ್ವರಪ್ಪ ಮತ್ತಷ್ಟು ರೊಚ್ಚಿಗೆದ್ದಿದ್ದು, ಮತದಾನದ ದಿನದಂದು ವೈರಲ್ ಆಗಿರುವ ಸುಳ್ಳು ಸುದ್ದಿ ಮತ್ತು ವಿಡಿಯೋಗಳನ್ನು ತಯಾರಿಸಿ ಹರಿಬಿಟ್ಟಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಸಮಸ್ಯೆಯು ಕೆಲವು ಮತದಾರರನ್ನು ಗೊಂದಲಕ್ಕೀಡುಮಾಡಿದೆ ಮತ್ತು ಅನೇಕರು ನನ್ನ ಪರವಾಗಿ ತಮ್ಮ ಮತಗಳನ್ನು ಚಲಾಯಿಸುವುದನ್ನು ತಡೆದಿದೆ ಅಂತೇಳಿ ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮೇ 15ರವರೆಗೆ ಕಾಲಾವಕಾಶ ನೀಡುವುದಾಗಿ ತಿಳಿಸಿದ ಈಶ್ವರಪ್ಪ, ತಪ್ಪಿದ್ದಲ್ಲಿ ಮುಂದಿನ ಹಾದಿಯ ಬಗ್ಗೆ ತೀರ್ಮಾನಿಸಬೇಕಾಗುತ್ತೆ ಅಂತೇಳಿ ಗುಡುಗಿದ್ದಾರೆ. ಆದ್ರೆ ಈಶ್ವರಪ್ಪ ಮುಂದಿನ ಹಾದಿ ಅಂದ್ರೆ ಏನು.? ಹೊಸ ಪಕ್ಷ ಕಟ್ತಾರಾ ಅನ್ನೋ ಅನುಮಾನ ನಿಮ್ಮನ್ನ ಕಾಡಬಹುದು. ಆದ್ರೆ ಈಶ್ವರಪ್ಪ ನಾನು ಬಿಎಸ್‌ವೈ ರೀತಿ ಚುನಾವಣೆಯ ನಂತರ ಹೊಸ ಪಕ್ಷ ಕಟ್ಟಲ್ಲ. ‘ಬಿಜೆಪಿ ನನ್ನ ತಾಯಿ ಇದ್ದಂತೆ, ನಾನು ಪಕ್ಷದ ಜೊತೆ ಇರುತ್ತೇನೆ. ಚುನಾವಣಾ ಫಲಿತಾಂಶದ ನಂತರ ಹೊಸ ಪಕ್ಷ ಕಟ್ಟಲು ನಾನು ಬಿಎಸ್ ಯಡಿಯೂರಪ್ಪ ಅಲ್ಲ. ಬಿಜೆಪಿಯ ಹಿಂದುತ್ವ ಸಿದ್ಧಾಂತವನ್ನು ರಕ್ಷಿಸುವುದು ನನ್ನ ಏಕೈಕ ಗುರಿಯಾಗಿದೆ ಅಂತೇಳಿದ್ದಾರೆ.
ಈಶ್ವರಪ್ಪನವರ ಮಾತುಗಳನ್ನ ನೋಡಿದ್ರೆ ಇವರು ಈ ಸಲದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲೋದು ಗ್ಯಾರಂಟಿ. ಜೊತೆಗೆ ಇವರು ಸೋತ್ರೂ ಬಿಎಸ್‌ವೈ ಕುಟುಂಬದ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲ್ಲ ಅನ್ನೋ ಮಾತುಗಳು ಕೇಳಿ ಬರ್ತಾಯಿವೆ. ಹಾಗಾದ್ರೆ ಈಶ್ವರಪ್ಪನವರನ್ನ ಬಿಎಸ್‌ವೈ ಫ್ಯಾಮಿಲಿ ಚುನಾವಣಾ ಕಣದಲ್ಲಿ ಹರಕೆಯ ಕುರಿಯನ್ನಾಗಿ ಮಾಡ್ತಾ.? ಸಿಂಪಲ್ಲಾಗಿ ಯಾಮಾರಿಸಿದ್ರಾ.?